*ಡಾ.ಸುಂದರ ಕೇನಾಜೆ.
ಜಗತ್ತಿನ ಚರಿತ್ರೆಯಲ್ಲಿ ತಳವರ್ಗದ ವ್ಯಕ್ತಿತ್ವವೊಂದು ಮೇಲ್ ಹಂತಕ್ಕೆ ಏರುವ, ಆ ಮೂಲಕ ಭವಿಷ್ಯದ ಜಗತ್ತಿಗೇ ಬೆಳಕಾಗುವ ಉದಾಹರಣೆ ಇನ್ನೊಂದಿಲ್ಲ. ಅದು ಪ್ರಥಮವಾಗಿದ್ದರೆ ಭೀಮರಾವ್ ರಾಂಜೀ ಅಂಬೇಡ್ಕರವರ ಹೆಸರಿನಲ್ಲಿ ಮಾತ್ರ. ಈ ಭೂಮಿಯಲ್ಲೇ ಹುಟ್ಟಿದರೂ ನಿಕೃಷ್ಟವಾಗಿ ಕಾಣುವ ಮಾನವ ಸ್ವಭಾವವನ್ನು ಪ್ರಶ್ನಿಸಿ, ಮನುಷ್ಯ ಮಾತ್ರ ಬುದ್ಧಿಯಿಂದ ಉತ್ಕೃಷ್ಟನಾಗಬಲ್ಲ ಎನ್ನುವ ನಿಜಾನುಭವವನ್ನು ಜಗತ್ತಿಗೆ ಪರಿಚಯಿಸಿದ ಮೊದಲ ವ್ಯಕ್ತಿ ಅಂಬೇಡ್ಕರ್. ಜಗತ್ತಿನ ಬೇರೆಬೇರೆ ರಾಜಮಹಾರಾಜರ ಚರಿತ್ರೆಯಲ್ಲಾಗಲಿ, ಹೋರಾಟ, ಕ್ರಾಂತಿಗಳಲ್ಲಾಗಲಿ
ತಳವರ್ಗದ ವ್ಯಕ್ತಿಯೋರ್ವ ಹೋರಾಟವನ್ನು ಗೆದ್ದ ಅಥವಾ ಕ್ರಾಂತಿಯ ನಾಯಕತ್ವದಿಂದ ಜಯವನ್ನು ದಾಖಲಿಸಿದ ಉದಾಹರಣೆಗಳು ಅಂಬೇಡ್ಕರರಿಗಿಂತ ಮುನ್ನ ಇದ್ದದ್ದಿಲ್ಲ(ಜನಪದ ವೀರರನ್ನು ಹೊರತುಪಡಿಸಿ) ಅಂಬೇಡ್ಕರ್ ನಿರ್ಮಿಸಿದ ಚರಿತ್ರೆ ಜಗತ್ತಿಗೇ ಪ್ರಥಮ. ಹಾಗೆ ನೋಡಿದರೆ, ಅಂಬೇಡ್ಕರ್ ಅವರ ಹೋರಾಟ ಅಥವಾ ಕ್ರಾಂತಿಕಾರಕ ಬದಲಾವಣೆ ಆಕಸ್ಮಿಕವೂ ಅಲ್ಲ, ಅದೊಂದು ನೇರ ಕಾರ್ಯಾಚರಣೆಯ ಅರ್ಥದ್ದೂ ಅಲ್ಲ, ಇದನ್ನೊಂದು ಪ್ರಭಾವ ಎನ್ನಬಹುದು. ಈ ಪ್ರಭಾವ ತನ್ನೊಳಗೆ ಮಾಗಿ ಮಾರ್ಪಟ್ಟದ್ದು. ಈ ದೇಶದ ಚರಿತ್ರೆ ಅನೇಕ ದಾರ್ಶನಿಕರಲ್ಲಿ ಇಂತಹಾ ಪ್ರಭಾವವನ್ನು ಕಂಡಿದೆ. ಮಹಾವೀರ, ಬುದ್ಧ, ಬಸವಣ್ಣ, ಗಾಂಧಿ ಹೀಗೆ… (ಜಾಗತಿಕವಾಗಿ ಏಸು, ಪೈಗಂಬರರಲ್ಲೂ ಕೂಡ) ವ್ಯತ್ಯಾಸವೆಂದರೆ, ಅಲ್ಲಿ ಇವರೆಲ್ಲರು ತೀವೃ ಅಲೌಕಿಕದ ಸ್ಪರ್ಶಕ್ಕೂ ಒಳಗಾದವರು. ಅಂಬೇಡ್ಕರ್ ಮಾತ್ರ ಲೌಕಿಕದಲ್ಲೂ

