*ಡಾ.ಸುಂದರ ಕೇನಾಜೆ.
ಕ್ರಾಂತಿ, ಭಕ್ತಿ, ಮಾನವತೆ ಜಗತ್ತಿಗೆ ಜ್ಯೋತಿಯಾದರೆ ಅಲ್ಲೋರ್ವ ಬಸವಣ್ಣನನ್ನು ಕಾಣಬಹುದು. ಅಲ್ಲದೇ ಚರಿತ್ರೆಯ ಪುಟಗಳಲ್ಲಿ ದಾಖಲಾದ ಇವುಗಳನ್ನು ಬಯಸುವವರು ಕೈದೀವಿಗೆಯಾಗಿಯೂ ಬಳಸಬಹುದು. ಈ ಆಧುನಿಕ ಅಥವಾ ಉನ್ನತ ನಾಗರೀಕವೆಂದು ಕರೆಯುವ ಕಾಲದಲ್ಲೇ ಈ ಮೂರು ವಿಷಯಗಳು ಗೊಂದಲದ ಗೂಡಾಗಿ, ಚರ್ಚೆಯ ಭಾಗವಾಗಿ ಅಥವಾ ಅಪಹಾಸ್ಯದ ವಸ್ತುವಾಗುತ್ತಾ ಇರುವಾಗ ಹನ್ನೆರಡನೇ ಶತಮಾನದ ವ್ಯಕ್ತಿಯಿಂದ ಇದಕ್ಕೊಂದು
ಸಾಂತ್ವನದ ಉತ್ತರ ಸಿಕ್ಕಿದೆ ಎನ್ನುವುದೇ ಆಶ್ಚರ್ಯದ ಸಂಗತಿ. ವರ್ತಮಾನದಲ್ಲೂ ನಿರೀಕ್ಷಿಸಲು ಅಸಾಧ್ಯವಾದದ್ದು ಎಂದೋ ನಡೆದು ಹೋಗಿದ್ದರೆ ಅದು ಪವಾಡ ಅಥವಾ ಅಲೌಖಿಕ ಎಂದು ಕರೆಯಲ್ಪಡುತ್ತದೆ. ಆದರೆ ಬಸವಣ್ಣನ ಬದುಕು ಪವಾಡದ ಸಾಲಿಗೆ ಸೇರುವುದಕ್ಕಿಂತಲೂ ವಾಸ್ತವದ ಭಾಗವಾಗಿಯೇ ಇರುವುದರಿಂದ ಇವರನ್ನು ವಸ್ತುನಿಷ್ಠವಾಗಿ ನೋಡಲು ಬಯಸುವವರಿಗೆ ಸಾಧ್ಯತೆಯ ಎಳೆಗಳು ಹೆಚ್ಚು ಸಿಕ್ಕಿ ಬಿಡುತ್ತವೆ. ಅದುವರೆಗೂ ಚರಿತ್ರೆ ಕಾಣದ ಕ್ರಾಂತಿಯನ್ನೂ ಸಮಾನತೆಯ ಸೂತ್ರವನ್ನೂ ಮಾನವತೆಯ ಮಹಾಮುಖವನ್ನೂ ತೋರಿಸಿಕೊಟ್ಟ ಬಸವಣ್ಣನ ಚರಿತ್ರೆ ಖಚಿತವಾದುದು. ಹಾಗಾಗಿ ಇವರನ್ನು ನೋಡುವ ಕಣ್ಣುಗಳು, ಇವರ ಚಟುವಟಿಕೆಗಳನ್ನು ಕಾಲಾತೀತವಾಗಿಯೂ ವಾಸ್ತವದ ಪ್ರತಿರೂಪವಾಗಿಯೂ ನೋಡಬೇಕಾಗುತ್ತದೆ.
