ಸುಳ್ಯ: ಹಿರಿಯ ಸಾಹಿತಿ ಹಾಗೂ ಅರ್ಥಧಾರಿಗಳಾದ ವೆಂಕಟರಾಮ ಭಟ್ಟ ಸುಳ್ಯ ಅವರಿಗೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ಕೊಡಮಾಡುವ ಕೀ.ವ. ಕೇಶವ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ಮಾಜಿ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಲಾಗುತ್ತದೆ.ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮದ ಪ್ರಯುಕ್ತ
ಆ.26ರಂದು ಸಂಜೆ ಸಂಘದ ಕೀರಿಕ್ಕಾಡು ಮಾಸ್ತರ್ ಸಭಾಭವನದಲ್ಲಿ ನಡೆದ ಕೀ. ವ. ಕೇಶವ ಭಟ್ಟ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀದೇವರಿಗೆ ವಿಶೇಷ ಪೂಜಾರ್ಚನೆಯನ್ನು ಭಗವದ್ಗೀತೆ ಪಠನದೊಂದಿಗೆ ನಡೆಸಲಾಯಿತು.ಬಳಿಕ ಡಾ.ರಮಾನಂದ ಬನಾರಿ ಮಂಜೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೆಂಕಟರಾಮ ಭಟ್ಟರಿಗೆ ಪ್ರಶಸ್ತಿಯಿತ್ತು ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಹಿರಿಯ ಕಲಾವಿದರೂ ಸಾಹಿತಿಗಳೂ ಆದ ನಾರಾಯಣ ದೇಲಂಪಾಡಿ ಕೀರಿಕಾಡು ವನಮಾಲ ಕೇಶವ ಭಟ್ಟರ ಸಾಹಿತ್ಯ ಕಲಾರಾಧನೆ, ಜೀವಭಾವಗಳನ್ನು ಸ್ಮರಿಸಿ ಸಂಸ್ಮರಣಾ ಭಾಷಣ ಗೈದರು.ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯರು ಅಭಿನಂದನಾ ಭಾಷಣ ಮಾಡಿದರು.ರಾಮಣ್ಣ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಯಕ್ಷಗಾನ ತಾಳಮದ್ದಳೆ:
ಬಳಿಕ ಶ್ರೀಕೃಷ್ಣ ಜನನ – ರಾಜಸೂಯಾಧ್ವರ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ಮೋಹನ ಮೆಣಸಿನಕಾನ, ರಚನಾ ಚಿದ್ಗಲ್, ಚೆಂಡೆ ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ, ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಶಿವಶಂಕರ ದಿವಾಣ, ವೆಂಕಟರಾಮ ಭಟ್ಟ ಸುಳ್ಯ, ಡಾ.ರಮಾನಂದ ಬನಾರಿ, ಬೆಳ್ಳಿಪ್ಪಾಡಿ ಸದಾಶಿವ ರೈ, ನಾರಾಯಣ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ಯಂ.ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಪದ್ಮನಾಭ ರಾವ್ ಮಯ್ಯಾಳ, ಐತ್ತಪ್ಪ ಗೌಡ ಮುದಿಯಾರು, ರಾಮನಾಯ್ಕ ದೇಲಂಪಾಡಿ, ಮಾಸ್ಟರ್ ಹರ್ಷವರ್ಧನ ರಾವ್ ಭಾಗವಹಿಸಿದರು.
ಈಶ್ವರಿ ಪೃಥ್ವಿ ಹಾಗೂ ಅಹಲ್ಯಾ ಬನಾರಿ ಅವರ ಪ್ರಾರ್ಥನೆಯೊಂದಿಗೆ ಜರಗಿದ ಸಭಾ ಕಾರ್ಯಕ್ರಮದ ಮಧ್ಯದಲ್ಲಿ ಇತ್ತೀಚೆಗೆ ಅಗಲಿದ ಸಂಘದ ಕಲಾ ಭಾಗವತ ಮಡ್ವ ಶಂಕರನಾರಾಯಣ ಭಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮೌನಪ್ರಾರ್ಥನೆಯನ್ನು ಸಲ್ಲಿಸಿ ಪ್ರಾರ್ಥಿಸಲಾಯಿತು.ಚಂದ್ರಶೇಖರ ಏತಡ್ಕ, ವೆಂಕಪ್ಪಯ್ಯ ದೇಲಂಪಾಡಿ, ಈಶ್ವರಿ ಪೆರುಂಬಾರು, ಪದ್ಮಿನಿ ಮೀನಗದ್ದೆ, ಶಾಂತಾಕುಮಾರಿ ದೇಲಂಪಾಡಿ, ಗೋಪಾಲಯ್ಯ ಕೋಟಿಗದ್ದೆ, ಪಡಾರು ತಿರುಮಲೇಶ್ವರ ಭಟ್, ವೇದಮೂರ್ತಿ ಗೋವಿಂದ ಭಟ್, ಪೂರ್ಣಿಮ ಬನಾರಿ ಮತ್ತಿತರರು.ಗೋಕುಲಾಷ್ಟಮಿಯ ಈ ಕಲಾ ವೈಭವದ ಕಾರ್ಯಕ್ರಮದಲ್ಲಿ ಸಹಕರಿಸಿದರು.ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ವಂದಿಸಿದರು.