ಸುಳ್ಯ:ಕಾಂಗ್ರೆಸ್ ಸರಕಾರ ನೀಡಿದ ಗ್ಯಾರಂಟಿ ಯೋಜನೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ನೀಡಿದ ಯೋಜನೆಗಳಿಂದ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ
ಶೇ.98 ಮನೆಗಳಿಗೆ ಗ್ಯಾರಂಟಿ ಯೋಜನೆಗಳು ತಲುಪಿದೆ. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಕಾಂಗ್ರೆಸ್.ಜನಪರ ಯೋಜನೆಗಳ ಮೂಲಕ ಮನೆ ಮಾತಾಗಿರುವ ಕಾಂಗ್ರೆಸ್ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅತ್ಯುತ್ತಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಪದ್ನರಾಜ್ ಸರ್ವರನ್ನು ಪ್ರೀತಿಸುವ ಜನ ನಾಯಕ. ಈ ಬಾರಿ ಅವರ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.
ಎಲ್ಲರೂ ಒಟ್ಟಾಗಿ ಪ್ರಯತ್ನ: ಉತ್ತಮ ಪ್ರತಿಕ್ರಿಯೆ:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಒಟ್ಟಾಗಿ ಚುನಾವಣಾ ಪ್ರಚಾರ ಕೈಗೊಳ್ಳಲಾಗುತಿದೆ. ಮೊದಲ ಹಂತದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ಪೂರ್ತಿ ಮಾಡಿದೆ. ಎರಡನೇ ಹಂತದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಗ್ಯಾರಂಟಿ ಕಾರ್ಡನ್ನು ಮನೆ ಮನೆ ತಲುಪಿಸುತ್ತೇವೆ. ರಾಜ್ಯದಲ್ಲಿ ಐದು ಗ್ಯಾರಂಟಿ ಅನುಷ್ಠಾನ ಮಾಡಿದಂತೆ ಕೇಂದ್ರಕ್ಕೆ ಪ್ರಣಾಳಿಕೆಯಲ್ಲಿ ಐದು ನ್ಯಾಯ ಪತ್ರವನ್ನು ನೀಡಿದೆ. ಎಲ್ಲಾ ವಿಭಾಗಗಳ ಜನರನ್ನು ಸ್ಪರ್ಶಿಸುವ ಯುವ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ರೈತ ನ್ಯಾಯ ಮತ್ರು ಪಾಲುದಾರಿಕಾ ನ್ಯಾಯ ಹೀಗೆ ಐದು ನ್ಯಾಯಗಳನ್ನು ಘೋಷಿಸಿದೆ ಎಂದು ಹೇಳಿದರು. ಈ ಹಿಂದೆ ನರೇಗಾ, ಸರ್ವಶಿಕ್ಷಾ ಅಭಿಯಾನ್ ಕಾರ್ಯಕ್ರಮದಂತಹಾ ಜನಪ್ರಿಯ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು ಎಂದು ಮಮತಾ ಗಟ್ಟಿ ಹೇಳಿದರು
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಕಳೆದ 10 ವರ್ಷಗಳ ಆಡಳಿತದಿಂದ ಜನ ಸಾಮಾನ್ಯರು ಬೇಷತ್ತಿದ್ದಾರೆ. ಜಿಎಸ್ಟಿ ಹೇರಿ ಬೆಲೆ ಏರಿಕೆಯಿಂದಾಗಿ ಜನರಿಗೆ ಬದುಕಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಉದ್ಯೋಗ ಸೃಷ್ಠಿಸದೆ ಯುವಜನತೆ ಕಂಗಾಲಾಗಿದ್ದಾರೆ ಎಂದು ಹೇಳಿದರು.
ದಿನಪೂರ್ತಿ ಅಭ್ಯರ್ಥಿ ಚುನಾವಣಾ ಪ್ರಚಾರ-ಪಿ.ಸಿ.ಜಯರಾಮ:
ಏ.19 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.
