ಸುಳ್ಯ:ದೀಪಾವಳಿ ಎಂದರೆ ದೀಪಗಳ ಹಬ್ಬ, ಹಲವು ಆಚರಣೆ, ಆಚಾರ ವಿಚಾರ, ಸಂಪ್ರದಾಯಗಳ ಸಮ್ಮಿಲನ. ಜೊತೆಗೆ ಸಿಡಿಮದ್ದು ಅಬ್ಬರಿಸುವ ಹಬ್ಬವೂ ಹೌದು. ಬೆಳಕಿನ ಪ್ರಭಾವಳಿ ಚೆಲ್ಲುವ ದೀಪಾವಳಿಯ ಸುಂದರ ರಾತ್ರಿಗಳಿಗೆ ಡಾಂ..ಡೂಂ ಶಬ್ದ, ಮುಗಿಲೆತ್ತರ ಏರುವ ದುರುಸು ಬಾಣಗಳು, ಸುರು ಸುರು ಕಡ್ಡಿ, ಬುಗುರಿ.. ನೆಲ ಚಕ್ರ.. ಹೀಗೆ ಕತ್ತಲನ್ನು
ಸೀಳಿ ಬೆಳಕಿನ ಚಿತ್ತಾರ ಬಿಡಿಸುವ ಪಟಾಕಿ ಇಲ್ಲದೆ ಎಲ್ಲಿಯ ದೀಪಾವಳಿ. ಆದುದರಿಂದ ದೀಪಾವಳಿ ಎಂದರೆ ಮನಸ್ಸಿಗೆ ಓಡೋಡಿ ಬರುವುದೇ ಪಟಾಕಿಯ ಅಬ್ಬರ, ಬೆಳಕಿನ ವರ್ಣ ಚಿತ್ತಾರ. ಆದುದರಿಂದಲೇ ದೀಪಾವಳಿ ಸಂಭ್ರಮಕ್ಕೆ ಪಟಾಕಿಗಳು ಅನಿವಾರ್ಯ ಭಾಗ. ಹಾಗಾದರೆ ಈ ಬಾರಿ ಸುಳ್ಯದಲ್ಲಿ ಪಟಾಕಿ ವ್ಯಾಪಾರ ಹೇಗಿತ್ತು..? ಈ ಬಾರಿ ಸುಳ್ಯದಲ್ಲಿ ಪಟಾಕಿ ವ್ಯಾಪಾರಕ್ಕೆ ಬೆಂಬಿಡದ ಮಳೆ ತಣ್ಣೀರೆರೆಚಿದೆ.. ದೀಪಾವಳಿಯ ಮೂರು ದಿನಗಳಲ್ಲಿ ಸಂಜೆಯ ವೇಳೆಗೆ ಸುರಿದ ಎಡೆ ಬಿಡದ ಮಳೆ ವ್ಯಾಪಾರಕ್ಕೆ ಹಿನ್ನಡೆಯಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಸ್ಥರು. ಸಂಜೆ

4ರಿಂದ ರಾತ್ರಿ ಒಂಭತ್ತು ಗಂಟೆಯ ತನಕ ಹೆಚ್ಚು ಪಟಾಕಿ ವ್ಯಾಪಾರ ನಢಯುವ ಸಮಯ. ಆದರೆ ಮೂರು ದಿನಗಳಲ್ಲಿಯೂ ಸಂಜೆಯಿಂದ ಭಾರೀ ಮಳೆಯಾಗುತಿದೆ. ಇದರಿಂದ ಸಂಜೆಯ ವೇಳೆಗೆ ಜನರು ಪೇಟೆಗೆ ಬರುವುದು ವಿರಳವಾಗಿತ್ತು. ಇದರಿಂದ ಪಟಾಕಿ ಅಂಗಡಿಗಳು ಬೀಕೋ ಎನ್ನುತ್ತಿದ್ದವು. ಸುಳ್ಯ ನಗರದ ಹೊರ ವಲಯದಲ್ಲಿ ಸುಮಾರು ಎಂಟು ಅಂಗಡಿ ಪಟಾಕಿ ಅಂಗಡಿಗಳು ಇತ್ತು.ಕಳೆದ ಬಾರಿ ಎಲ್ಲಾ ಪರವಾನಗಿದಾರರು ಒಟ್ಟಾಗಿ ಸುಳ್ಯದ ಪ್ರಭು ಗ್ರೌಂಡ್ನಲ್ಲಿ ವಿಶಾಲವಾದ ಒಂದೇ ಸ್ಟಾಲ್ ಹಾಕಿ ಎಲ್ಲರೂ ಒಟ್ಟಾಗಿ ವ್ಯಾಪಾರ ನಡೆಸಿದ್ದರು. ಆದರೆ ಈ ಬಾರಿ ಬೇರೆ ಬೇರೆ ಕಡೆ ಪಟಾಕಿ ಅಂಗಡಿಗಳು ಇದ್ದವು. ನಗರ ಅಲ್ಲದೆ ತಾಲೂಕಿನ ವಿವಿಧ ಪಟ್ಟಣಗಳಲ್ಲಿಯೂ ಪಟಾಕಿ ಅಂಗಡಿಗಳು ಇದ್ದವು.
ಹಗಲಿನ ಬಿಸಿಲು ಇದ್ದ ಕಾರಣ ವಿವಿಧ ಭಾಗಗಳಿಂದ ಹಲವು ಮಂದಿ

ಪಟಾಕಿ ಖರೀದಿಗೆ ಆಗಮಿಸಿದ್ದರು ಆದರೆ ಸಂಜೆಯ ವೇಳೆ ನಿರಂತರ ಮಳೆ ಸುರಿದ ಕಾರಣ ವ್ಯಾಪಾರಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರ ನಡೆಸಿದ್ದ ಸುನಿಲ್ ಕೇರ್ಪಳ.
ಸಂಜೆಯ ವೇಳೆಗೆ ಮಳೆ ಸುರಿಯುವುದರಿಂದ ಜನರು ಬರುವುದು ಕಡಿಮೆಯಾಗುತ್ತದೆ . ಹಗಲು ಮಳೆ ಬಿಟ್ಟ ಕಾರಣ ಪಟಾಕಿ ಖರೀದಿಗೆ ಸ್ವಲ್ಪ ಮಟ್ಟಿಗೆ ಜನರು ಬರಲು ಕಾರಣವಾಗಿದೆ. ಅಂಗಡಿಗಳಲ್ಲಿ ತಂದಿರಿಸಿದ ಪಟಾಕಿ ಸ್ಟಾಕ್ಗಳು ಹಾಗೆಯೇ ಉಳಿದಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಸ್ಥರಾದ ರಾಜು ಪಂಡಿತ್.
ಮಳೆ ನಿರಂತರ ಸುರಿದ ಕಾರಣ ಪಟಾಕಿ ಒಡೆಯಲೂ ಸಮಸ್ಯೆ ತಲೆದೋರಿತ್ತು. ಒಟ್ಟಿನಲ್ಲಿ ಮಳೆಯ ಅಬ್ಬರವೇ ಜಾಸ್ತಿಯಾದ ಕಾರಣ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಪಟಾಕಿ ಅಬ್ಬರ, ಮಾರಾಟ ಸಾಧಾರಣ ವರ್ಷಕ್ಕಿಂತ ಕಮ್ಮಿಯೇ ಇತ್ತು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಟಾಕಿಗಳನ್ನು ಒಡೆಯುವುದು ಸ್ವಲ್ಪ ಕಡಿಮೆಯೇ ಎಂಬುದು ಸಾರ್ವಜನಿಕರ ಅಭಿಪ್ರಾಯ. ಒಟ್ಟಿನಲ್ಲಿ ಕಿವಿಗಪ್ಪಳಿಸಿದ ಪಟಾಕಿ ಸಿಡಿಮದ್ದಿನ ಅಬ್ಬರ, ವರ್ಣ ಚಿತ್ತಾರದ ಹಣತೆ ಬೆಳಕಿನ ದೀಪಾವಳಿಯ ಸಂಭ್ರಮ, ಪಟಾಕಿಯ ಅಬ್ಬರ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಏನಿದ್ದರೂ ಕಾತರದ ಕಾಯುವಿಕೆ.. ಮುಂದಿನ ದೀಪಾವಳಿಗಾಗಿ…!















