ನವದೆಹಲಿ:ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಒತ್ತಾಯ ಮಾಡಿದ್ದಾರೆ.
ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ
ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದ ವರೆಗೆ ವಿಸ್ತರಣೆ ಮಾಡಬೇಕು.ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದ ವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದ್ದಾರೆ.