ಪೂ.8.30ರಿಂದ 10.30ರ ತನಕ ಸುಳ್ಯ ಹಳೆಗೇಟಿನಿಂದ ಗಾಂಧಿನಗರ ತನಕ ರೋಡ್ ಶೋ ಮತ್ತು ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಕಾರ್ನರ್ ಮೀಟಿಂಗ್ ನಡೆಯಲಿದೆ.11 ಗಂಟೆಗೆ ಸಂಪಾಜೆ ಗ್ರಾಮದ
ಕಲ್ಲುಗುಂಡಿಯಲ್ಲಿ ರೋಡ್ ಶೋ ಮತ್ತು ಕಾರ್ನರ್ ಮೀಟಿಂಗ್. 12 ಗಂಟೆಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯುವುದು
12.30ಕ್ಕೆ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಕಾರ್ನರ್ ಮೀಟಿಂಗ್. 1.30ಕ್ಕೆ ಗುತ್ತಿಗಾರು ಪೇಟೆಯಲ್ಲಿ ಮತಯಾಚನೆ ಮತ್ತು ಕಾರ್ನರ್ ಮೀಟಿಂಗ್, 2.30ಕ್ಕೆ ಹರಿಹರ ಪಳ್ಳತ್ತಡ್ಕದಲ್ಲಿ ಕಾರ್ನರ್ ಮೀಟಿಂಗ್
3.15ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮತಯಾಚನೆ, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವರ ದರ್ಶನ, ಸುಬ್ರಹ್ಮಣ್ಯ ಮಠದ ಸ್ವಾಮೀಜಿಯವರ ಭೇಟಿ.
4.30ಕ್ಕೆ ಕಡಬ ಪೇಟೆಯಲ್ಲಿ ರೋಡ್ ಶೋ ಬಳಿಕ ಕಾರ್ನರ್ ಮೀಟಿಂಗ್. ಸಂಜೆ 6ಕ್ಕೆ ಕಾಣಿಯೂರು ಪೇಟೆಯಲ್ಲಿ ಮತ್ತು ಸವಣೂರಿನಲ್ಲಿ ಮತಯಾಚನೆ ಮತ್ತು ಕಾರ್ನರ್ ಮೀಟಿಂಗ್ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಗ್ಯಾರಂಟಿಯಿಂದ ಬಿಜೆಪಿ ನಾಯಕರ ಮನೆಯವರ ಮತ :ಕಾಂಗ್ರೆಸ್ಗೆ:ಭರತ್ ಮುಂಡೋಡಿ
ಕರ್ನಾಟಕ ಸರಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆ ತಲುಪಿದೆ.ಇದರಿಂದ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಮನೆಯ ಮಹಿಳೆಯರ ಮತ ಈ ಬಾರಿ ಕಾಂಗ್ರೆಸ್ಗೆ ಬರುವ ಸಾಧ್ಯತೆ ಇದೆ ಎಂದು ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು. ಈಗ ಚುನಾವಣಾ ಪ್ರಚಾರದ ಜೊತೆ ಗ್ಯಾರಂಟಿ ಯೋಜನೆ ತಲುಪದ ಅರ್ಹ ಫಲಾನುಭವಿಗಳ ಸಮೀಕ್ಷೆಯನ್ನೂ ಮಾಡಲಾಗುತಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಗ್ಯಾರಂಟಿ ಯೋಜನೆ ತಲುಪದ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಡಿಸಿಸಿ ಚುನಾವಣಾ ಉಸ್ತುವಾರಿ ಎನ್.ಜಯಪ್ರಕಾಶ್ ರೈ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಸಂಶುದ್ದೀನ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ರಾಜೀವಿ ರೈ, ಗೀತಾ, ಪ್ರವೀಣ್ ಮುಂಡೋಡಿ, ಅಬ್ದುಲ್ ಗಫೂರ್ ಕಲ್ಮಡ್ಕ ಉಪಸ್ಥಿತರಿದ್ದರು