ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತದ 15 ಸದಸ್ಯರ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಶುಭಮನ್ ಗಿಲ್ ಅವರಿಗೆ ಉಪನಾಯಕನ ಹೊಣೆ ನೀಡಲಾಗಿದೆ. ತಂಡದಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಸ್ಥಾನ ನೀಡಲಾಗಿಲ್ಲ.
ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾದ
ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಫಿಟ್ನೆಸ್ ಮೇಲೆ ಅವರ ಲಭ್ಯತೆ ಅವಲಂಬಿಸಿದೆ.ಯಶಸ್ವಿ ಜೈಸ್ವಾಲ್ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಒಂದು ವರ್ಷದ ನಂತರ ತಂಡಕ್ಕೆ ಮರಳಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಟೆಸ್ಟ್ (ಸಿಡ್ನಿ) ವೇಳೆ ಬೂಮ್ರಾ ಬೆನ್ನುನೋವಿಗೆ ಒಳಗಾಗಿದ್ದರು. ಆದರೆ ಅಜಿತ್ ಅಗರಕರ್ ನೇತೃತ್ವದ ಆಯ್ಕೆ ಸಮಿತಿಯು 31 ವರ್ಷ ವಯಸ್ಸಿನ ಬೂಮ್ರಾ ಅವರನ್ನು ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆಯುವ ಏಕದಿನ ಸರಣಿಯ ಕೊನೆಯ ಪಂದ್ಯ ಮತ್ತು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸೇರ್ಪಡೆ ಮಾಡಿದೆ.ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಅವರು ಬೂಮ್ರಾ ಅವರ ಆಯ್ಕೆಯ ಬಗ್ಗೆ ಹೇಳಿದ್ದಿಷ್ಟು– ‘ಅನುಭವಿಗಳ ತಂಡದಲ್ಲಿ ಸಿರಾಜ್ ಅವರಷ್ಟೇ ಇಲ್ಲ.

ತಂಡವನ್ನು ಸಾಕಷ್ಟು ಯೋಚಿಸಿ ಆಯ್ಕೆ ಮಾಡಿದ್ದೇವೆ. ಬೂಮ್ರಾ ಅವರು ಆಡುತ್ತಾರೆಯೇ ಎನ್ನುವುದು ನಮಗೆ ಖಚಿತವಿಲ್ಲ. ಆರಂಭದಲ್ಲಿ ದಾಳಿಗಿಳಿಯುವ ಮತ್ತು ಕೊನೆಯಲ್ಲಿ ಬೌಲಿಂಗ್ ಮಾಡಬಲ್ಲ ಒಬ್ಬ ಬೌಲರ್ ಆಯ್ಕೆ ನಮಗೆ ಇರಬೇಕಿತ್ತು. ಅನುಭವಿ ವೇಗಿ ಶಮಿ ಮತ್ತು ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಬೂಮ್ರಾ ಅವರಿಗೆ ಬೆಂಬಲ ನೀಡಬಲ್ಲರು‘ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದರು.ಶಮಿ ಅವರು 2023ರ ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿ ತಂಡಕ್ಕೆ ಮರಳಿದ್ದರೆ. ಅವರು ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ (ರಣಜಿ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ) ಉತ್ತಮ ಪ್ರದರ್ಶನ ನೀಡಿದ್ದಾರೆ. ಲಯದ ಉತ್ತುಂಗಕ್ಕೆ ಅವರು ಇನ್ನೂ ತಲುಪಬೇಕಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಯಶಸ್ವಿ ಜೈಸ್ವಾಲ್ ಪಾಲಿಗೆ ಅವಕಾಶದ ಬಾಗಿಲು ತೆರೆದಿದೆ. ಅಗ್ರ ಕ್ರಮಾಂಕದಲ್ಲಿ ಎಡಗೈ ಆಟಗಾರನಾಗಿರುವುದೂ ಅವರಿಗೆ ಸಕಾರಾತ್ಮಕ ಅಂಶವಾಗಿದೆ.
ರಿಷಬ್ ಪಂತ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ.ಬ್ಯಾಟರ್–ವಿಕೆಟ್ ಕೀಪರ್, ಕನ್ನಡಿಗ ಕೆ.ಎಲ್.ರಾಹುಲ್ ಅವರೂ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ ಕರುಣ್ ನಾಯರ್ ಅವರಿಗೆ ಸ್ಥಾನ ನೀಡಲಾಗಿಲ್ಲ.
ಚಾಂಪಿಯನ್ಸ್ ಟ್ರೋಫಿಯು ಫೆ. 19ರಿಂದ ಆರಂಭವಾಗಲಿದ್ದು, ಪಾಕಿಸ್ತಾನವು ಆತಿಥ್ಯ ವಹಿಸಿದೆ. ಫೈನಲ್ಸ್ ಮಾರ್ಚ್ 9ಕ್ಕೆ ನಡೆಯಲಿದೆ. ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ, ರಿಷಬ್ ಪಂತ್, ಮತ್ತು ಹರ್ಷಿತ್ ರಾಣಾ (ಇಂಗ್ಲೆಂಡ್ ವಿರುದ್ಧ ಸರಣಿಗೆ ಮಾತ್ರ) ತಂಡದಲ್ಲಿ ಸ್ಥಾನ ಪಡೆದಿದ್ದಾರೆ.