ಕಾರ್ಡಿಫ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (65) ಹಾಗೂ ಶ್ರೇಯಸ್ ಅಯ್ಯರ್ (66) ಅರ್ಧಶತಕಗಳ ಹೊರತಾಗಿಯೂ ಟೀಮ್ ಇಂಡಿಯಾ 44 ಓವರ್ಗಳಲ್ಲಿ 233 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ ನಾಯಕ ಶುಭಮನ್ ಗಿಲ್ ಹಾಗೂ
ರೋಹಿತ್ ಶರ್ಮಾ ಉತ್ತಮ ಆರಂಭವೊದಗಿಸುವ ಸೂಚನೆ ನೀಡಿದರು. ಆದರೆ 31 ರನ್ ಗಳಿಸಿದ ಗಿಲ್ ಪೆವಿಲಿಯನ್ ಹಿಂತಿರುಗಿದರು.
ಮತ್ತೊಂದೆಡೆ ರೋಹಿತ್ ಶರ್ಮಾ 26 ರನ್ ಗಳಿಸಿ ನಿರಾಸೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಕೊಹ್ಲಿ, ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.ಈ ನಡುವೆ ಇಶಾನ್ ಕಿಶನ್ (1) ವಿಕೆಟ್ ನಷ್ಟವಾಯಿತು. ಬಳಿಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಜೊತೆಗೂಡಿದ ಕೊಹ್ಲಿ, 67 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.ಆಕರ್ಷಕ ಅರ್ಧಶತಕ ಗಳಿಸಿದ ಕೊಹ್ಲಿ 66 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದರು.
ಆದರೆ ಕೊಹ್ಲಿ ವಿಕೆಟ್ ಪತನದ ಬೆನ್ನಲ್ಲೇ ಅಯ್ಯರ್ಗೆ ಕೆಳ ಕ್ರಮಾಂಕದ ಬ್ಯಾಟರ್ಗಳಿಂದ ಬೆಂಬಲ ಸಿಗಲಿಲ್ಲ. ಆಲ್ರೌಂಡ್ ಆಟಗಾರರಾದ ವಾಷಿಂಗ್ಟನ್ ಸುಂದರ್ 2, ಅಕ್ಷರ್ ಪಟೇಲ್ 1 ಹಾಗೂ ಶಿವಂ ದುಬೆ ಶೂನ್ಯಕ್ಕೆ ಔಟ್ ಆದರು. ಅಯ್ಯರ್ 71 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ಗಳಿಂದ 66 ರನ್ ಗಳಿಸಿದರು. ಕೊನೆಯಲ್ಲಿ ಜಸ್ಪ್ರೀತ್ ಬೂಮ್ರಾ ಅಜೇಯ 20 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಇನ್ನುಳಿದಂತೆ ಗುರ್ನೂರ್ ಬ್ರಾರ್ 7 ರನ್ ಗಳಿಸಿದರು.ಆಂಗ್ಲರ ಪರ ಜೋಫ್ರಾ ಆರ್ಚರ್ ಹಾಗೂ ಗಸ್ ಅಟ್ಕಿನ್ಸನ್ ತಲಾ ಮೂರು ಮತ್ತು ಸಕೀಬ್ ಮಹಮೂದ್ ಎರಡು ವಿಕೆಟ್ ಗಳಿಸಿ ಮಿಂಚಿದರು.








