ಮುಂಬೈ:ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಐಪಿಎಲ್ಗೆ ಗುಡ್ ಬೈ ಹೇಳಿದ್ದ ದಿನೇಶ್ ಕಾರ್ತಿಕ್ ತಮ್ಮ ಹುಟ್ಟು ಹಬ್ಬದಂತೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 2004 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಕಾಲಿಟ್ಟಿದ ದಿನೇಶ್ ಕಾರ್ತಿಕ್ ಅವರ ಸುಮಾರು
20 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣಕ್ಕೆ ಇಂದು ಫುಲ್ ಸ್ಟಾಪ್ ಬಿದ್ದಿದೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ದಿನೇಶ್ ಕಾರ್ತಿಕ್ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಬಾಲ್ಯದಿಂದ ವೃತ್ತಿಜೀವನದ ಅಂತ್ಯದವರೆಗಿನ ಫೋಟೋಗಳನ್ನು ಹಂಚಿಕೊಂಡಿರುವ ಕಾರ್ತಿಕ್, ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ದಿನೇಶ್ ಕಾರ್ತಿಕ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ, ಅವರು 167 ಪ್ರಥಮ ದರ್ಜೆ ಪಂದ್ಯಗಳನ್ನು, 260 ಲಿಸ್ಟ್ ಎ ಮತ್ತು 401 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಾರ್ತಿಕ್ ಟೆಸ್ಟ್ ನಲ್ಲಿ 1025 ರನ್, ಏಕದಿನದಲ್ಲಿ 1752 ರನ್, ಟಿ20ಯಲ್ಲಿ 686 ರನ್ ಕಲೆಹಾಕಿದ್ದಾರೆ. ಹಾಗೆಯೇ ತನ್ನ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 28 ಶತಕ ಮತ್ತು ಲಿಸ್ಟ್ ಎ ಮಾದರಿಯಲ್ಲಿ 12 ಶತಕಗಳನ್ನು ಬಾರಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಶತಕ ಸಿಡಿಸಿದ್ದಾರೆ. 2007 ರಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ನ ಮೊದಲ ಆವೃತ್ತಿಯನ್ನು ಗೆದ್ದಾಗ ಕಾರ್ತಿಕ್ ಕೂಡ ಆ ತಂಡದ ಭಾಗವಾಗಿದ್ದರು.