ಸುಳ್ಯ: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಳಿಂದ ಲೋಕಾಯುಕ್ತ ಜನ ಸಂಪರ್ಕ ಸಭೆ ಸುಳ್ಯ ತಾಲೂಕು ಕಚೇರಿಯಲ್ಲಿ ಫೆ.12ರಂದು ನಡೆಯಿತು. ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರು. ಒಟ್ಟು 18 ದೂರುಗಳನ್ನು ಸಲ್ಲಿಸಲಾಯಿತು. ಪಯಸ್ವಿನಿ ನದಿಯಲ್ಲಿ ವ್ಯಾಪಕವಾಗಿ ಮೀನುಗಳು ಸತ್ತಿರುವ ಬಗ್ಗೆ
ಸೂಕ್ತ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಡಿ.ಎಂ.ಶಾರೀಖ್ ದೂರು ಸಲ್ಲಿಸಿದರು. ನೀರು ಮತ್ತು ಸತ್ತ ಮೀನನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವು ಎಂದು ನಗರ ಪಂಚಾಯತ್ ಅಧಿಕಾರಿಗಳು ತಿಳಿಸಿದರು.

ಸುಳ್ಯ ನಗರ ಪಂಚಾಯತ್ನ ಕಸ ವಿಲೇವಾರಿ ಅಸಮರ್ಪಕವಾಗಿದೆ, ಇದರಿಂದ ಪಂಚಾಯತ್ಗೆ ಹಣ ನಷ್ಟ ಆಗುತಿದೆ ಈ ಕುರಿತು ತನಿಖೆ ನಡೆಸಬೇಕು ಎಂದು ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ದೂರು ನೀಡಿದರು. ನಗರ ಪಂಚಾಯತ್ ಆವರಣದಲ್ಲಿ ಕಸ ಶೇಖರಣೆ ಮಾಡಿ ಅದರ ವಿಲೇವಾರಿಗೆಂದು ಸುಮಾರು 60 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ. ಅಲ್ಲದೆ ಇದೀಗ ಕಲ್ಚರ್ಪೆಯ ತ್ಯಾಜ್ಯ ಘಟಕದಲ್ಲಿ ಕಸ ಬರ್ನಿಂಗ್ ಮಾಡಿ ಗ್ಯಾಸ್ ಉತ್ಪಾದನೆ ಮಾಡುವುದಾಗಿ ಪ್ರತಿ ತಿಂಗಳು 1.25 ಲಕ್ಷ ಹಣ ಖರ್ಚು ಮಾಡಲಾಗುತಿದೆ. ಆದರೆ ಕಸ ಸಮರ್ಪಕವಾಗಿ ವಿಲೇವಾರಿಯಾಗುತ್ತಿಲ್ಲ ಗ್ಯಾಸ್ ಉತ್ಪಾದನೆಯಾಗುತ್ತಿಲ್ಲ ಈ ಕುರಿತು ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು ಎಂದು ಉಮ್ಮರ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಬಿಎಸ್ಎನ್ಎಲ್ ಟವರ್ ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಅರಮನೆಗಯ ತೂಗು ಸೇತುವೆ ನಿರ್ಮಾಣ ಆಗದ ಬಗ್ಗೆ ಬಾಲಕೃಷ್ಣ ಮರ್ಕಂಜ ದೂರು ನೀಡಿದರು. ತಾಲೂಕಿನಲ್ಲಿ ಕಂದಾಯ ಇಲಖೆಯಲ್ಲಿ ವ್ಯಾಪಕವಾಗಿ ಕಂಡು ಬರುತ್ತಿರುವ ಪೌತಿ ಖಾತೆ ಸಮಸ್ಯೆ, 9/11 ಸಮಸ್ಯೆಗಳ ಬಗ್ಗೆ ದೂರು ದಾಖಲಾಯಿತು.
ಲೋಕಾಯುಕ್ತ ಎಸ್ಪಿ ನಟರಾಜ್ ಎಂ.ಎ, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ವಿವೇಕ್, ರಾಜಶೇಖರ, ವಿನಾಯಕ, ಪಂಪಣ್ಣ, ದುಂಡಪ್ಪ, ಶರತ್ ಸಿಂಗ್ ಭಾಗವಹಿಸಿದ್ದರು.
ತಹಶೀಲ್ದಾರ್ ಮಂಜುಳ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.