ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ ಇಂದು ಮತ್ತು ನಾಳೆ(ಅ.3 ಮತ್ತು 4) ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಅಮೆಚೂರು ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ
ನಿಯಮಾವಳಿಗಳಂತೆ ನಡೆಯುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ವಿವಿಧ ರಾಜ್ಯಗಳ ಆಹ್ವಾನಿತ 12 ಪುರುಷ ತಂಡಗಳು ಭಾಗವಹಿಸಲಿವೆ. ಕಬಡ್ಡಿಯಲ್ಲಿ ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಖ್ಯಾತನಾಮರಾದ ಆಟಗಾರರು ಹಲವು ಮಂದಿ ಪ್ರೊ ಕಬಡ್ಡಿ ತಂಡದ ಆಟಗಾರರು ಭಾಗವಹಿಸಲಿದ್ದಾರೆ. ಇಂದು ಸಂಜೆ 4 ಗಂಟೆಯಿಂದ ಕಬಡ್ಡಿ ಕಲರವ ಆರಂಭಗೊಳ್ಳಲಿದೆ. ವಿವಿಧ ತಂಡಗಳ ಆಟಗಾರರು ಈಗಾಗಲೇ ಸುಳ್ಯಕ್ಕೆ ಆಗಮಿಸಿದ್ದಾರೆ. ಪಂದ್ಯಾಟಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.
ಆಕರ್ಷಕ ಮ್ಯಾಟ್ ಅಂಕಣ, ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ಸಿದ್ಧಗೊಂಡಿದೆ.ಝಗಮಗಿಸುವ ದೀಪಗಳ ಅಲಂಕಾರ ವಿಶೇಷ ಆಕರ್ಷಣೆಯಾಗಿದೆ. ಸಂಘದ ವತಿಯಿಂದ ಮೂರನೇ ಬಾರಿ ಸುಳ್ಯದಲ್ಲಿ ಕಬಡ್ಡಿ ಉತ್ಸವ ಸಂಘಟಿಸಲಾಗುತಿದೆ. ಈ ಬಾರಿ ವಿಜೇತ ತಂಡಕ್ಕೆ
ಪ್ರಥಮ ಬಹುಮಾನ ಒಂದು ಲಕ್ಷ, ದ್ವಿತೀಯ ಬಹುಮಾನ 70 ಸಾವಿರ, ತೃತೀಯ ಮತ್ತು ಚತುರ್ಥ ಬಹುಮಾನ ತಲಾ 35 ಸಾವಿರದಂತೆ ನೀಡಲಾಗುವುದು ಎಂದು ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಜಿ.ಪಿ.ಸಂಶುದ್ದೀನ್ ತಿಳಿಸಿದ್ದಾರೆ.