ಅನುಭವಕ್ಕೆ ಬೆಲೆಯೇ ಇಲ್ಲದ ಕಾಲದಲ್ಲಿ ಅನುಭವ ಮಂಟಪದ ಮೂಲಕ ಅನುಭವವೇ ಜ್ಞಾನವೆಂದು ಹೇಳಿದ, ಕಾಯಕದ ಕಾರ್ಯವೇ ಅಸಮಾನತೆಗೆ ಹೇತುವಾಗಿ ಬದುಕುತ್ತಿದ್ದ ಜನಕ್ಕೆ ಭಕ್ತಿಯ ಖಜಾನೆಯ ಮೂಲಕ ಜಾತಿ ಮೀರುವ ಕಾಯಕವನ್ನು ಕಲಿಸಿಕೊಟ್ಟ, ಧರ್ಮದ ಮೂಲವಿರುವುದು ದಯೆಯಲ್ಲಿ ಮಾತ್ರವೆಂದು ದಾಸೋಹದ ಮೂಲಕ ಮಾನವತೆಯ ನಿಜಾರ್ಥವನ್ನು ತಿಳಿಸಿದ ಇನ್ನೊಂದು ಚಾರಿತ್ರಿಕ ವ್ಯಕ್ತಿತ್ವ ಹನ್ನೆರಡನೇ ಶತಮಾನದವರೆಗೆ ಹುಟ್ಟಿದ್ದಿಲ್ಲ.
ಕಾಕತಾಳಿಯವೋ ಅಥವಾ ಕಾಲದ ಪ್ರಭಾವವೋ ಆ ನಂತರ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ಮನುಷ್ಯಪರ ಹೋರಾಟ, ಕ್ರಾಂತಿ ಅಥವಾ ಸುಧಾರಣೆಗಳಲ್ಲಿ ಬಸವಣ್ಣ ಹಾಕಿಕೊಟ್ಟ ದಾರಿ ಅಥವಾ ಆ ಮಾದರಿಯ ಛಾಯೆ ಸ್ಪಷ್ಟವಾಗಿ ಗೋಚರಿಸುತ್ತದೆ, ಇದಕ್ಕೆ ಯುಗಧರ್ಮವೂ ಕಾರಣವಾಗಿರಬಹುದು. ಆದರೆ ಈ ಯುಗಧರ್ಮದ

ಪ್ರವರ್ತನೆಯಲ್ಲೂ ಬಸವಣ್ಣನವರೇ ಮೊದಲಿಗರು. ಅಂದರೆ ಸುಮಾರು ಎಂಟನೇ ಶತಮಾನದಿಂದ ಭಾರತದಲ್ಲಿ ಆರಂಭಗೊಂಡ ಧಾರ್ಮಿಕ ಸುಧಾರಣೆಗಳಲ್ಲಾಗಲಿ, ಅದಕ್ಕೂ ಪೂರ್ವದ ಶೈವ, ವೈಷ್ಣವ, ಜೈನ, ಬೌದ್ಧ ಇತ್ಯಾದಿ ಧರ್ಮಗಳ ಪರಿಕಲ್ಪನೆಗಳಲ್ಲಾಗಲಿ, ಜಾಗತಿಕವಾಗಿ ಕಂಡುಬಂದ ಮತ ಸುಧಾರಣೆಗಳಲ್ಲಾಗಲಿ ಅಥವಾ ಸಾಮಾಜಿಕ, ಧಾರ್ಮಿಕ, ಮತ್ತು ಶೈಕ್ಷಣಿಕ ಸುಧಾರಣೆಗಳೆಂಬ ಹೆಸರಿನ ಚಟುವಟಿಕೆಗಳಲ್ಲಾಗಲಿ ಅಂಧಶ್ರದ್ಧೆಯನ್ನು ಮೀರುವ ಪ್ರಗತಿಪರ ನಿಲುವುಗಳನ್ನು ಸಾಬೀತುಪಡಿಸಲು ಪುರಾವೆಗಳಿಲ್ಲ(ಬುದ್ಧನನ್ನು ನೋಡುವ ದೃಷ್ಟಿಯನ್ನು ಹೊರತುಪಡಿಸಿ) ಆದರೆ ಹನ್ನೆರಡನೇ ಶತಮಾನದ ನಂತರ ಈ ದೇಶದಲ್ಲಿ ನಡೆದ ಬಹುತೇಕ ಧಾರ್ಮಿಕ, ಸಾಮಾಜಿಕ ಸುಧಾರಣೆಗಳು, ಭಕ್ತಿ ಪಂಥದ ಚಟುವಟಿಕೆಗಳು, ಎಲ್ಲ ಬಿಟ್ಟು ಬ್ರಿಟೀಷರೇ ಜಾರಿಗೆ ತಂದ ಕಾನೂನುಗಳಲ್ಲೂ ಬಸವಣ್ಣನ ಪ್ರಭಾವವನ್ನು ಹುಡುಕಲು ಸಾಧ್ಯವಾಗುತ್ತದೆ. ಅಷ್ಟರಮಟ್ಟಿಗೆ ಬಸವಣ್ಣ ಈ ನಾಡಿನ ವಾಸ್ತವ ಚರಿತ್ರೆ ಕಟ್ಟಲು ಕಾರಣವಾದವರು ಮತ್ತು ಆಧುನಿಕತೆಗೆ ಹತ್ತಿರವಾದವರು.
