ಚೆನ್ನೈ:ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೂತನ ಸರ್ಕಾರ ರಚಿಸಲು, ಎಡಪಕ್ಷಗಳು ಬೆಂಬಲ ನೀಡಿವೆ. ಸಿಪಿಐ, ಸಿಪಿಐ(ಎಂ) ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿದೆ. ವಿಸಿಕೆ ಪಕ್ಷ ಕೂಡ ಟಿವಿಕೆಗೆ ಬೆಂಬಲ ಸೂಚಿಸಿದೆ.234 ಸದಸ್ಯ ಬಲದ ತಮಿಳುನಾಡಿನಲ್ಲಿ
108 ಸ್ಥಾನಗಳಲ್ಲಿ ಜಯ ಗಳಿಸಿದ್ದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ನ ಐವರು ಶಾಸಕರು ಈಗಾಗಲೇ ಬೆಂಬಲ ಘೋಷಿಸಿದ್ದಾರೆ.ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ತಲಾ ಎರಡು ಸ್ಥಾನಗಳನ್ನು ಹೊಂದಿದೆ. ಇದರೊಂದಗೆ ಸಂಖ್ಯಾಬಲವು 119ಕ್ಕೆ ಏರಿಕೆಯಾಗಲಿದೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆ 118 ಆಗಿದೆ.
ಟಿವಿಕೆ ಪಕ್ಷವು ಬಹುಮತ ಗಳಿಸುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಟಿವಿಕೆ ನಾಯಕ ಕಾಮರಾಜ್ ಪ್ರತಿಕ್ರಿಯಿಸಿದ್ದಾರೆ.
ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆಗಳು ಸರ್ಕಾರ ರಚಿಸಲು ಮತ್ತು ವಿಜಯ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಒಪ್ಪಿಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಕಾಮರಾಜ್ ತಿಳಿಸಿದ್ದಾರೆ.






