*ಡಾ.ಸುಂದರ ಕೇನಾಜೆ.
ಮಿತ್ರರೊಬ್ಬರು ಸಿಕ್ಕಿ ರಾತ್ರಿ ನಿದ್ದೆ ತಡವಾಗುವ, ಬೆಳಿಗ್ಗೆ ಹೆಚ್ಚು ಮಾಡುವ, ಇದನ್ನು ಸರಿಪಡಿಸಲು ಕಷ್ಟಪಡುವ ಬಗ್ಗೆ ವಿವರಿಸಿದರು. ಮನುಷ್ಯನಿಗೆ ರಾತ್ರಿ ಎನ್ನುವ ವಾಸ್ತವ ಇದ್ದ ಕಾರಣ ನಿದ್ದೆಯ ಪ್ರಕ್ರಿಯೆಗೆ ಒಳಗಾದನೋ ಅಥವಾ ನಿದ್ದೆಗಾಗಿಯೇ ರಾತ್ರಿಯನ್ನು ಬಳಸಿಕೊಂಡನೋ ಅಂತೂ ಎಚ್ಚರ ಎಷ್ಟು ಬೇಕೋ ಕನಿಷ್ಟ ಅದರ ಮೂರನೇ ಒಂದು ಭಾಗ ನಿದ್ದೆಯೂ ಬೇಕು. ಮುಖ್ಯವಾಗಿ ಕರೆಂಟ್ ವ್ಯವಸ್ಥೆ ಬಂದ ನಂತರ ನಗರ ವಾಸಿಗಳು ನಿದ್ದೆಯಿಂದ ದೂರ ಆಗುವುದನ್ನು ಅಭ್ಯಾಸ ಮಾಡಿಕೊಂಡದ್ದು ಹೌದು, ಗ್ರಾಮೀಣ ಭಾಗಗಳಲ್ಲಿ ಇತ್ತೀಚಿನ ಹತ್ತು ಹದಿನೈದು ವರ್ಷಗಳ ವರೆಗೂ
ರಾತ್ರಿ ಬೇಗನೆ ಮಲಗಿ ಬೆಳಿಗ್ಗೆ ಬೇಗನೆ ಏಳುವ ರೂಢಿಗಳೇ ಚಾಲ್ತಿಯಲ್ಲಿತ್ತು. ಆದರೆ ಸದ್ಯ ನಮ್ಮ ಹಳ್ಳಿಗಳೂ ನಗರಗಳಂತೆ ರಾತ್ರಿ ತಡ ಮಾಡುವ ಬೆಳಿಗ್ಗೆಯೂ ತಡವಾಗಿ ಏಳುವ ಚಾಳಿಗೆ ಬಿದ್ದಿರುವುದನ್ನು ಕಾಣಬಹುದು.
ಟಿ.ವಿ ಬಳಕೆ ಇದ್ದ ಕಾಲದಿಂದ ಈ ರಾತ್ರಿ ಕುಳಿತುಕೊಳ್ಳುವ ಚಟ ಹಳ್ಳಿಯವರಿಗೂ ಒಂದು ಕಡೆಯಿಂದ ಬಂದರೆ ಮೊಬೈಲಿನ ನಾನಾ ಆಪ್ ಗಳು ಬಂದ ನಂತರವಂತೂ ಅನೇಕರು ಯಾವಾಗ ನಿದ್ದೆ ಮಾಡುತ್ತಾರೋ ಯಾವಾಗ ಎಚ್ಚರವಾಗಿರುತ್ತಾರೋ ಅವರಿಗೇ ಗೊತ್ತಾಗದಂತೆ ಆಗಿದೆ.
ಅನೇಕ ಬಾರಿ ಸ್ಟೇಟಸ್ಸಲ್ಲಿ ಹಾಕಿದ ವಿಷಯಗಳನ್ನು ರಾತ್ರಿ ಒಂದುವರೆ ಗಂಟೆ ನಂತರ ನೋಡಿದ, ಎರಡು ಗಂಟೆಗೆ ಮರು ಉತ್ತರ ಕಳುಹಿಸಿದ ಮಾಹಿತಿಗಳು ಕಂಡು ಬರುತ್ತವೆ. ಸಾಮಾನ್ಯವಾಗಿ ನಾಲ್ಕು ಗಂಟೆಯ ನಂತರ ನೋಡಿ ಪ್ರತಿಕ್ರಿಯೆ ಕೊಟ್ಟದ್ದೇ ಆದರೆ ಆತ ಬೆಳಿಗ್ಗೆ ಬೇಗನೆ ಏಳುವಾತನೆಂದು ತೀರ್ಮಾನಿಸಬಹುದು. ಆದರೆ ಅಪರರಾತ್ರಿಯ ಉತ್ತರಗಳು ನಿಶಾಚರತ್ವವನ್ನು ಸಾಬೀತುಪಡಿಸುತ್ತದೆ.