ತೀವ್ರವಾದ ಆಧುನಿಕತೆಯ(ವಿಜ್ಞಾನ, ತಂತ್ರಜ್ಞಾನ ಮತ್ತು ಪ್ರಕೃತಿದತ್ತ) ಸತ್ಯವನ್ನು ಕಾಣಿಸಿದವರು(ಗಾಂಧೀ ಎರಡನ್ನು ಇಟ್ಟುಕೊಂಡವರು ಮತ್ತು ಅದನ್ನು ಸಾತ್ವಿಕವಾಗಿ ಉಳಿಸಿಕೊಂಡವರು) ಈ ಕಾರಣದಿಂದಲೇ ತನ್ನ ಕೊನೆಗಾಲದವರೆಗೂ ಅಂಬೇಡ್ಕರರಿಗೆ ಈ ದೇಶದ ಧರ್ಮದ ಜತೆಗೇ ಇರುವುದು ಅಂತಿಮವೆಂದು ಅನಿಸದೇ ಇರುವುದು. ತಾನು ಸ್ವೀಕರಿಸಿದ ಬೌದ್ಧ ಧರ್ಮದ ನೆಲೆ, ಅದೊಂದು ಪ್ರತಿಭಟನೆಯ ಸಂಕೇತವೇ ಹೊರತು, ಅದು ಬದುಕಿನ ಅನಿವಾರ್ಯವೂ ಅಲ್ಲ, ಬದುಕಿನ ದಾರಿಯೂ ಅಲ್ಲ ಮತ್ತು ಹುಟ್ಟಿನಂತೆ ಸಹಜವೂ ಅಲ್ಲ. ಅದೊಂದು ಆಯ್ಕೆ ಮಾತ್ರ. ಇರುವುದರಲ್ಲಿ ಉನ್ನತ ಅಯ್ಕೆ, ಈ ಖಚಿತ ಅರಿವು ಅಂಬೇಡ್ಕರರದು. ಇದೇ ಈ ಜಗತ್ತಿನ ಧರ್ಮ, ರಾಜಕೀಯ, ಅರ್ಥ, ಕಾಮಕ್ಕಿಂತಲೂ ಮಾನವತೆಯ ಗುಣ ಎಂಬ ಅಂತಿಮ ಸತ್ಯ.
ಈ ಸಮಾಜದಲ್ಲಿ ಜಾತಿ ಅಥವಾ ಧರ್ಮ ಶೋಷಣೆಯ ಭಾಗವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬೇಕೆನ್ನುವ ನಿಲುವನ್ನು ಹೊಂದಿದ್ದ ಅಂಬೇಡ್ಕರರಿಗೆ ವ್ಯಕ್ತಿಗತವಾಗಿ ಯಾರನ್ನೂ ವಿರೋಧಿಸುವ ಲವಲೇಶವೂ ಇದ್ದಂತೆ ಕಾಣುವುದಿಲ್ಲ. ಅವರ ಸಂವಿಧಾನದ ಸಂರಚನೆ ಮತ್ತು ತನ್ನ ವೈಯಕ್ತಿಕ ಬದುಕಿನಲ್ಲಿ ಮೇಲ್ವರ್ಗಕ್ಕೂ ಕೊಟ್ಟ ಸ್ಥಾನವೇ ಇದಕ್ಕೆ ನಿದರ್ಶನ. ಹಾಗಾಗಿ ಅಂಬೇಡ್ಕರ್ ರಚಿತ ಸಂವಿಧಾನ ಈ ದೇಶದಲ್ಲಿ ತಲತಲಾಂತರದಿಂದ ಅಧಿಕಾರವನ್ನು ಪಡೆದುಕೊಂಡು ಬಂದ ವರ್ಗಗಳನ್ನು ಎಲ್ಲೂ ಅಧಿಕಾರ ಹೀನವಾಗಿಸಲಿಲ್ಲ. ಸಂವಿಧಾನದ ಮೀಸಲಾತಿಯ ಮೂಲಕ ಒಂದಷ್ಟು ಸ್ಥಾನ ಮತ್ತು ಅಭಿಮಾನವನ್ನು ತಳವರ್ಗ ಅಥವಾ ಹಿಂದುಳಿದ ವರ್ಗಗಳು ಪಡೆಯುವಂತೆ ಮಾಡಿದೆ. ಅದರ ಹೊರತಾಗಿ ಮೇಲ್ವರ್ಗಗಳ ಅಧಿಕಾರ ಮತ್ತು ಅವಕಾಶದ ಬಾಗಿಲನ್ನು ಎಲ್ಲೂ ಮುಚ್ಚಲಿಲ್ಲ. ಒಂದುವೇಳೆ ಅಂಬೇಡ್ಕರ್ ಪ್ರಣಿತ ಸಂವಿಧಾನ ಇಲ್ಲದಿರುತ್ತಿದ್ದರೆ, ತಳವರ್ಗಗಳಿಗೆ ಆ ಒಂದಷ್ಟೂ ಇಲ್ಲದೇ ಈ ದೇಶದಲ್ಲಿ ಹೊಸತೊಂದು ಚರಿತ್ರೆಯೂ ನಿರ್ಮಾಣವಾಗುತ್ತಿರಲಿಲ್ಲ.
