ಮುಂಬೈ:ಫೆಬ್ರವರಿ 19 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತನ್ನ ಅಂತಿಮ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ಈ ತಂಡದಿಂದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಅಲ್ಲದೆ ಕೊನೆ ಕ್ಷಣದಲ್ಲಿ ಭಾರತ ತಂಡಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.ಈ ಹಿಂದೆ ಪ್ರಕಟಿಸಲಾಗಿದ್ದ
15 ಸದಸ್ಯರ ತಂಡದಿಂದ ಇಬ್ಬರನ್ನು ಕೈ ಬಿಡಲಾಗಿದ್ದು, ಮತ್ತಿಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಭಾರತ ತಂಡದಿಂದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಕಾರಣ ಅವರು ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಯಾಗಿ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಈ ಮೊದಲು ಪ್ರಕಟಿಸಿದ 15 ಸದಸ್ಯರ ತಂಡದಲ್ಲಿ ಹೆಚ್ಚುವರಿ ಆರಂಭಿಕನಾಗಿ ಸ್ಥಾನ ಪಡೆದಿದ್ದ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆಯಾದ ಭಾರತ ತಂಡ ಈ ಕೆಳಗಿನಂತಿದೆ.
ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.