ಕರಾವಳಿ ಭಾಗದಲ್ಲಿ ಬಹಳ ಹಿಂದಿನಿಂದಲೂ ರಾತ್ರಿ ನಿದ್ದೆ ಬಿಡುವವರ ಸಂಖ್ಯೆ ಕಡಿಮೆಯೇ. ಸಾಮಾನ್ಯವಾಗಿ ಯಕ್ಷಗಾನ ಕಲಾವಿದರನ್ನು ಬಿಟ್ಟರೆ ನಿರಂತರ ನಿದ್ದೆ ಬಿಡುವವರೇ ಇರಲಿಲ್ಲ. ಯಕ್ಷಗಾನ ಕಲಾವಿದರು ರಾತ್ರಿ ನಿದ್ದೆ ಬಿಟ್ಟರೂ ಅದನ್ನು ಹಗಲು ಸರಿದೂಗಿಸುತ್ತಿದ್ದುದೇ ಹೆಚ್ಚು. ಉಳಿದಂತೆ ಯಕ್ಷಗಾನ ಪ್ರೇಕ್ಷಕ ವಲಯ ವರ್ಷಗಳಲ್ಲಿ ತಾವು ನೋಡುವ ನಾಲ್ಕೈದು ಆಟಗಳ ಹೊರತು ನಿರಂತರ ನಿದ್ದೆಯಿಂದ ದೂರ ಹೋಗುವ ಸಂದರ್ಭಗಳೇ ಇರುತ್ತಿರಲಿಲ್ಲ. ಅದು ಬಿಟ್ಟರೆ ವರ್ಷಕ್ಕೊಮ್ಮೆ ನಡೆಯುವ ಜಾತ್ರೆ, ಕೋಲ, ಪೂಜೆ ಅದರಲ್ಲೂ ಶಕ್ತಿಯ ಆರಾಧನೆಗೆ ನಿದ್ದೆ ಬಿಡುವವರೂ ಇದ್ದರು. ಆದರೆ ಇಂದಿನ ಹಾಗೇ ದುಡಿಮೆಗಾಗಿ ನಿದ್ದೆ ಬಿಡುತ್ತಿದ್ದ ಉದಾಹರಣೆಗಳೇ ಕಡಿಮೆ. ಶಾಲಾ ಕಾಲೇಜಿಗೆ ಹೋಗುತ್ತಿದ್ದ
ನಮ್ಮಂತವರೂ ನಿದ್ದೆ ಬಿಟ್ಟು ಓದಿ ಚರಿತ್ರೆ ನಿರ್ಮಿಸಿದ್ದು ಇಷ್ಟೇ ಅಂತ ಇದೆ.
ಬಹುತೇಕ ಜನಪದ ಕತೆ, ಕಾವ್ಯಗಳು ರಾತ್ರಿಯ ಎಚ್ಚರವನ್ನು ದುಷ್ಟಶಕ್ತಿಗಳ ಚಟುವಟಿಕೆಗೆ ಮೀಸಲಿಟ್ಟದ್ದೇ ಹೆಚ್ಚು. ಕೋಳಿ ಕೂಗಿದಲ್ಲಿಗೆ ಪೀಡೆ ಪಿಶಾಚಿಗಳು ತಮ್ಮ ಘನಕಾರ್ಯಗಳನ್ನೂ ಬಿಟ್ಟು ಓಡುತ್ತಿದ್ದವಂತೆ! ಸೂರ್ಯೋದಯಕ್ಕಿಂತಲೂ ಮುನ್ನ ಏಳುವ ರೈತರು ಎತ್ತು ಕೋಣಗಳಿಗೆ ತಿನಿಸು ತಿನ್ನಿಸಿ ಗದ್ದೆಯ ಕಡೆಗೆ ಹೊಡೆಯುವ ದೃಶ್ಯದ ಜನಪದ ಕಾವ್ಯಗಳು ನಮ್ಮಲ್ಲಿ ಬಹಳಷ್ಟು ಇವೆ. ಹೊತ್ತು ಮೂಡುವ ಮುನ್ನ ರಾಗಿ ಬೀಸುತ್ತಿದ್ದ ವರ್ಣನೆ ನೀಡಿದ್ದರಲ್ಲೂ ಜನಪದ ಕಾವ್ಯಗಳಿಗೇ ಮೊದಲ ಪಾಲು.
