ಡಾ.ಸುಂದರ ಕೇನಾಜೆ.
ಕಳುಕುಂದ ಶಿವರಾಯ (ನಿರಂಜನ) ಹುಟ್ಟಿ ಶತಮಾನ ತುಂಬಿದೆ. ಇದು ಅವರ ಜನ್ಮ ಶತಮಾನೋತ್ಸವದ ವರ್ಷ. ಶಿವರಾಯರು ಸುಬ್ರಹ್ಮಣ್ಯ ಸಮೀಪದ ಕುಳ್ಕುಂದದಲ್ಲಿ ಹುಟ್ಟಿ, ಸುಳ್ಯದಲ್ಲಿ ಪ್ರಾಥಮಿಕ, ಇಂದಿನ ಕೇರಳದ ನೀಲೇಶ್ವರದಲ್ಲಿ ಪ್ರೌಢ ಶಿಕ್ಷಣ, ಮಂಗಳೂರು, ಮೈಸೂರು, ಧಾರವಾಡ, ಬೆಂಗಳೂರುಗಳಲ್ಲಿ ವೃತ್ತಿ ಮತ್ತು ಪ್ರವೃತ್ತಿ ಜೀವನ ನಡೆಸುವ ಹಂತಗಳ ಬಹುಭಾಗದಲ್ಲಿ ಅವರ ತಾಯಿ ಜೊತೆಗಿದ್ದರು. ಆದ್ದರಿಂದ ಕುಳುಕುಂದ ಶಿವರಾಯರು ಎಂಬ ವ್ಯಕ್ತಿ ನಿರಂಜನರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡುವ, ತಾನು ನಂಬಿಕೊಂಡು ಬಂದ ಸಿದ್ಧಾಂತ ಮತ್ತು ಜೀವನ ಪ್ರೀತಿಯನ್ನು ಹಂಚುವ ಕಾಯಕದ ಮೂಲಬೇರು ಅವರ ತಾಯಿ ಚಿನ್ನಮ್ಮ(ಚೆನ್ನಮ್ಮ)ಎಂದರೆ ತಪ್ಪಾಗಲಾರದು.ಈ ತಾಯಿಯ ನೆರಳು ಹಾಗೂ ಪರಿಸರದ ಸೂಕ್ಷ್ಮಗಳ ಜೊತೆಗೆ ಬೆಳೆದು, ಆ ಕಾಲದಲ್ಲಿ (೧೯೨೫) ಜಗತ್ತಿನಲ್ಲಿ ಬೀಸಲು ಆರಂಭವಾದ ಪ್ರಗತಿಯ ಪರಿಕಲ್ಪನೆಯನ್ನು ತನ್ನ ಸಾಹಿತ್ಯದ ಮೂಲಕ ದಾಟಿಸಲು ಆರಂಭಿಸಿದ
ನಿರಂಜನರು, ತಮ್ಮ ತಾತ್ವಿಕ ಮತ್ತು ನಿಷ್ಠೆಯ ಮೌಲ್ಯಗಳನ್ನು ಈ ಒಂದು ಶತಮಾನ ಮಾತ್ರವಲ್ಲ, ಚಿರಕಾಲವೂ ಈ ನಾಡು ನೆನಪಿಟ್ಟುಕೊಳ್ಳುವಂತೆ ಮಾಡಿದವರು.೧೯೪೦ರ ಕಾಲದಲ್ಲಿ ಭಾರತದ ಬಂಗಾಳ ಭಾಗದಲ್ಲಿ ದೃಢವಾಗಿ ನೆಲೆನಿಂತಿದ್ದ ಇದೇ ಪ್ರಗತಿಪರ ಧೋರಣೆಗಳನ್ನು ಕನ್ನಡ ನಾಡಿಗೂ ಪರಿಚಯಿಸಲು ತೊಡಗಿದ ಬರಹಗಾರರಾದ ಅನಕೃ, ಕಟ್ಟಿಮನಿ, ತರಾಸು, ಚದುರಂಗ ಇವೇ ಮೊದಲಾದವರ ಸಾಲಿನಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿದ್ದ ಹೆಸರು ನಿರಂಜನರದ್ದು. ಆನಕೃರವರು ಪ್ರಗತಿಶೀಲ ಸಾಹಿತ್ಯದ ಗುರಿಯನ್ನು ಮನುಷ್ಯ ವಾಂಛೆಗೆ ಸೀಮಿತಗೊಳಿಸುವ ಹಂತಕ್ಕೆ ತಲುಪಿದಾಗ ಅದನ್ನು ತೀವೃವಾಗಿ ವಿರೋಧಿಸಿ, “ಮಾನವ ಈಗಿರುವುದಕ್ಕಿಂತ ಉತ್ತಮ ಬದುಕಿಗೆ ಕೊಂಡೊಯ್ಯವುದೇ ಪ್ರಗತಿಶೀಲ, ಅದು ಭಾವಾತೀತವಾದುದು ಮತ್ತು ಸಮಾನತೆಯ ಪರಿಕಲ್ಪದಿಂದ ಕೂಡಿರುವಂತದ್ದು” ಎಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದರು. ಅಲ್ಲದೇ ಈ ನೆಲೆಯ ಸಾಹಿತ್ಯ ರಚನೆಯಲ್ಲೂ ತೊಡಗಿಕೊಂಡರು. ಇದು ಕನ್ನಡ ನಾಡಿನಲ್ಲಿ ವಚನ ಕ್ರಾಂತಿಯ ನಂತರ ನಡೆದ ಇನ್ನೊಂದು ಕ್ರಾಂತಿ ಎಂದೂ ಕರೆಯಬಹುದು.ನವೋದಯದ ಭಾವುಕತೆ, ರಮ್ಯ ಮತ್ತು ಕಲ್ಪನಾ ವಿಲಾಸಗಳನ್ನು ಮೀರಿ ವಾಸ್ತವದ ಅಡಿಯಲ್ಲಿ ಚಿಂತನೆ ಮಾಡುವಂತೆ ಪ್ರೇರೇಪಿಸಿದವರಲ್ಲೂ ನಿರಂಜನರೇ ಪ್ರಮುಖರು. ಇದು ನವೋದಯದ ಬಿಡುಗಡೆಗೆ ಬೆನ್ನುಡಿಯನ್ನೂ ಕನ್ನಡದ ಮನಸ್ಸುಗಳು ಬಂಡಾಯದ ಕಡೆಗೆ ತೆರೆದುಕೊಳ್ಳುವುದಕ್ಕೆ ಮುನ್ನುಡಿಯನ್ನು ಬರೆಯಿತು.
ಈ ರೀತಿಯ ಯೋಚನೆಯ ಹಿನ್ನೆಲೆಯಲ್ಲಿ ನಿರಂಜನರು ರಚಿಸಿದ ಕಥೆ, ಕಾದಂಬರಿ ಮತ್ತು ಅಂಕಣಗಳು ಈ ನಾಡಿಗೆ ಎಂದೆಂದಿಗೂ ಪ್ರಸ್ತುತ. ಅವರ ಮೊದಲ ಕಾದಂಬರಿ “ವಿಮೋಚನೆ”(೧೯೫೨) ವರ್ಗ ತಾರತಮ್ಯ ಮತ್ತು ತುಳಿತಕ್ಕೊಳಗಾದ ವ್ಯಕ್ತಿಗಳ ಬವಣೆಯನ್ನು ವಿವರಿಸುವಂತದ್ದು. ಇಲ್ಲಿಯ ಕಥಾನಾಯಕನ ದುರಂತ ಸಾವು,(ಬಹುತೇಕ ಇವರ ಎಲ್ಲ ಕಾದಂಬರಿಗಳ ಅಂತ್ಯವೂ ದುರಂತವೇ ಆಗಿದೆ) ಇಂದಿನ ಸಾಮಾಜಿಕ ಸ್ಥಿತಿಗೆ ಹಿಡಿದ ಕನ್ನಡಿ. ಇದೇ ರೀತಿ ಆರಂಭದ ಮತ್ತು ಕೊನೆಯ ಎರಡು ಪ್ರಸಿದ್ಧ ಕಾದಂಬರಿಗಳಾದ ಚಿರಸ್ಮರಣೆ(೧೯೫೫) ಮತ್ತು ಮೃತ್ಯುಂಜಯ(೧೯೭೬) ಐತಿಹಾಸಿಕ (ಕಲ್ಯಾಣ ಸ್ವಾಮಿ ಕೂಡ) ವಿಷಯಗಳಿಗೆ ಸಂಬಂಧಿಸಿದ್ದಾರೂ ಜನಸಾಮಾನ್ಯರು ಅದರಲ್ಲೂ ರೈತರು ದಬ್ಬಾಳಿಕೆಯ ವಿರುದ್ಧ ನಿಂತ ಸಂದರ್ಭವನ್ನು ಚಿತ್ರಿಸುವಂತದ್ದು. ಈ ದಬ್ಬಾಳಿಕೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ ಅದು ಜಾಗತಿಕವಾದುದು ಎನ್ನುವುದನ್ನು ಮೃತ್ಯುಂಜಯದ ಮೂಲಕ ಸ್ಪಷ್ಟಪಡಿಸುತ್ತಾರೆ.

