ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನ ಉಂಟಾಗಿದೆ. ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ.2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಗ್ರಾಮ ಸೇರಿದಂತೆ ಕೆಲವೆಡೆ ಬುಧವಾರ ಬೆಳಿಗ್ಗೆ 10.50 ರ ಸುಮಾರಿನಲ್ಲಿ
ಭೂಮಿ ಕಂಪಿಸಿದೆ. ಮದೆ ಗ್ರಾಮಪಂಚಾಯಿತಿಯಲ್ಲಿ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ದೂರದಲ್ಲಿತ್ತು ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಮದೆ ಗ್ರಾಮ ಪಂಚಾಯ್ತಿ ಮತ್ತು ಗಾಳಿಬೀಡು ಗ್ರಾಮ ಪಂಚಾಯ್ತಿಗೆ ಒಳಪಟ್ಟ ಮೊಣ್ಣಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಭೂ ಕಂಪನದ ಅನುಭವವಾಗಿದೆ. ಲಘು ಭೂಕಂಪನವಾಗಿರುವುದರಿಂದ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲವೆಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ(ಕೆಎಸ್ಎನ್ಡಿಎಂಸಿ) ತಿಳಿಸಿದೆ.ಮದೆನಾಡು, ಮೊಣ್ಣಂಗೇರಿ, ಜೋಡುಪಾಲ, ದೇವಸ್ತೂರು ಮತ್ತು ಮಡಿಕೇರಿ ನಗರದ ಒಂದೆರಡು ಭಾಗದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿಕೊಂಡಿದ್ದಾರೆ.