ರಾಮಾಯಣದ ಕುಂಬಕರ್ಣನ ನಿದ್ದೆ ಜಗತ್ಪ್ರಸಿದ್ಧ. ಶಾಪದ ನಿದ್ದೆಯಲ್ಲಿದ್ದವನನ್ನೂ ಕೊಲ್ಲಲು ರಾಮನಿಗೆ ವರಬಲ ಬೇಕಾಯಿತು! ಪುರಾಣಗಳಲ್ಲಿ ರಾತ್ರಿ ಯುದ್ದ ನಿಷಿದ್ಧವಾದರೂ ಮಹಾಭಾರತದಲ್ಲಿ ಜಯದ್ರಥನನ್ನು ಕೊಲ್ಲಲು ಒಮ್ಮೆ ಕತ್ತಲು ಮಾಡಬೇಕಾಯಿತು. ಘಟೋದ್ಗಜನ ರಾತ್ರಿ ಯುದ್ಧದ ನೈಪುಣ್ಯತೆ ಮಹಾಭಾರತದ 14ನೇ ದಿನದ ಯುದ್ದದಲ್ಲಿ ವ್ಯಕ್ತವಾಗುತ್ತದೆ.
ನಿದ್ದೆಯನ್ನು ಒಂದು ಸುಖವೆಂದು ತಿಳಿಸುವ ಪಂಪ, ಅದು ಬನವಾಸಿಯನ್ನು ನೆನಪಿಸುವಷ್ಟಲ್ಲವೆಂದು ತಿಳಿಸುತ್ತಾನೆ. “ನಿದ್ದೆಯ ಕೆಡಿಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು” ಎಂದು ವಚನಕಾರರು ಹೇಳಿದ್ದಿದೆ. “ಭೀಮವಿಕ್ರಮ ನಿದ್ದೆನೀಯುದ್ದಾಮ ಸಿಂಹದ್ವನಿಗೆ ನಿದ್ರಾ ತಾಮಸದ ತನಿಮದವಡೆಗೆ ಕಂದೆರೆದನಾ ಹನುಮ” ಎಂದು ಹನುಮಂತನ ನಿದ್ದೆ ಕೆಡಿಸಿದ ಬಗ್ಗೆ ಕುಮಾರವ್ಯಾಸ ಹೇಳುತ್ತಾನೆ. ಲಕ್ಷ್ಮೀಶ ತಮ್ಮ ಕೃತಿಯಲ್ಲಿ ಸಂದರ್ಭೋಚಿತವಾಗಿ ಹೇಳಿದ್ದನ್ನು ಓದಿದ ನೆನಪು. ರತ್ನಾಕರವರ್ಣಿಯಂತೂ ನಿದ್ದೆಯನ್ನೊಂದು ರೂಪಕದಂತೆ ಅಲ್ಲಲ್ಲಿ
ಬಳಸಿದ್ದಿದೆ. ಹೊಸಗನ್ನಡ ಸಾಹಿತ್ಯದಲ್ಲೂ ನವೋದಯ ಕಾಲದ ಪ್ರಸಿದ್ಧ ಸಾಹಿತಿಗಳು ನಿದ್ದೆ ಬಿಟ್ಟು ಬರೆದ ಬಗ್ಗೆ ಅವರ ಜೀವನಚರಿತ್ರೆಯಲ್ಲಿ ದಾಖಲಿಸಿದ್ದು ಕಾಣಸಿಗುವುದಿಲ್ಲ. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿಯಂತಹಾ ಕಾರ್ಯಾಚರಣೆಯನ್ನೇ ಸಮಯದ ಸಂರಚನೆಯ ಪ್ರಧಾನ ಭಾಗವಾಗಿಸಿದ್ದ ಸಾಹಿತಿಗಳೂ ರಾತ್ರಿ ಹೆಚ್ಚು ಕುಳಿತು ಬರೆದ ಬಗ್ಗೆ ಓದಿದ ನೆನಪಿಲ್ಲ. ಅದೇ ನವ್ಯ ಕಾಲದ ಸಾಹಿತಿಗಳು ಇದಕ್ಕಿಂತ ಸ್ವಲ್ಪ ಭಿನ್ನರಾಗಿದ್ದರು. ಅನಂತಮೂರ್ತಿ, ಲಂಕೇಶ್, ಕಾರ್ನಾಡ್ ರಂತವರು ರಾತ್ರಿ ಕುಳಿತು ಬರೆದ ಬಗ್ಗೆ ಅಲ್ಲಿಇಲ್ಲಿ ಹೇಳಿಕೊಂಡದ್ದಿದೆ. ಲಂಕೇಶರಂತೂ ತಮ್ಮ ಪತ್ರಿಕೆಯ ಬರಹ ಮುಗಿಸಿ ಏಳುವಾಗ ಬೆಳಗಿನ ಐದು ಗಂಟೆ ಅಂತ ಅನೇಕ ಕಡೆ ಬರೆದುಕೊಂಡ ನೆನಪು. ಬಂಡಾಯಕ್ಕಂತು ರಾತ್ರಿಯೂ ಅಪ್ಯಾಯಮಾನವಾದುದು.