ಇದಕ್ಕಿಂತಲೂ ಹೆಚ್ಚಿನ ಭರವಸೆ ಎಂದರೆ, ಈ ದೇಶದ ಸಂವಿಧಾನ ಜೀವಂತವಾಗಿದ್ದಷ್ಟೋ ಕಾಲ ಅಂಬೇಡ್ಕರ್ ಚಿಂತನೆ, ಅವರ ಅಗಾಧ ಪಾಂಡಿತ್ಯ ಜೀವಂತವಾಗಿರುತ್ತದೆ. ಇವೆರಡೂ ಜೀವಂತವಾಗಿರುವಷ್ಟು ಕಾಲ ಇಲ್ಲಿಯ ತಳವರ್ಗ, ಹಿಂದುಳಿದ ಮತ್ತು ಸಂಖ್ಯಾಸೀಮಿತ ವರ್ಗಗಳು ಉಸಿರಾಡುತ್ತಲೂ ಇರುತ್ತವೆ. ಯಾಕೆಂದರೆ ಭಾರತೀಯ ಸಂವಿಧಾನವೆಂಬ ಮಹಲು ನಿಂತಿರುವುದು ಕೂಡ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಮೇಲೆಯೇ. ಇವು ಅಮೇರಿಕಾ ಸ್ವಾತಂತ್ರ್ಯ, ಪ್ರಾನ್ಸ್ ಕ್ರಾಂತಿ, ಜರ್ಮನಿ ಮತ್ತು ಇಟಲಿಯ ಏಕೀಕರಣದ ಸೂತ್ರಗಳಿಗೆ ಮಾತ್ರ

ಸೀಮಿತವಾದುವುಗಳಲ್ಲ. ಹಾಗೆ ಗಮನಿಸುವುದಾದರೆ, ಈ ಮೇಲಿನ ದೇಶಗಳಲ್ಲಿ ಇದನ್ನು ಉಳಿಸಲು ಪಟ್ಟ ಹರಸಾಹಸವನ್ನು ಚರಿತ್ರೆ ಮಾತ್ರವಲ್ಲದೇ ವರ್ತಮಾನವೂ ಆಗಾಗ ಹೇಳುತ್ತಿರುತ್ತದೆ. ಆದರೆ ಭಾರತದಲ್ಲಿ ಅಂಬೇಡ್ಕರ್ ತರಲು ಬಯಸಿದ ಈ ಸೂತ್ರಗಳು ಅಲ್ಲಿಯ ಪರಿಕಲ್ಪನೆಗಿಂತ ತೀರಾ ಭಿನ್ನವಾದುವು. ಅಲ್ಲಿ ಧರ್ಮ ಮತ್ತು ಆರ್ಥಿಕ ನೆಲೆಯಿಂದ ಇದನ್ನು ಅರ್ಥೈಸಲು ಪ್ರಯತ್ನಿಸಿದರೆ, ಇಲ್ಲಿ ಸಾಮಾಜಿಕ ಮತ್ತು ರಾಜಕೀಯ ನೆಲೆಯಿಂದ ಅರ್ಥೈಸುವ ಪ್ರಯತ್ನ ನಡೆಯಿತು. ಪರಿಣಾಮ ಈ ದೇಶದಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಕನಿಷ್ಟತಮ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯ ಅವಕಾಶಗಳನ್ನು ಕಾಣುವಂತಾಗಿದೆ. ಇದು ಅಂಬೇಡ್ಕರ್ ಸಂವಿಧಾನದ ಪರಿಣಾಮ ಎನ್ನುವುದನ್ನು ಈ ದೇಶದ ಶೋಷಿತ ಸಮಾಜ ತಿಳಿದುಕೊಳ್ಳಲೇಬೇಕು. ಇದು ಅರ್ಥವಾಗದೇ ಹೋದರೆ “ಶಿಕ್ಷಣವೇ ನನ್ನ ಸಮಾಜ ಪಡೆಯಬೇಕಾದ ಅಂತಿಮ ಆಯ್ಕೆ” ಎನ್ನುವ ಅಂಬೇಡ್ಕರ್ ಮಾತಿಗೆ ನಮ್ಮಲ್ಲಿ ಯಾವ ಗೌರವವೂ ಇರುವುದಿಲ್ಲ.
