ಸುಳ್ಯ: ಬಿಜೆಪಿ ರೈತ ಮೋರ್ಚಾ ಕರ್ನಾಟಕ ಸುಳ್ಯ ಬಿಜೆಪಿ ಮಂಡಲದ ವತಿಯಿಂದ ಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸರಕಾರದ ನಡೆ ಖಂಡಿಸಿ ಸುಳ್ಯ ತಾಲೂಕು ಕಛೇರಿ ಬಳಿ ಸೋಮವಾರ ಪ್ರತಿಭಟನಾ ಸಭೆ ನಡೆಸಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸರಕಾರದ ಜನವಿರೋಧಿ ನೀತಿಯಿಂದ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದಿದೆ. ಸರಕಾರ ರೈತ ಪರ ಎಂದು ಪ್ರಚಾರ ಮಾಡಿ ಇಂದು ರೈತ ವಿರೋಧಿ ನೀತಿ ಅನುಸರಿಸಿ ರೈತರನ್ನು ಸಂಕಷ್ಟಕ್ಕೆ
ಸಿಲುಕಿಸುವ ಕೆಲಸ ಮಾಡುತ್ತಿದೆ. ರೈತರ ಜೀವನ ಸುಗಮವಾಗಲು ಹೋರಾಟ ಅಗತ್ಯವಾಗಿದೆ. ಬಿಜೆಪಿ ಮುಂದೆಯೂ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ‘ ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನದಿಂದ ಅಭಿವೃದ್ಧಿಗೆ ಬರ ಎದುರಾಗಿದೆ. ಕೃಷಿಕರಿಗೆ, ಜನ ಸಾಮಾನ್ಯರಿಗಾಗಿ ಬಿಜೆಪಿ ಸರಕಾರ ಅನುಷ್ಠಾನ ಮಾಡಿರುವ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿ ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಕಾಂಗ್ರೆಸ್ ಸರಕಾರ ಗ್ಯಾರಂಟಿ ಜಾರಿಗೊಳಿಸುವ ನೆಪದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗದ ಸ್ಥಿತಿ ಸರಕಾರಕ್ಕೆ ಬಂದಿದೆ. ಬರ ಘೋಷಣೆಗೆ ಸರಕಾರ ಹಿಂದೇಟು ಹಾಕುತ್ತಿದೆ. ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಪ್ರಮುಖರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೆನಾಲ ರೈ, ಚನಿಯ ಕಲ್ತಡ್ಕ, ವಿನಯ ಕುಮಾರ್ ಕಂದಡ್ಕ, ಮಹೇಶ್ ರೈ ಮೇನಾಲ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ ಪುಲಸ್ತ್ಯಾ ರೈ ಕಡಬ, ಪುಷ್ಪಾವತಿ ಬಾಳಿಲ,
ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಸರಕಾರದ ವಿರುದ್ಧ ದಿಕ್ಕಾರ ಕೂಗಲಾಯಿತು. ರಮೇಶ್ ಕಲ್ಪುರೆ ಸ್ವಾಗತಿಸಿದರು. ಮಹೇಶ್ ರೈ ಮೇನಾಲ ವಂದಿಸಿದರು. ಬಳಿಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.