ಬನಾರಿ:ದೇಲಂಪಾಡಿ ಮಹಾಲಿಂಗ ಪಾಟಾಳಿಯವರ ಇಪ್ಪತ್ತನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಹಾಗು ದೇಲಂಪಾಡಿ ಮಹಾಲಿಂಗ ಪಾಟಾಳಿ ಸೀತಮ್ಮ ಸ್ಮೃತಿ ಪುರಸ್ಕಾರ ಪ್ರದಾನ ಸಮಾರಂಭವು
ದೇಲಂಪಾಡಿ ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಡೆಯಿತು.ಶ್ರೀ ಕೃಷ್ಣ ರಾಯಭಾರ ಯಕ್ಷಗಾನ ತಾಳಮದ್ದಳೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ
ಪೂಜೆ ಭಗವದ್ಗೀತೆ ಪಾರಾಯಣದೊಂದಿಗೆ ನೆರವೇರಿದ ಬಳಿಕ ಜರಗಿದ ಸಂಸ್ಮರಣೆ – ಸ್ಮೃತಿ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಮಂಜೇಶ್ವರ ಅವರು ವಹಿಸಿದ್ದರು.ಮಲ್ಲ ಮೇಳದ ಹಿರಿಯ ಯಕ್ಷಗಾನ ವೇಷಧಾರಿ ದೇಲಂಪಾಡಿ ಬಾಲಕೃಷ್ಣ ಗೌಡ ಅವರಿಗೆ ಸ್ಮೃತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಣ್ಣದ ಮಹಾಲಿಂಗ ಪ್ರತಿಷ್ಠಾನದ ಅಧ್ಯಕ್ಷರಾದ ಪಂಜತ್ತೊಟ್ಟಿ ಗೋಪಾಲಕೃಷ್ಣ ಮಾಸ್ತರ್ ಅವರು ಮಹಾಲಿಂಗ ಪಾಟಾಳಿ ಅವರ ಸಂಸ್ಮರಣೆ ಮಾಡಿದರು. ಶಿಕ್ಷಣ ತಜ್ಞ ರಾಮಣ್ಣ ಮಾಸ್ತರ್ ದೇಲಂಪಾಡಿ ಅಭಿನಂದನಾ ಭಾಷಣ ಮಾಡಿದರು. ಯಕ್ಷಗುರು ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಂ. ರಮಾನಂದ ರೈ ದೇಲಂಪಾಡಿ ವಂದಿಸಿದರು. ನಾರಾಯಣ ದೇಲಂಪಾಡಿ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಜರಗಿದ

ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ ಮತ್ತು ಕುಮಾರಿ ಸುರಭಿ ಚೂಂತಾರು ಅವರು ಕಾಣಿಸಿಕೊಂಡರು. ಚೆಂಡೆ ಮದ್ದಳೆ ಚಕ್ರತಾಳ ವಾದನಗಳಲ್ಲಿ ನಾರಾಯಣ ಪಾಟಾಳಿ ಮಯ್ಯಾಳ, ಬಿ.ಎಚ.ಹೊನ್ನಪ್ಪ ಗೌಡ, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ, ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಸಹಕರಿಸಿದರು.
ಆರ್ಥಧಾರಿಗಳಾಗಿ ಪಂಜತ್ತೊಟ್ಟಿ ಗೋಪಾಲಕೃಷ್ಣ ಮಾಸ್ತರ್, ರಾಮಣ್ಣ ಮಾಸ್ತರ್ ದೇಲಂಪಾಡಿ, ರಮಾನಂದ ರೈ ದೇಲಂಪಾಡಿ, ಬಾಲಕೃಷ್ಣ ಗೌಡ ದೇಲಂಪಾಡಿ, ಸಂಜೀವ ರಾವ್ ಮಯ್ಯಾಳ, ರಾಮ ನಾಯ್ಕ ದೇಲಂಪಾಡಿ ಅವರು ತಮ್ಮ ಮಾತುಗಾರಿಕೆಯ ಪ್ರೌಢಿಮೆಯಿಂದ ರಂಜಿಸಿದರು. ನಿವೃತ್ತ ಪ್ರಾಧ್ಯಾಪಕ ವೆಂಕಟ್ರಮಣ ಮಾಸ್ತರ್
ದೇಲಂಪಾಡಿ, ವೇದಮೂರ್ತಿ ಪ್ರಸಾದ್ ಭಟ್ ಚೂಂತಾರು, ಕಾಟೂರಾಯ ವೆಂಕಪ್ಪಯ್ಯ ದೇಲಂಪಾಡಿ, ಶಾಂತಾ ಕುಮಾರಿ, ಚೆಂಡೆಮೂಲೆ, ಭಾಸ್ಕರ ಮಾಸ್ತರ್ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು. ನಂದಕಿಶೋರ ಬನಾರಿ ಅವರು ವಂದಿಸಿದರು.
