ಕರ್ಮಾಚರಣೆಗಳೇ ತುಂಬಿದ, ಲಿಂಗ ಮತ್ತು ಜಾತಿ ತಾರತಮ್ಯಗಳೇ ಸರಿ ಎಂದು ತಿಳಿದ, ವರ್ಗಬೇಧವೇ ಸಮಾಜವೆಂದು ಭಾವಿಸಿದ, ಅನುಲೋಮ ವಿವಾಹವನ್ನು ಕನಸಲ್ಲೂ ಊಹಿಸಲು ಸಾಧ್ಯವಾಗದ ಕಾಲಘಟ್ಟ ಮತ್ತು ವ್ಯವಸ್ಥೆಯ ಮಧ್ಯೆ ಅದು ಸಾಧ್ಯವೆಂದು ಹೇಳಿದ್ದು ಮಾತ್ರವಲ್ಲ, ಸಾಧಿಸಿ ತೋರಿಸುವ ಎದೆಗಾರಿಕೆಯೊಂದನ್ನು ಕಾಣಲು ಸಾಧ್ಯವಾದದ್ದು ಬಸವಣ್ಣನವರಲ್ಲಿ. ಕಾಯಕವಾದರೂ ಅದು ಸಮತೆಯನ್ನು ಸಲಹುವ ಅಥವಾ ಅದೊಂದು ಯುಗದ ಕಣ್ಣು ತೆರೆಸುವ, ಉದ್ಧರಿಸುವುದಾದರೂ ಸಮಸ್ತ ಜೀವರಾಶಿಯನ್ನು ಉದ್ಧರಿಸುವ ದಾರಿಗಳನ್ನು ತೋರಿದವರು ಬಸವಣ್ಣ. ಭಾಷೆಯ ಶ್ರೇಷ್ಠತೆಯಿಂದ ಮಾತ್ರ ಪಾಂಡಿತ್ಯ ಅನಾವರಣಗೊಳ್ಳತ್ತದೆ ಎನ್ನುವ ಹುಸಿ ಭ್ರಮೆಯ ಕಾಲದಲ್ಲಿ, ದುಡಿಯುವ ಕೈಗಳ ಬಾಯಿಯಿಂದ ಬರುವ ಮಾತುಗಳೂ ಉತ್ಕೃಷ್ಟ ಸಾಹಿತ್ಯವೆಂದು ತೋರಿಸಿದ ಇನ್ನೋರ್ವ ಬಸವಣ್ಣ ಈ ಜಗತ್ತಿನಲ್ಲಿ ಆ ಮೊದಲು ಹುಟ್ಟಿರಲಿಲ್ಲ. ವಚನ ಕ್ರಾಂತಿಯ ಬಸವಣ್ಣ ಪಾಮರರ ಪಾಂಡಿತ್ಯಕ್ಕೆ ಧ್ವನಿಯಾಗಿ ಪಂಡಿತ ಪರಂಪರೆಯ ವ್ಯಾಖ್ಯಾನವನ್ನೇ ಬದಲಿಸಿದವರು.
