ಹ್ಯೂಸ್ಟನ್: ಪೋರ್ಚುಗಲ್ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅವಳಿ ಗೋಲುಗಳ ನೆರವಿನಿಂದ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ತಂಡವು 5–0 ಅಂತರದಿಂದ ಸುಲಭ ಗೆಲುವು ಸಾಧಿಸಿ ನಾಕೌಟ್ ಹೊಸ್ತಿಲಿಗೆ ಬಂದು ನಿಂತಿತು.ಫಿಫಾ ವಿಶ್ವಕಪ್ನಲ್ಲಿ ಆಡಿದ ಆರೂ ಆವೃತ್ತಿಗಳಲ್ಲಿ ಗೋಲು ದಾಖಲಿಸಿದ ಮೊದಲ
ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾದರು.
41 ವರ್ಷ ವಯಸ್ಸಿನ ರೊನಾಲ್ಡೊ (6ನೇ ಮತ್ತು 39ನೇ ನಿಮಿಷ) ನುನೊ ಮೆಂಡೆಸ್ (17ನೇ) ಮತ್ತು ರಫೆಲ್ ಲಿಯೊ (87ನೇ) ತಲಾ ಒಂದು ಗೋಲು ತಂದಿತ್ತರೆ, ಮತ್ತೊಂದು ಗೋಲು ಎದುರಾಳಿ ತಂಡದ ಗೋಲ್ಕೀಪರ್ ಅಬ್ದುವೋಹಿದ್ ನೆಮಾಟೋವ್ ಅವರಿಂದ ‘ಉಡುಗೊರೆ’ ಯಾಗಿ ಲಭಿಸಿತು.
ಮಂಗಳವಾರ ರಾತ್ರಿ ನಡೆದ ಇತರ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಘಾನಾ ಗೋಲುರಹಿತ ಸಮಬಲ ಸಾಧಿಸಿದೆ. ಪನಾಮ ವಿರುದ್ಧ ಕ್ರೊವೇಷಿಯಾ 1-0 ಗೋಲುಗಳ ಅಂತರದ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ ಗೆಲುವಿನ ನೆಚ್ಚಿನ ತಂಡವೆನಿಸಿತ್ತು.ಆದರೆ ಉತ್ತಮ ಪ್ರದರ್ಶನ ತೋರಿದ ಘಾನಾ, ಆಂಗ್ಲರ ಪಡೆಗೆ ಒಂದೇ ಒಂದು ಗೋಲು ಬಿಟ್ಟು ಕೊಡದೇ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಎಲ್ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪನಾಮ ವಿರುದ್ಧ ಕ್ರೊವೇಷಿಯಾ 1-0 ಗೋಲುಗಳ ಅಂತರದ ಜಯ ಗಳಿಸಿತು. ಕ್ರೊವೇಷಿಯಾ ಪರ ಆ್ಯಂಟೆ ಬುದಿಮಿರ್ ನಿರ್ಣಾಯಕ ಗೋಲು ಗಳಿಸಿದರು.
ಸೋಮವಾರ ನಡೆದ ಪಂದ್ಯದಲ್ಲಿ ಅರ್ಲಿಂಗ್ ಹಾಲಾಂಡ್ ಅವರು ಎರಡು ಗೋಲುಗಳನ್ನು ಬಾರಿಸಿ ನಾರ್ವೆ ತಂಡ 3–2 ಗೋಲುಗಳಿಂದ ಸೆನೆಗಲ್ ತಂಡದ ಮೇಲೆ ಜಯಗಳಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸತತ ಎರಡನೇ ಗೆಲುವನ್ನು ದಾಖಲಿಸಿದ ನಾರ್ವೆ 32ರ ಸುತ್ತಿಗೆ ಮುನ್ನಡೆಯಿತು.





























