ಸುಳ್ಯ:ರಾಗ, ತಾಳ,ನೃತ್ಯ ಲಯದಲ್ಲಿ ತೇಲಾಡಿದ ವೇದಿಕೆಯಲ್ಲಿ ಮೇಳೈಸಿದ ವೈವಿಧ್ಯಮಯ ಶಾಸ್ತ್ರೀಯ ನೃತ್ಯಗಳು ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ನೋಡುಗರನ್ನು ಶಾಸ್ತ್ರೀಯ ಸಂಗೀತ, ನೃತ್ಯದ ವಿಸ್ಮಯ ಲೋಕದಲ್ಲಿ ತೇಲಿಸಿ ಕನಕಮಜಲಿನ ಕನಕ ಕಲಾ ಗ್ರಾಮದಲ್ಲಿ ನಡೆದ ವಿಶ್ವ ನೃತ್ಯ ದಿನಾಚರಣೆ ಸಂಪನ್ನಗೊಂಡಿತು. ಅಕ್ಷರಷಃ ಕಲೆಗಳಂಕಣವಾದ ಕನಕಮಜಲಿನ ಕನಕ ಕಲಾಗ್ರಾಮದಲ್ಲಿ ಗುರುದೇವ ಲಲಿತ ಕಲಾ ಅಕಾಡೆಮಿ ವತಿಯಿಂದ ನಡೆದ

ನೃತ್ಯ ದಿನ ಶಾಸ್ತ್ರೀಯ ನೃತ್ಯ ಕಲೆಗಳ ರಸದೌತಣನ್ನು ಉಣ ಬಡಿಸಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಪ್ರಸ್ತುತಪಡಿಸಿದ ವೈವಿಧ್ಯಮಯ ಶುದ್ಧ ಶಾಸ್ತ್ರೀಯ ನೃತ್ಯವು ಅದ್ಭುತ ಕಲಾ ಪ್ರಪಂಚವನ್ನು ತೆರೆದಿಟ್ಟಿತು. ಸಂಗೀತ, ನೃತ್ಯ ಕಲಾ ಸಂಜೆಯ ಸೊಬಗಿನಲ್ಲಿ ಕಲಾ ಗ್ರಾಮ ಸಂಭ್ರಮಿಸಿತು. ಮಂಡ್ಯ ಹಾಗೂ ಮೈಸೂರಿನಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ ಕಳೆದ 28 ವರ್ಷಗಳಿಂದ ಕಲಾ ಸೇವೆ ನಡೆಸುತ್ತಿರುವ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಡೆದ ನೃತ್ಯ

ದಿನಾಚರಣೆ ಗ್ರಾಮೀಣ ಭಾಗದಲ್ಲಿ ನೃತ್ಯ ಕಲೆಯ ಸೊಬಗನ್ನು ಅನಾವರಣಗೊಳಿಸಿತು. ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲಾಪ್ರಕಾರಗಳ ಕುರಿತು ಜಾಗೃತಿ ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ಅದ್ದೂರಿ ನೃತ್ಯೋತ್ಸವ ಆಯೋಜಿಸಲಾಗಿತ್ತು.ಕುಣಿತ ಭಜನೆಯೊಂದಿಗೆ ಆರಂಭಗೊಂಡ ನೃತ್ಯ ಕಲಾ ಉತ್ಸವದಲ್ಲಿ ಕಲಾವಿದರು ಪ್ರಸ್ತುತ ಪಡಿಸಿದ ಕಲಾ ಸಂಜೆ ಮನಸೂರೆಗೊಂಡಿತು.
ವಿದುಷಿ ಮಹಿಮಾ ಭಟ್ ಮಂಡ್ಯ, ಪ್ರೀತಿ ಮಯೂರ್ ಧಾರವಾಡ ಅವರು ಪ್ರಸ್ತುತಪಡಿಸಿದ ಏಕವ್ಯಕ್ತಿ ಭರತನಾಟ್ಯಂ, ಅಭಿಷೇಕ್ ಮಂಡೆಕೋಲು ಪ್ರಸ್ತುತ ಪಡಿಸಿದ ಕುಚಿಪುಡಿ ಮನಸೂರೆಗೊಂಡಿತು.