ವಾರ, ತಿಂಗಳಲ್ಲಿ ಒಂದೊಂದು ದಿನ ನಿದ್ದೆ ಬಿಡುವುದು ದೈಹಿಕ ಕ್ಷಮತೆಗೆ ಒಳ್ಳೆಯದೆಂದು ಹೇಳುತ್ತಾರೆ ವೈದ್ಯ ಮಿತ್ರ. ಆದರೆ ಇವತ್ತಿನ ವರ್ಕ್ ಫ್ರಂ ಹೋಮ್ ನೆಪದಲ್ಲಿ ರಾತ್ರಿ ಇಡೀ ನಿದ್ದೆ ಬಿಟ್ಟು ಹಗಲೂ ನಿದ್ದೆ ಇಲ್ಲದೇ ಒದ್ದಾಡುವುದು ಆರೋಗ್ಯದ ನೆಲೆಯಿಂದ ಅತ್ಯಂತ ಅಪಾಯವೆಂದೂ
ಎಚ್ಚರಿಸುತ್ತಾರೆ. ಸಾಮಾನ್ಯವಾಗಿ ರಾತ್ರಿಯ ನಿಶಬ್ಧತೆಯನ್ನು ಹಗಲು ನಿರೀಕ್ಷಿಸಲು ಇಂದು ನಗರ ಬಿಡಿ, ಹಳ್ಳಿಗಳಲ್ಲೂ ಸಾಧ್ಯವಿಲ್ಲ. ಹಾಗಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅನೇಕರು ಸಂಕಷ್ಟಕ್ಕೀಡಾಗುವುದನ್ನು ಕಾಣಬಹುದು. ರಾತ್ರಿ ಎಷ್ಟೇ ಬೆಳಕಿದ್ದರೂ ರಾತ್ರಿಗೆ ಒಗ್ಗಿಕೊಂಡ ಮಾನವ ನಿದ್ದೆ ಹಗಲಿಗೆ ಹೊಂದಿಕೊಳ್ಳುವುದೂ ಕಷ್ಟವೇ.
ಆದ್ದರಿಂದ ಪರೀಕ್ಷೆಗಾಗಿ ತಯಾರು ಮಾಡುವ ನಮ್ಮ ಮಕ್ಕಳು, ಏನೇನೋ ಸಾಧಿಸಬೇಕೆಂದು ಕಲ್ಪಿಸಿರುವ ನಮ್ಮ ಯುವ ಜನರು, ಏನೇ ಮಾಡಿದರೂ ಇಷ್ಟೇ ಅಂತ ನಿಟ್ಟುಸಿರು ಬಿಡುತ್ತಾ ನಿದ್ದೆ ಕಾಣದೇ ಹೊರಳಾಡುವ ಹಿರಿಯರು, ಹಗಲು-ರಾತ್ರಿಗಳ ಭಿನ್ನತೆಯನ್ನು ಅರ್ಥ ಮಾಡಿ ಕಾರ್ಯಾಚರಣೆಗಿಳಿದರೆ ಇರುವಷ್ಟು ಕಾಲ ಸುಖವನ್ನು ಕಾಣಬಹುದು ಎನ್ನುವ ತಾತ್ಪರ್ಯದೊಂದಿಗೆ ಮಾತು ಮುಗಿಸಿದೆ.
ಡಾ.ಸುಂದರ ಕೇನಾಜೆ
(ಡಾ.ಸುಂದರ ಕೇನಾಜೆ ಅವರು ಜಾನಪದ ಸಂಶೋಧಕರು, ಅಂಕಣಕಾರರು- ಪ್ರತಿ ಭಾನುವಾರ ಡಾ.ಕೇನಾಜೆ ಅವರ ಅಂಕಣ ‘ಸುಳ್ಯ ಮಿರರ್’ನಲ್ಲಿ ಪ್ರಕಟವಾಗಲಿದೆ.)