ಸುಳ್ಯ: ವ್ಯಕ್ತಿಯೊಬ್ಬ ಶಕ್ತಿಯಾಗಿ ಬೆಳೆದು, ಆ ಶಕ್ತಿಯು ಸಮಾಜಕ್ಕೆ ಅರ್ಪಣೆಗೊಂಡರೆ ಅದು ನಿಜವಾದ ಸಮಾಜ ಸೇವೆಯಾಗುತ್ತದೆ. ಸಮಾಜದಿಂದ ಪಡೆದ ಒಂದಷ್ಟು ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡಿದರೆ ಆ ವ್ಯಕ್ತಿಯ ವರ್ಚಸ್ಸು ವೃದ್ಧಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಹಾಗೂ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಮತ್ತು ಮನೆಯವರು ಸೇವಾರೂಪವಾಗಿ ನೀಡಿದ ನೂತನ ಬ್ರಹ್ಮರಥ ಸಮರ್ಪಣೆ, ಭೂಸ್ಪರ್ಶ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆ ಹಾಗೂ

ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಯಾಂತ್ರೀಕೃತ ಬದುಕು ಸಾಮಾಜಿಕ ಬದುಕನ್ನು ಕುಲಗೆಡಿಸುತ್ತಿದೆ.ಅದಕ್ಕಿರುವ ಪರಿಹಾರ ದೇವರಾತಾಧನೆ ಮಾತ್ರ. ದೇವತಾರಾಧನೆಯ ಮೂಲಕ ಎಲ್ಲರೂ ಸಾಮಾಜಿಕ ಸಾಮರಷ್ಯದ ಬದುಕು ನಡೆಸುವಂತಾಗಬೇಕು ಎಂದು ಡಿವಿಎಸ್ ಹೇಳಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ‘ ಬ್ರಹ್ಮ ರಥ ಸಮರ್ಪಣೆ ಸುಳ್ಯದ ಇತಿಹಾಸದಲ್ಲಿ ಸುವರ್ಣ ಲಿಪಿಗಳಲ್ಲಿ ಬರೆದಿಡಬೇಕಾದ ಐತಿಹಾಸಿಕ ದಿನ ಎಂದು ಬಣ್ಣಿಸಿದರು.ರಥಕ್ಕೆ ಪಥ ಇದ್ದಂತೆ, ಜೀವನದ ರಥಕ್ಕಿರುವ ಪಥ ಧರ್ಮ, ಧರ್ಮ ಪಥದಲ್ಲಿ ಜೀವನ ರಥ ಸಾಗಿದರೆ ಬದುಕು ಸಾರ್ಥಕತೆಯನ್ನು ಪಡೆಯಲು ಸಾಧ್ಯ ಎಂದರು. ಆಧ್ಯಾತ್ಮ ಭಾರತದ ಆಂತರ್ಯ, ಆಧ್ಯಾತ್ಮಿಕತೆ ವಿಶ್ವಕ್ಕೆ ಬೆಳಕಾಗಿದೆ. ಆಧ್ಯಾತ್ಮದಲ್ಲಿ ಆನಂದಸ ಸೆಲೆ ಇದೆ ಎಂದರು.

ದೇವಸ್ಥಾನಕ್ಕೆ ರಥ ಸಮರ್ಪಣೆ ಮಾಡಿದ ಡಾ.ಕೆ.ವಿ.ಚಿದಾನಂದ ಹಾಗೂ ರಥ ಶಿಲ್ಪಿ ಕೋಟೇಶ್ವರದ ರಾಜಗೋಪಾಲ ಆಚಾರ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕೆ.ವಿ.ಚಿದಾನಂದ ಬ್ರಹ್ಮರಥವು ಸುಳ್ಯ ಜನತೆಗೆ ಶಕ್ತಿ ತುಂಬಲಿ.ಸುಳ್ಯದ ಜನರಿಗೆ ಶಕ್ತಿ, ಐಶ್ವರ್ಯ, ಶಾಂತಿ, ನೆಮ್ಮದಿ ಕರುಣಿಸುವಂತಾಗಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ ‘ಇಂದು ಸಮಾಜ ಸಂಸ್ಕಾರ ಶೂನ್ಯವಾಗುತಿದೆ. ಅದಕ್ಕೆ ಪರಿಹಾರವಾಗಿ ಊರಿನ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಗಟ್ಟಿಯಾಗಬೇಕು. ಆಗ ಸಂಸ್ಕಾರ ತುಂಬುವುದರ ಜೊತೆಗೆ ನಾಡಿಗೆ ಸುಖ ಶಾಂತಿ, ನೆಮ್ಮದಿ ದೊರೆಯಲಿದೆ ಎಂದರು.

