ಸುಳ್ಯ:ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡ ಸುಳ್ಯದಲ್ಲಿ ನಡೆದ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಯೇನೆಪೋಯ ಯೂನಿವರ್ಸಿಟಿ ತಂಡ ದ್ವಿತೀಯ, ಆಳ್ವಾಸ್ ಮೂಡಬಿದ್ರೆ ತೃತೀಯ ಮತ್ತು ಟಿಎಂಸಿ ಥಾಣೆ ಚತುರ್ಥ ಬಹುಮಾನ ಪಡೆದುಕೊಂಡಿತು. ಇಂದು ಬೆಳಗ್ಗಿನ ಜಾವ ನಡೆದ ರೋಚಕ ಫೈನಲ್ನಲ್ಲಿ ಯೇನೆಪೋಯ ಯೂನಿವರ್ಸಿಟಿ ತಂಡವನ್ನು 31-26 ಅಂಕಗಳ ಅಂತರದಲ್ಲಿ ರೋಮಾಂಚನಕಾರಿಯಾಗಿ ಮಣಿಸಿ ಬಿಒಬಿ ಕಪ್ ಎತ್ತಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಫೈನಲ್ ಪಂದ್ಯದಲ್ಲಿ

ಬಿಒಬಿ ಮತ್ತು ಯೇನೆಪೋಯ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿತು ಇಡೀ ಪಂದ್ಯಾಟದಲ್ಲಿ ಸೋಲರಿಯದೆ ಅಜೇಯರಾಗಿ ಬ್ಯಾಂಕ್ ಆಫ್ ಬರೋಡ ತಂಡ ಚಾಂಪಿಯನ್ ಪಟ್ಟ ಅಂಕರಿಸಿತು.ಪ್ರೋ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ರತನ್, ರೋಹಿತ್ ಮಾರ್ಲ, ಸುನಿಲ್ ಹನುಮಂತಪ್ಪ, ವಿಶ್ವರಾಜ್ ಸೇರಿ ಖ್ಯಾತ ಆಟಗಾರರನ್ನು ಒಳಗೊಂಡ ಬ್ಯಾಂಕ್ ಆಫ್ ಬರೋಡ ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ನಿರಂತರ ಅಂಕಗಳನ್ನು ಏರಿಸುತ್ತಾ ಸಾಗಿತು.ಅರ್ಧಾವಧಿಯ ವೇಳೆಗೆ 23-19 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮಾಜಿ ರಾಷ್ಟ್ರೀಯ ತಂಡದ ಆಡಗಾರ ಜಗದೀಶ್ ಕುಂಬ್ಲೆ ಅವರ ತರಬೇತಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ ಯೇನೆಪೋಯ ತಂಡ ಗಮನ ಸೆಳೆಯಿತು. ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಯೇನೆಪೋಯ ತಂಡದ ಶ್ರವಣ್, ಕೌಶಿಕ್ ಮತ್ತಿತರ ಯುವ ಆಟಗಾರರು ಅತ್ಯುತ್ತಮ ಕಬಡ್ಡಿಯ ಪ್ರದರ್ಶನ ನೀಡಿ ತುಂಬಿದ ಗ್ಯಾಲರಿಯಲ್ಲಿ ನೆರೆದ ಪ್ರೇಕ್ಷಕರಿಗೆ ಕಬಡ್ಡಿಯ ರಸದೌತಣ ನೀಡಿದರು. ಸೆಮಿಫೈನಲ್ನಲ್ಲಿ ಆಳ್ವಾಸ್ ತಂಡವನ್ನು ಮಣಿಸಿ ಬ್ಯಾಂಕ್ ಆಫ್ ಬರೊಡ ಹಾಗೂ ಟಿಎಂಸಿ ಥಾಣೆ ಮಣಿಸಿದ
ಯೇನೆಪೋಯ ಯೂನಿವರ್ಸಿಟಿ ಫೈನಲ್ ಪ್ರವೇಶಿಸಿತು. ಪ್ರಥಮ ಸ್ಥಾನಿಯಾದ ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ 1 ಲಕ್ಷ ರೂ ನಗದು ಹಾಗೂ ಟ್ರೋಫಿ, ಯೇನೆಪೋಯ ತಂಡಕ್ಕೆ 65 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಸ್ಥಾನಿ ಆಳ್ವಾಸ್ ತಂಡಕ್ಕೆ 35 ಸಾವಿರ ನಗದು ಮತ್ತು ಟ್ರೋಫಿ ಹಾಗೂ ಚತುರ್ಥ ಸ್ಥಾನಿ ಟಿಎಂಸಿ ಥಾಣೆಗೆ 35 ಸಾವಿರ ನಗದು ಮತ್ತು ಟ್ರೋಫಿ ನೀಡಲಾಯಿತು.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ಆಯೋಜಿಸಲಾಯಿತು.