*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕತ್ತಲು ಬೆಳಕಿನಾಟದ ವರ್ಣ ವೈಭವ, ಆಕಾಶದಲ್ಲಿ ವರ್ಣ ಚಿತ್ತಾರ ಬಿಡಿಸಿದ ಸಿಡಿ ಮದ್ದು ಪ್ರಯೋಗ, ಝಗಮಗಿಸುವ ವಿದ್ಯುತ್ ದೀಪಗಳ ವರ್ಣಮಯ ಅಲಂಕಾರ, ಜನಮನ ಗೆದ್ದ ಸ್ತಬ್ಧ ಚಿತ್ರಗಳ ಮೋಹಕ ಭಂಗಿ.. ಅಬ್ಬರಿಸಿದ ಡಿಜೆ ತಾಳಕ್ಕೆ ನೃತ್ಯದ ಸೊಬಗು ನೀಡಿದ ಯುವ ಸಮೂಹ, ಹುಲಿ ವೇಷ, ಪಿಲಿ ಕುಣಿತ.. ಚೆಂಡೆ ವಾದ್ಯ ಮೇಳಗಳು.. ಹೀಗೆ ಸುಳ್ಯ ನಗರದಲ್ಲಿ ವರ್ಣನಾತೀತ ಚಿತ್ತಾರ ಬಿಡಿಸಿದ ವರ್ಣ ರಂಜಿತ
ಶೋಭಾಯಾತ್ರೆಯೊಂದಿಗೆ ಒಂಭತ್ತು ದಿನಗಳ ಕಾಲ ನಡೆದ ವೈಭವದ
ಸುಳ್ಯ ದಸರಾ ಸಮಾಪನಗೊಂಡಿತು. ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ , ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾ ಸರ್ವಾಲಂಕೃತಗೊಂಡ ರಥದಲ್ಲಿ ಸಾಗಿದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳಿಸುವುದರೊಂದಿಗೆ ಸಂಪನ್ನಗೊಂಡಿತು. ವಿಶೇಷವಾಗಿ ಅಲಂಕರಿಸಿದ ವಿದ್ಯುತ್ ದೀಪಗಳಿಂದ
ಕಂಗೊಳಿಸಿದ ಮಂಟಪದಲ್ಲಿ ಕುಳ್ಳಿರಿಸಿದ ಶ್ರೀದೇವಿಯ ವಿಗ್ರಹ ಶೋಭಾಯಾತ್ರೆಯ ಮುಂಭಾಗದಲ್ಲಿ ಮತ್ತು ಅದರ ಹಿಂದೆ ಸಾಲಾಗಿ ಸಾಗಿ
ಬಂದ ಆಕರ್ಷಕ ಸ್ತಬ್ಧ ಚಿತ್ರಗಳು.. ಎಲ್ಲೆಡೆ ಆವರಿಸಿದ ಕತ್ತಲನ್ನು ಸೀಳಿ ಬಂದ ಬೆಳಕಿನ ಕಿರಣಗಳು ಹೊಸ ವರ್ಣ ಲೋಕವನ್ನು ಸೃಷ್ಠಿಸಿತು. ಶೋಭಾಯಾತ್ರೆಯು ಶ್ರೀ ಶಾರದಾಂಬಾ ಕಲಾ ವೇದಿಕೆಯಿಂದ ಹೊರಟು ನಗರದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಮೈಮನ ರೋಮಾಂಚನಗೊಳಿಸಿದ 15 ಕ್ಕೂ ಹೆಚ್ಚು ಚಲಿಸುವ ಚಿತ್ತಾಕರ್ಷಕ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಕಿವಿಗಪ್ಪಳಿಸಿದ ನಾಸಿಕ್ ಬ್ಯಾಂಡ್ನ ಅಬ್ಬರ, ಕೊಂಬು, ಕಹಳೆ, ವಾಲಗ, ವಿಶೇಷ ಸಿಡಿಮದ್ದು ಹೀಗೆ ಸುಳ್ಯ ನಗರದಲ್ಲಿ ಹಲವು ಗಂಟೆಗಳ ಕಾಲ ನಡೆದ ಶೋಭಾಯಾತ್ರೆ ಅಕ್ಷರಷಃ ನೋಡುಗರ ಕಣ್ಣಿಗೆ ಹಬ್ಬವನ್ನೇ ಸೃಷ್ಠಿಸಿತು. ಚಲಿಸುವ ಹುಲಿ, ಹುಲಿ ವೇಷಗಳು ವಿವಿಧ ಪುರಾಣ ಕಥೆಗಳನ್ನು ಆಧರಿಸಿ
ಪ್ರಸ್ತುತ ಪಡಿಸಿದ ಚಲಿಸುವ ಸ್ತಬ್ಧ ಚಿತ್ರಗಳು, ಯಕ್ಷಗಾನ ವೇಷಗಳು, ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ, ವರ್ಣಮಯ ಅಲಂಕಾರದಲ್ಲಿ ಪುರಾಣ ವೇಷಗಳು, ದೇವಿ ಮಹಾತ್ಮೆ, ಏಕದಂತ ವಿನಾಯಕ, ಹಲವು ದೇವರುಗಳ ಚಲಿಸುವ ಸ್ತಬ್ಧ ಚಿತ್ರಗಳು, ಕಂಬಳ ಕೋಣಗಳು, ಚಲಿಸುವ ಕೂರ್ಮಾವತಾರ, ನೃತ್ತ ಭಜನೆ ಸೇರಿದಂತೆ ಹತ್ತಾರು
ಆಕರ್ಷಣೆಗಳು ಮನಸೂರೆಗೊಂಡವು. ಈ ಮಧ್ಯೆ ಇಳೆಗೆ ತಂಪೆರೆದು ಮಳೆಯೂ ಆಗಮಿಸಿತು. ಮಳೆಯ ಸಿಂಚನವೂ ದಸರಾ ಉತ್ಸವದ ಉತ್ಸಾಹವನ್ನು ತಣಿಸಲಿಲ್ಲ. ಸಾವಿರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ
ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಹತ್ತು ಹಲವು ಆಕರ್ಷಣೆಗಳೊಂದಿಗೆ ಸಾಗಿದ ಶ್ರೀದೇವಿಯ ಅದ್ಧೂರಿ ಶೋಭಾಯಾತ್ರೆಯನ್ನು ಭಕ್ತ ಸಮೂಹ ಭಕ್ತಿ ಭಾವದಿಂದ ಕಣ್ತುಂಬಿ ಕೊಂಡರು. ಸಾವಿರಾರು ಮಂದಿ ಶೋಭಾಯಾತ್ರೆಯ ಜೊತೆ ಹೆಜ್ಜೆ ಹಾಕಿದರು. ನೂರಾರು ಯುವಕರು ಡಿಜೆ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಒಟ್ಟಿನಲ್ಲಿ ಸುಳ್ಯಕ್ಕೆ ಮತ್ತೊಂದು ಜಾತ್ರೆಯ ಸೊಬಗನ್ನು ತಂದಿತ್ತ ನಾಡಹಬ್ಬ ದಸರಾ ಸಂಪನ್ನಗೊಂಡಿತು. ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ದಾಸ್,ಸಾರ್ವಜನಿಕ ಶ್ರಿ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಶ್ರೀ ಶಾರದಾಂಬಾ ಸೇವಾ ದಸರಾ
ಸೇವಾ ಟ್ರಸ್ಟ್ನ ಅಧ್ಯಕ್ಷ ನವೀನ್ ಚಂದ್ರ, ಉಪಾಧ್ಯಕ್ಷರಾದ ನಾರಾಯಣ ಕೇಕಡ್ಕ, ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ, ಪದಾಧಿಕಾರಿಗಳಾದ ಸುನಿಲ್ ಕೇರ್ಪಳ, ರಾಜು ಪಂಡಿತ್, ಸತೀಶ್ ಎಂ.ಕೆ, ಮಂಜುನಾಥ ಬಳ್ಳಾರಿ, ಮತ್ತಿತರರ ಪದಾಧಿಕಾರಿಗಳು ಅದ್ದೂರಿ ದಸರಾ ಮೆರವಣಿಗೆಯ
ನೇತೃತ್ವ ವಹಿಸಿದ್ದರು.