ಗುವಾಹಟಿ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಆನೆಗಳಿಗೆಂದೇ ನಿರ್ದಿಷ್ಟ ವಿಧದ ಹುಲ್ಲನ್ನು ಬೆಳೆಯುವ ಮೂಲಕ ಮಾನವ–ಆನೆ ಸಂಘರ್ಷ ತಡೆಗೆ ವಿನೂತನ ದಾರಿ ಕಂಡುಕೊಂಡಿರುವುದನ್ನು ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.ಆನೆಗಳ ಸ್ನೇಹಿತರು’ (ಹಾಥಿ ಬಂಧು) ಹೆಸರಿನ ಗುಂಪಿನ ವಿನೂತನ ಕಾರ್ಯದ ಕುರಿತ ಆಡಿಯೊ ಕ್ಲಿಪ್ ಅನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ನಗಾಂವ್ ಜಿಲ್ಲೆಯ ಪ್ರಯತ್ನವು ಪ್ರತಿಯೊಬ್ಬರನ್ನೂ ಪ್ರೇರೇಪಿಸುವ ಶಕ್ತಿ
ಹೊಂದಿದೆ ಎಂದು ಹೇಳಿದ್ದಾರೆ.ನಗಾಂವ್ನಲ್ಲಿ ನಿರಂತರವಾಗಿ ಮಾನವ–ಆನೆ ಸಂಘರ್ಷ ನಡೆಯುತ್ತಿತ್ತು. ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದ್ದ ಆನೆಗಳು ಬೆಳೆಗಳನ್ನು ನಾಶಪಡಿಸುತ್ತಿದ್ದವು. ಇದರಿಂದ ಕಂಗಾಲಾದ ಗ್ರಾಮಸ್ಥರು ‘ಹಾಥಿ ಬಂಧು’ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಆನೆಗಳು ಬೆಳೆ ನಾಶಪಡಿಸದಿರಲು ವಿನೂತನ ಹೆಜ್ಜೆ ಇಟ್ಟರು. ಗ್ರಾಮಸ್ಥರೆಲ್ಲ ಒಗ್ಗೂಡಿ 264ಎಕರೆ ಬರಡು ಭೂಮಿಯಲ್ಲಿ ಮೇವಿನ ಹುಲ್ಲು (ನೇಪಿಯರ್ ಹುಲ್ಲು) ಬೆಳೆಯಲು ಆರಂಭಿಸಿದರು. ಪರಿಣಾಮವಾಗಿ ಕೃಷಿ ಭೂಮಿಗೆ ಆನೆಗಳು ಲಗ್ಗೆ ಇಡುವುದು ಕಡಿಮೆಯಾಗಿದೆ. ಇದರಿಂದ ಸಾವಿರಾರು ರೈತರು ನಿಟ್ಟುಸಿರುವ ಬಿಡುವಂತಾಗಿದೆ’ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಈ ವರ್ಷದ ಮೊದಲ ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮ ಇಂದು ಪ್ರಸಾರವಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ ಹಲವು ವಿಷಯಗಳ ಮೇಲೆ ಸುದೀರ್ಘ ಚರ್ಚೆಗಳು ನಡೆದವು. ಪ್ರತಿಯೊಬ್ಬರ ಹಿತಾಸಕ್ತಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಅಂಬೇಡ್ಕರ್ ಕರೆ ನೀಡಿದರೆ, ಮಾನವೀಯ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ಎತ್ತಿ ತೋರಿಸಬೇಕು ಎಂದು ರಾಜೇಂದ್ರ ಪ್ರಸಾದ್ ಪ್ರತಿಪಾದಿಸಿದರು. ನಮ್ಮ ಸಂವಿಧಾನ ರಚನಾಕಾರರು ಹೆಮ್ಮೆಪಡುವಂತಹ ಭಾರತವನ್ನು ನಿರ್ಮಿಸಲು ನಾವು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಮತದಾರರ ದಿನದ ಬಗ್ಗೆ ಪ್ರಸ್ತಾಪ ಜನವರಿ 25 ರಾಷ್ಟ್ರೀಯ ಮತದಾರರ ದಿನ. ಈ ದಿನದಂದು ಭಾರತದ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. 1951-52ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ದೇಶದ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಎಂದು ಕೆಲವರಿಗೆ ಅನುಮಾನವಿತ್ತು. ಇದೆಲ್ಲದರ ನಡುವೆಯೂ, ನಮ್ಮ ಪ್ರಜಾಪ್ರಭುತ್ವ ಎಲ್ಲಾ ಆತಂಕಗಳನ್ನು ತಪ್ಪೆಂದು ಸಾಬೀತುಪಡಿಸಿದೆ. ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲು ಹಾಗೂ ಅದನ್ನು ಸಶಕ್ತಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ.ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಆಯೋಗವನ್ನು ಶ್ಲಾಘಿಸಿದ್ದಾರೆ. ಜನಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ನ್ಯಾಯಯುತ ಮತದಾನ ಪ್ರಕ್ರಿಯೆಗೆ ತನ್ನ ಬದ್ಧತೆಯನ್ನು ತೋರಿಸಿದೆ. ಅಲ್ಲದೇ ಚುನಾವಣಾ ಆಯೋಗವು ಕಾಲಕಾಲಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಆಧುನೀಕರಿಸಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ರೀತಿಯ ತಾರತಮ್ಯವಿಲ್ಲದೇ ವಿವಿಧ ಜಾತಿಗಳು ಮತ್ತು ಪ್ರದೇಶಗಳ ಜನರು ಒಗ್ಗೂಡಿದ್ದಾರೆ. ಇಲ್ಲಿ ಬಡವ ಶ್ರೀಮಂತ, ಜಾತಿಯ ಭೇದಭಾವವಿಲ್ಲ. ಈ ಬಾರಿ ಬಹಳಷ್ಟು ಯುವಕರು ಇದಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದ್ದಾರೆ.