ಸುಮಾರು ಇಪ್ಪತ್ತೈದು ವರ್ಷಗಳಲ್ಲಿ ವರ್ಷಗಳಷ್ಟೇ ಕಾದಂಬರಿಗಳನ್ನು ರಚಿಸಿದ ನಿರಂಜನರು, ತಮ್ಮ ಬಹುತೇಕ ಕಾದಂಬರಿಗಳ ಕಥಾವಸ್ತುವನ್ನು ಬದುಕಿನ ಕಠೋರ ವಾಸ್ತವಗಳನ್ನು ತಿಳಿಸುವಂತದ್ದನ್ನೇ ಆಯ್ಕೆ ಮಾಡಿಕೊಂಡಿದ್ದರು. ತಾನು ಅನುಭವಿಸಿದ ಮತ್ತು ತನ್ನ ಪ್ರಜ್ಞೆಗೆ ನಿಲುಕಿದ ವಿಷಯಗಳಿಗೆ ನವಿರಾದ ನಿರೂಪಣೆಯ ಹಂದರವನ್ನು ಹೆಣೆಯುತ್ತಾ ಅದು ಸಮಾಜದ ಸತ್ಯಗಳನ್ನು ಬಿಚ್ಚಿಡುವ ಕೆಲಸಗಳಾಗಿ ತೆರೆದುಕೊಳ್ಳುತ್ತವೆ. ಅವರ ಪ್ರಸಿದ್ಧ ಕಥೆ “ಕೊನೆಯ ಗಿರಾಕಿ”(೧೯೫೧)ಯೂ ಈ ನಿಟ್ಟಿನಲ್ಲಿ ಬಹಳ ಚರ್ಚಿತವಾದ ಕಥಾವಸ್ತು, ಹೆಣ್ಣಿನ ಲೈಂಗಿಕ ಶೋಷಣೆಯನ್ನು ಆತ್ಯಂತಿಕವಾಗಿ ತೆರೆದಿಟ್ಟ ಕಥೆ ಇದು. ಒಂದರ್ಥದಲ್ಲಿ ಇದನ್ನು ಭಾವವಿರೇಚನೆಯ ಗ್ರೀಕ್ ರುದ್ರ ನಾಟಕದ ಪ್ರಭಾವಕ್ಕೆ ಸರಿಸಮಾನವಾದ ಅಥವಾ ನಿರಸನಗೊಳಿಸುವ ಜೈನಕಾವ್ಯಗಳು ಬೀರಬಹುದಾದ ಪರಿಣಾಮಗಳಂತಹಾ ಕಥೆ ಎಂದೂ ಕರೆಯಬಹುದು. ಹೀಗೆ ತಮ್ಮ ಬಹುತೇಕ ಎಲ್ಲ(ಕೆಲವು ಅಂಕಣಗಳನ್ನು ಹೊರತುಪಡಿಸಿ) ಬರಹಗಳಲ್ಲಿ ಜಮೀನ್ದಾರಿ ಅಥವಾ ಬಂಡವಾಳಶಾಹಿ, ಪುರುಷಾಧಿಕ್ಯ ಅಥವಾ ಶೋಷಣೆಯ ವ್ಯವಸ್ಥೆಯನ್ನು ವಿರೋಧಿಸುತ್ತಾ ಅದನ್ನು ಮೀರಿ ಬದುಕುವ ತಿಳುವಳಿಕೆ ಮತ್ತು ನೈತಿಕತೆಯನ್ನು ರೂಢಿಸಿಕೊಳ್ಳುತ್ತಾ ಸಾಗುವುದೇ ಪ್ರಗತಿಶೀಲ ಎಂದು ಖಚಿತವಾಗಿ ಹೇಳುತ್ತಾರೆ. ನಿರಂಜನರು ತಾವು ನಂಬಿಕೊಂಡು ಬಂದ ಸತ್ಯಗಳ ಜೊತೆ ಎಂದೂ ರಾಜಿ ಮಾಡಿಕೊಂಡವರಲ್ಲ. ಪತ್ರಕರ್ತರಾಗಿ ನಂತರ ಸೃಜನಶೀಲ ಬರಹವನ್ನೇ ಬದುಕಾಗಿಸಿದ ಸಂದರ್ಭದಲ್ಲೂ ಪ್ರಗತಿಪರವಾದ ನಿಲುವುಗಳ ವಚನದಿಂದ ವಿಮುಖರಾದವರೂ ಅಲ್ಲ. ಅವರ ಬಹಳ ಮಹತ್ವದ ಎರಡು ಕೆಲಸಗಳಾದ ಜ್ಞಾನ ಗಂಗೋತ್ರಿ(೭ ಸಂಪುಟ) ಮತ್ತು ವಿಶ್ವಕಥಾಕೋಶ(೨೫ ಸಂಪುಟ) ಎರಡೂ ಕೆಲಸಗಳ ಸಂದರ್ಭದಲ್ಲಾದ ವೈಯಕ್ತಿಕ(ಸಂಗಾತಿ ಅನುಪಮಾರಿಗೂ) ಅನಾರೋಗ್ಯದ ಕಾರಣದಲ್ಲೂ ತನ್ನ ಕೆಲಸವನ್ನು ಸಡಿಲಿಸದೇ ನಿಗದಿತ ಅವಧಿಯಲ್ಲೇ ಮುಗಿಸಿದ್ದರು. ಇದು ಪ್ರಗತಿಯ ಬಗೆಗಿನ ಅವರ ದೃಷ್ಟಿಕೋನ ಮತ್ತು ಕೆಲಸದ ಬದ್ಧತೆಯ ಪ್ರತಿಬಿಂಬ. ಈ ಎರಡೂ ಕೆಲಸಗಳು ಕನ್ನಡ ನಾಡಿಗೆ ಹೊರಜಗತ್ತನ್ನು ಪರಿಚಯಿಸಿದ ಕಾರ್ಯಗಳು, ಈ ರೀತಿಯ ಪರಿಚಯ ಪ್ರಗತಿಯ ಪರಿಚಯವೂ ಆಗಿರುತ್ತದೆ.

ತಾನು ನಂಬಿದ ಜಾತ್ಯಾತೀತ, ಸ್ತ್ರೀ ಸಮಾನತೆ, ರಾಜಕೀಯ ನೈತಿಕತೆ, ವೃತ್ತಿಪರ ಮತ್ತು ವೈಚಾರಿಕ ಅನನ್ಯತೆ ಇವೇ ಮೊದಲಾದ ಗುಣಗಳ ಬಿಗಿಯಲ್ಲೇ ಬದುಕಿದ ನಿರಂಜನರು ಪ್ರಗತಿಶೀಲ ಚಳವಳಿ ಈ ನಾಡಿನಲ್ಲಿ ಜೀವಂತವಾಗಿದ್ದ ಅಲ್ಪ ಅವಧಿಯಲ್ಲೂ ಅದರ ಉಚ್ಛ್ರಾಯ ಸ್ಥಿತಿಯಲ್ಲಿ ಕಾಣಿಸಿಕೊಂಡವರು. ತನ್ನ ಇಡೀ ಕುಟುಂಬವನ್ನೇ ಈ ನೆಲೆಯಲ್ಲಿ ಸಿದ್ಧಗೊಳಿಸಿ ಕರ್ನಾಟಕದಲ್ಲೇ ಅಪೂರ್ವವೆನಿಸಿದವರು.
ಒಟ್ಟಿನಲ್ಲಿ ಶತಮಾನದ ಹಿಂದೆ ಹುಟ್ಟಿ, ಖಚಿತ ಗುರಿಯೊಂದರ ಕಡೆಗೆ ನೆಟ್ಟ ನೇರದಲ್ಲಿ, ದಿಟ್ಟ ದೃಷ್ಟಿಯಲ್ಲಿ ಸಾಗಿ ಒಂದನ್ನೊಂದು ಮೀರುವಂತಹಾ ಚೇತೋಹಾರಿ ಬರಹದಿಂದ ನಮ್ಮನ್ನೆಲ್ಲ ಇಂದಿಗೂ ಪುಳಕಿತರಾಗುವಂತೆ ಮಾಡಿದ ನಿರಂಜನರನ್ನು ನೆನಪಿಸುವುದೇ ಆಪ್ಯಾಯಮಾನ, ಇದು ಈ ನಾಡಿನ ಕರ್ತವ್ಯ ಕೂಡ.

(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)