ಬಸವಣ್ಣ, ಶೈವ ಪಂಥಗಳ ಲಕುಲೀಶನ ಪಾಶುಪತ ಸಂಪ್ರದಾಯದ ಪ್ರಭಾವಕ್ಕೆ ಒಳಗಾದ್ದರಿಂದಲೋ, ವೈದಿಕ ವ್ಯವಸ್ಥೆಯೊಳಗಿದ್ದರೂ ಅದನ್ನೇ ಪ್ರಶ್ನಿಸಬೇಕಾದ ಅನಿವಾರ್ಯದಿಂದಲೋ ಲಿಂಗಾಯತ ಧರ್ಮವನ್ನು ಕಟ್ಟುವ ಹಾಗೂ ರಾಜಮನೆತನ ನಿಕಟ ಮತ್ತು ಪ್ರಭಾವಶಾಲಿ ಸೌಕರ್ಯವನ್ನು ಅನುಭವಿಸುತ್ತಿದ್ದ ಕಾರಣದಿಂದಲೋ, ಆ ಪೊರೆಯನ್ನೂ ಕಳಚಿ ಸಮಾನತೆಯೆಡೆಗೆ ಮುಖ ಮಾಡುವ ದಿಟ್ಟತನ ತೋರಿದ್ದು ಅಸಮಾನ್ಯವಾದುದು. ಆದರೆ ಎಲ್ಲವನ್ನೂ ಮೀರಿ ಪಂಚಮರ ಅಥವಾ ತಳಸಮುದಾಯದವರ ಅಭಿವೃದ್ಧಿಗೆ ತೊಡಗಿಸಿಕೊಂಡ ವ್ಯಕ್ತಿತ್ವವಾಗಿಯೂ ಜಗತ್ತಿನ ಚರಿತ್ರೆಯಲ್ಲಿ ಪ್ರಥಮವಾಗಿ ಕಾಣಿಸಿಕೊಳ್ಳುತ್ತಾರೆ. ತಾನಿರುವ ವ್ಯವಸ್ಥೆಯೊಳಗಿನ ಲೋಪಗಳನ್ನು ಸರಿಪಡಿಸುವ ಅನುಪಯುಕ್ತ ಕೆಲಸದ ಬದಲು, ಪರಿಷ್ಕೃತ ಇನ್ನೊಂದು ವ್ಯವಸ್ಥೆಯನ್ನು ಸೃಷ್ಠಿಸಬೇಕೆಂಬ ನೆಲೆಯಲ್ಲಿ
ಹುಟ್ಟಿಕೊಂಡ ಲಿಂಗಾಯತ ಧರ್ಮ, ಇರುವ ಒಬ್ಬ ದೇವರೂ ಗುಡಿಯೊಳಗಿಲ್ಲದೇ ತನ್ನೊಳಗೇ ಅಥವಾ ತನ್ನ ಕಾರ್ಯಾಚರಣೆಯೊಳಗೆ ಮತ್ತು ತನ್ನ ಸನ್ನಡತೆಯೊಳಗೇ ಇರುತ್ತಾನೆಂದು ಸಾರಿ ಹೇಳುವ ಮೂಲಕ ಹೊಸ ಧರ್ಮವೊಂದರ ಚಾರಿತ್ರಿಕ ಬೆಳವಣಿಗೂ ಕಾರಣನಾದವರು. “ತನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶ” ಎನ್ನುವ ಮೂಲಕ, ಒಂದು ಯುಗದ ಧಾರ್ಮಿಕ ಚೌಕಟ್ಟನ್ನು ಮೀರಿದ ಕ್ರಾಂತಿಗೀತೆಯನ್ನೂ, ಮನುಷ್ಯ ಪ್ರಾಮುಖ್ಯವನ್ನು ಸಾರುವ ಮಾನವತಾವಾದದ ಅರ್ಥವನ್ನೂ ಭಕ್ತಿಯ ಹುಡುಕಾಟದಲ್ಲಿದ್ದ ಜನವರ್ಗದ ಗೊಂದಲಗಳಿಗೆ ಖಚಿತ ಉತ್ತರವನ್ನೂ ನೀಡಿದವರು ಬಸವಣ್ಣ.
