ನಿಶಿನ್:ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ 19 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಭಾರತ ತಂಡ ಚಿನ್ನದ ಪದಕ ಗೆದ್ದಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಅಭಿಷೇಕ್ ಶರ್ಮಾ (61) ಹಾಗೂ
ತಿಲಕ್ ವರ್ಮಾ (51*) ಬಾರಿಸಿದ ಬಿರುಸಿನ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಇದರೊಂದಿಗೆ ಸತತ ಎರಡು ಬಾರಿಯ ವಿಶ್ವ ಚಾಂಪಿಯನ್ ಭಾರತ, ಏಷ್ಯನ್ ಗೇಮ್ಸ್ನಲ್ಲೂ ಕೀರ್ತಿ ಪತಾಕೆಯನ್ನು ಹಾರಿಸಿದೆ. ಪಾಕಿಸ್ತಾನದ ಪರ ಹಸನ್ ನವಾಜ್ 51 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಐದು ಬೌಂಡರಿಗಳಿಂದ 96 ರನ್ ಗಳಿಸಿ ಹೋರಾಟ ನಡೆಸಿದರು. ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.ಭಾರತದ ಪರ
ಅಭಿಷೇಕ್ 20 ಹಾಗೂ ತಿಲಕ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಅಭಿಷೇಕ್ 28 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿಗಳಿಂದ 61 ರನ್ ಗಳಿಸಿದರು. ತಿಲಕ್ ವರ್ಮ 22 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳಿಂದ 51 ರನ್ ಗಳಿಸಿ ಔಟಾಗದೆ ಉಳಿದರು.ವೈಭವ್ (15),ಸಂಜು ಸ್ಯಾಮ್ಸನ್ (2) ವೈಫಲ್ಯ ಅನುಭವಿಸಿದರು. ನಾಯಕ ಶ್ರೇಯಸ್ ಅಯ್ಯರ್ (21) ಹಾಗೂ ಇಶಾನ್ ಕಿಶನ್ (20) ಶಿವಂ ದುಬೆ (27) ಉತ್ತಮ ನೆರವು ನೀಡಿದರು.
ಏಷ್ಯನ್ ಗೇಮ್ಸ್ನಲ್ಲಿ ಗಾಲ್ಫ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಮೈಸೂರಿನ ಪ್ರಣವಿ ಅರಸ್ ಚಿನ್ನ ಗೆದ್ದಿದ್ದಾರೆ. ಆ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆಯಿಂದ ಭಾರತ ಮಹಿಳಾ ತಂಡವೂ ಬೆಳ್ಳಿ ಪದಕವೂ ಲಭಿಸಿದೆ.
ಭಾರತದ ಕುಂಕುಮ್ ಮೊಹೋಡ್ ಏಷ್ಯನ್ ಗೇಮ್ಸ್ನ ವೈಯಕ್ತಿಕ ರಿಕರ್ವ್ ಆರ್ಚರಿಯಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಇದು ಈ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ವೈಯಕ್ತಿಕ ಚಿನ್ನವಾಗಿದೆ.
ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಓ ಯೆಜಿನ್ ವಿರುದ್ಧ 5-5ರಲ್ಲಿ ಸಮಬಲ ಸಾಧಿಸಿದ ಕುಂಕುಮ್, ಶೂಟ್ಔಟ್ನಲ್ಲಿ 10 ಅಂಕ ಗಳಿಸಿ 6-5 ಅಂತರದಲ್ಲಿ ಗೆದ್ದರು.ಈ ಚಿನ್ನದೊಂದಿಗೆ ಕುಂಕುಮ್ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಮೂರು ಪದಕ ಗೆದ್ದಿದ್ದಾರೆ. ಮಹಿಳಾ ತಂಡ ವಿಭಾಗದಲ್ಲಿ ಚಿನ್ನ ಹಾಗೂ ಮಿಶ್ರ ಜೋಡಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.









