ಕೇರ್ಪಡ:ದೇವಸ್ಥಾನಗಳು ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಸ್ಕಾರದ ಕೇಂದ್ರಗಳು ಆದುದರಿಂದ ದೇವಾಲಯಗಳ ಅಭಿವೃದ್ಧಿಯಿಂದ ನಮ್ಮ ದೇಶ, ಸಂಸ್ಕೃತಿ ಸಂಸ್ಕಾರ ಉಳಿಯಲು ಸಾಧ್ಯ ಎಂದು
ಕೇಂದ್ರ ಸರಕಾರದ ಅತಿ ಸಣ್ಣ,ಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅವರು
ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ
ಪ್ರಯುಕ್ತ ಜ.1ರಂದು ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇವಾಲಯ ಹಾಗೂ ಶಿಕ್ಷಣ ಕೇಂದ್ರಗಳು ಊರಿನ ಅಭಿವೃದ್ಧಿಯ ಸಂಕೇತ. ನಮ್ಮಆಚರಣೆ, ಸಂಸ್ಕಾರ, ಸಂಸ್ಕೃತಿ ವಿಷಯದಲ್ಲಿ ಶ್ರದ್ಧೆ ಹಾಗೂ ಸಮರ್ಪಣೆ ಇರಲಿ ಎಂದು ಅವರು ಹೇಳಿದರು.
ಆಶೀರ್ಚಚನ ನೀಡಿದ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೇವಾಲಯಗಳು ಸಂಸ್ಕೃತಿ ಪ್ರಧಾನ ಕೇಂದ್ರಗಳು. ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು ಆ ಮೂಲಕ ಹೊಸ ತಲೆಮಾರಿನಲ್ಲಿ ಸಂಸ್ಕೃತಿ, ಸಂಸ್ಕಾರ ತುಂಬಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಊರಿನ ಎಲ್ಲರ ಸಹಕಾರದಿಂದ ದೇವಾಲಯದ ಅಭಿವೃದ್ಧಿ ಸಾಧ್ಯವಾಗಿದೆ. ಎಲ್ಲರ ಕೊಡುಗೆ, ಶ್ರಮ, ಸೇವೆ ಮತ್ತು ಸಮರ್ಪಣೆಯಿಂದ ಬ್ರಹ್ಮಕಲಶೋತ್ಸವ ಸಾಧ್ಯವಾಗಲಿದೆ ಎಂದು ಹೇಳಿದರು.
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ‘ದೇವಾಲಯಗಳು ಹಿಂದೂ ಸಂಸ್ಕೃತಿಯ ಕೈಗನ್ನಡಿ’ ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ನಾಗೇಶ ತಂತ್ರಿ ಕೆಮ್ಮಿಂಜೆ, ಎಡಮಂಗಲ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಜಾಲ್ತಾರು, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್. ಸೀತಾರಾಮಯ್ಯ ಕೆಂಜೂರು, ದೆಹಲಿ ತುಳು ಸಿರಿ ಅಧ್ಯಕ್ಷ ವಸಂತ ಶೆಟ್ಟಿ ಉಪಸ್ಥಿತರಿದ್ದರು
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಆಲಾಜೆ ವಂದಿಸಿದರು.ಮಹಿಷಮರ್ದಿನಿ ಕಲಾ ಸಂಘದ ಅಧ್ಯಕ್ಷ ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಗೌರವ ಸ್ವಾಗತ ಸಮಿತಿ, ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಕೇರ್ಪಡ ಮಣ್ಣ್ಡ್ ಐಸಿರ’ ದೇವರ ಭಕ್ತಿ ಗೀತೆ ಆಲ್ಬಂ ಈ ಸಂದರ್ಭದಲ್ಲಿ ಎಡನೀರು ಶ್ರೀಗಳು ಬಿಡುಗಡೆ ಮಾಡಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ-ನೃತ್ಯ-ವೈಭವ, ನೃತ್ಯಾರ್ಪಣಂ ನಡೆಯಿತು.