ಒಟ್ಟಿನಲ್ಲಿ ಬಸವಣ್ಣ ಭಾರತೀಯ ಸಮಾಜಕ್ಕೆ ಚಳವಳಿಯ ಸ್ಪಷ್ಟ ಸೂತ್ರವನ್ನು, ಕ್ರಾಂತಿಯ ಮೂಲ ಬೀಜವನ್ನು, ಸುಲಲಿತ ಸಾಹಿತ್ಯದ ಸಂಮೃದ್ಧ ಧಾಟಿಯನ್ನು, ಕರ್ಮಯೋಗದ ಪ್ರಾಯೋಗಿಕ ಚಟುವಟಿಕೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಹಾಕಿಕೊಟ್ಟಿದ್ದಾರೆ. ಈ ಸಮಾಜದ ಮೌಲ್ಯಯುತ ಬೆಳವಣಿಗೆಗೆ ವಸ್ತುನಿಷ್ಠವಾದ ಚಿಂತನೆಯೊಂದರ ಅಗತ್ಯವನ್ನು ಕನ್ನಡದ ಮನಸ್ಸುಗಳಿಗೆ ತಿಳಿಸಿದ ಬಸವಣ್ಣ, ಜಾತಿ, ಲಿಂಗಗಳ ತಾರತಮ್ಯ ಮತ್ತು ಅರ್ಥಿಕ ಅಸಮಾನತೆಯನ್ನು ಮೀರಿದ, ಭಾಷಾ ಸಾಮರಸ್ಯಗಳನ್ನು ಪೊರೆಯುವ ದಾರಿಗಳನ್ನು ತೋರಿಸಿದ್ದಾರೆ. ಈ ಹಿನ್ನೆಲೆಯ ಕೆಲಸಗಳು ಇಂದು ನಮ್ಮಲ್ಲೇನೇ ನಡೆದರೂ ಅದು ಬಸವಣ್ಣನ ಋಣದಿಂದ ಅಥವಾ ಇವರು ಇರಿಸಿದ ಹೆಜ್ಜೆಯ ಗುರುತಿನಿಂದ. ಅದನ್ನು ನಡೆಸದೇ ಮತ್ತೆ ಹಿಂದಿನದ್ದಕ್ಕೇ ಜೋತು ಬೀಳುವುದಾದರೆ, ಅದು ಬಸವಣ್ಣನವರ ತತ್ವಗಳ ಕುರಿತಾದ ಅರಿವಿನ ಕೊರತೆಯಿಂದ ಅಥವಾ ಕರ್ಮಠ ಸಿದ್ಧಾಂತಗಳೇ ಅಂತಿಮವೆನ್ನುವ ಹಿನ್ನಲೆಯಿಂದ. ಬಸವಣ್ಣನವರ ಮೂಲ ತತ್ವಗಳನ್ನು ಅರಿತುಕೊಳ್ಳುವುದು ಮತ್ತು ಅದನ್ನು ಅನುಷ್ಠಾನಗೊಳಿಸುವುದು ಜಗತ್ತಿನ ಉಳಿವಿನ ದೃಷ್ಟಿಯಿಂದ ಎಂದೆಂದೂ ಅನಿವಾರ್ಯ. ಆದ್ದರಿಂದ ಬಸವಣ್ಣನನ್ನು ಇಷ್ಟಪಡುವವರು, ಕ್ರಾಂತಿಯೋಗ, ಭಕ್ತಿ ಭಂಡಾರ, ಮಾನವತಾವಾದ ಇವುಗಳು ಜಗತ್ತಿಗೆ ಜ್ಯೋತಿಯಾಗುವ ನೆಲೆಯಲ್ಲಿ ಮರು ಚಿಂತನೆ ಮಾಡಿಕೊಳ್ಳಬೇಕಾಗುತ್ತದೆ, ಆ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು ಆಗ ಮಾತ್ರ ಶುಭಾಶಯಗಳಿಗೂ ಅರ್ಥ ಬರುತ್ತದೆ.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು, ಜಾನಪದ ಸಂಶೋಧಕರು)