ಅಭಿನಂದನಾ ಭಾಷಣ ಮಾಡಿದ ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮಾತನಾಡಿ’ಡಾ.ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಿದ ವಿದ್ಯಾಸಂಸ್ಥೆಗಳನ್ನು ಮುನ್ನಡೆಸಿ ಉನ್ನತ ಸ್ಥಾನಕ್ಕೇರಿಸಿದ ಡಾ.ಕೆ.ವಿ.ಚಿದಾನಂದ ಅವರು ಇದೀಗ ನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಬ್ರಹ್ಮ ರಥ ಸಮರ್ಪಣೆ ಮಾಡುವ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕ್ಷೇತ್ರದ ತಂತ್ರಿಗಳಾದ ಆರೋತ್ ಪದ್ಮನಾಭ ತಂತ್ರಿ, ವೇದಮೂರ್ತಿ ಕುಂಟಾರು ರವೀಶ ತಂತ್ರಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಮಾಜಿ ಸಚಿವರಾದ ಎಸ್.ಅಂಗಾರ, ಬಿ.ರಮಾನಾಥ ರೈ, ಮಾಜಿ ಸಂಸದ ನಳಿನ್ಕುಮಾರ್ ಕಟೀಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಹಶೀಲ್ದಾರ್ ಮಂಜುಳಾ, ನಗರ ಪಂಚಾಯತ್ ಸದಸ್ಯೆ ಕಿಶೋರಿ ಶೇಟ್ ಅತಿಥಿಗಳಾಗಿದ್ದರು.

ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿಗಳಾದ ಡಾ.ಐಶ್ವರ್ಯ, ಕೆ.ವಿ.ಹೇಮನಾಥ, ಕೋಶಾಧಿಕಾರಿ ಡಾ.ಗೌತಮ್ ಗೌಡ ಎ.ಜಿ, ಬ್ರಹ್ಮರಥ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ನಾರಾಯಣ ಕೇಕಡ್ಕ,ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ.ಡಿ.ವಿ, ಕಾರ್ಯದರ್ಶಿ ಹರೀಶ್ ಕಂಜಿಪಿಲಿ, ಕೃಪಾಶಂಕರ ತುದಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ. ವಂದಿಸಿದರು.ಪಿ.ಬಿ. ಬೇಬಿ ವಿದ್ಯಾ,
ಚಂದ್ರಶೇಖರ ಪೇರಾಲು, ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.

ವೈದಿಕ ಕಾರ್ಯಕ್ರಮಗಳು:
ಬ್ರಹ್ಮ ರಥ ಸಮರ್ಪಣೆಯ ಅಂಗವಾಗಿ ವಿವಿಧ ವೈಧಿಕ ಕಾರ್ಯಕ್ರಮಗಳು ಜರುಗಿದವು.ಜ.1ರಂದು ರಾತ್ರಿ ಬ್ರಹ್ಮ ರಥದ ಆಲಯಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಜ.2 ರಂದು ಬೆಳಿಗ್ಗೆ ನಿಂದ ಗಣಹೋಮ, ಕಲಶಾಭಿಷೇಕಗಳು ಹಾಗೂ ಪೂರ್ವಾಹ್ನ 9.15ರಿಂದ 9.35ರ ನಡುವಿನ ಮಕರ ಲಗ್ನದ ಸುಮೂರ್ಹತದಲ್ಲಿ ಬ್ರಹ್ಮರಥದ ಭೂ ಸ್ಪರ್ಶ, ಬ್ರಹ್ಮರಥ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.