ಭಾಗ್ಯ ಲಕ್ಷ್ಮಿ ಮೈಸೂರು, ಅಯನಾ ಸೋಮಯ್ಯ ಪ್ರಸ್ತುತ ಪಡಿಸಿದ ಭರತನಾಟ್ಯ ಗಮನ ಸೆಳೆಯಿತು. ಬಳಿಕ ಅಮೃತ ಅರವಿಂದ್ ಭಟ್ ಮಂಜೇಶ್ವರ ಅವರ ಸಿತಾರ್ ವಾದನ ರೋಮಾಂಚನ ಸೃಷ್ಠಿಸಿತು. ಸಮನ್ ಆರ್ ದೇವಾಡಿಗ ಪುತ್ತೂರು ತಬಲಾದಲ್ಲಿ ಬೆರಳಿನಲ್ಲಿ ಸಂಗೀತದ ಮಾಯಾ ಲೋಕ ಸೃಷ್ಠಿಸಿದರು.ಬಳಿಕ ಶಾಸ್ತ್ರೀಯ ನೃತ್ಯ ಪ್ರದರ್ಶನ ಮುಂದುವರಿಯಿತು. ಆಕಾಂಕ್ಷಾ ಕಜೆಗದ್ದೆ ಕನಕಮಜಲು, ಸಹನಾ ಭಟ್ ಮಂಡ್ಯ ಅವರ ಏಕವ್ಯಕ್ತಿ ಭರತನಾಟ್ಯ ಹಾಗು ಗುರುದೇವ ಅಕಾಡೆಮಿಯ ಕಲಾವಿದರು ಸಮೂಹ ಭರತನಾಟ್ಯ ಪ್ರದರ್ಶಿಸಿದರು. ಕುಣಿತ ಭಜನೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.

ಒಟ್ಟಿನಲ್ಲಿ ಕನಕಮಜಲಿನ ಕನಕ ಕಲಾಗ್ರಾಮ ಕಲಾ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಮಿಂದೆದ್ದಿತು. ಕಲಾ ರಸಿಕರಿಗೆ ನೃತ್ಯ ವೈವಿಧ್ಯತೆಯ ಕಲಾ ಸೊಬಗನ್ನು ಉಣ ಬಡಿಸಿತು.
ವಿಶ್ವ ನೃತ್ಯ ದಿನದ ಅಂಗವಾಗಿ ಗುರುದೇವ ಲಲಿತಕಲಾ ಅಕಾಡೆಮಿ ವತಿಯಿಂದ ಕನಕ ಕಲಾ ಗ್ರಾಮದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 11 ರ ತನಕ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗಿನಿಂದ ಪರಿಚಯ, ಯೋಗ ಮತ್ತು ಫಿಟ್ನೆಸ್, ನೃತ್ಯ, ಅಭಿನಯ, ಚರ್ಚೆಗಳು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಗುರುದೇವ ಲಲಿತ ಕಲಾ

ಅಕಾಡೆಮಿಯ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ, ಮಿಸ್ ಇನೆಸ್ ಪೆಕ್ವಿಟೋ ಪೋರ್ಚುಗಲ್ ಭಾಗವಹಿಸಿ ನೃತ್ಯ ಕಲಾ, ಯೋಗ, ಧ್ಯಾನ ತರಬೇತಿ ನೀಡಿದರು. ಸಂಜೆ ನಡೆದ ಸಾಂಸ್ಕೃತಿಕ ಸಂಜೆಯನ್ನು ಏರ್ಪಡಿಸಲಾಯಿತು.
ಅಕಾಡೆಮಿಯ ಕಲಾ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಪಿ.ಎಂ. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಉಪನ್ಯಾಸಕರಾದ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.