ವರ್ಗ ತಾರತಮ್ಯ ಅಥವಾ ಶೋಷಣೆ ಎನ್ನುವುದು ಜನ್ಮಜಾತವಲ್ಲ. ಇದು ಪೂರ್ವ ನಿರ್ಧರಿತವೂ ಅಲ್ಲ. ಇದನ್ನು ಕಳಚಿಕೊಳ್ಳುವುದಕ್ಕೆ ಬೇಕಾಗಿರುವುದು ಅವಕಾಶ, ಮತ್ತದನ್ನು ಪಡೆಯುವ ಜಾಣ್ಮೆ. ಅಂಬೇಡ್ಕರ್ ಈ ದೇಶದ ತಳವರ್ಗದ ಜನರಿಗೆ ಸಂವಿಧಾನದ ಮೂಲಕ ಅವಕಾಶವನ್ನು ಮಾಡಿಕೊಟ್ಟರು. ಅದನ್ನು ಪಡೆಯುವ ಜಾಣ್ಮೆಯನ್ನು ಸ್ವಪ್ರಯತ್ನದಿಂದ ವ್ಯಕ್ತಿಗತವಾಗಿ ಪಡೆದುಕೊಳ್ಳಬೇಕೆಂದೂ ಕಲಿಸಿ ಕೊಟ್ಟರು.ಸ್ವತಃ ತಾವೇ ಪಡೆದೂ ತೋರಿಸಿದರು. ಒಂದು ತೊಟ್ಟು ನೀರು ಕುಡಿಯುವ ಅವಕಾಶದಿಂದ ವಂಚಿತವಾಗಿದ್ದ ವ್ಯಕ್ತಿಯೋರ್ವ ಈ ದೇಶದ ನೂರಾರು ಕೋಟಿ ಮಾನವ ಸಂಕುಲವನ್ನು ಸಲಹಬಲ್ಲ ಆಕರವೊಂದನ್ನು ಕೊಟ್ಟಿದ್ದಾರೆ. ಇದೂ ಪವಾಡವೇ. ಈ ಪವಾಡ ಅರಿವಿನ ಕ್ಷೇತ್ರದ ನನಸು ಕೂಡ. ಇದು ಅಂಬೇಡ್ಕರ್ ಮೂಲಕ ವ್ಯಕ್ತವಾಯಿತು. ಹಾಗಾಗಿ

ಇಚ್ಛಾಶಕ್ತಿಯೊಂದು ಸಾಮಾನ್ಯವೆಂದು ಭಾವಿಸಿದ್ದನ್ನು ಅಸಮಾನ್ಯವೆಂದು ರೂಪಿಸುವುದಾದರೆ ಅದನ್ನು ಅಗಣಿತವಾಗಿ ಉಳಿಸಿಕೊಳ್ಳಲೂ ಸಾಧ್ಯವಿದೆ.
ಒಟ್ಟಿನಲ್ಲಿ ಅಂಬೇಡ್ಕರ್ ಮತ್ತು ಈ ದೇಶದ ಸಂವಿಧಾನ ಮಾನವ ಸಂಕುಲ ಕಂಡ ಎರಡು ಉತ್ಕೃಷ್ಟ ಆಕರಗಳು. ಇವೆರಡು ಇಲ್ಲದ ಭವಿಷ್ಯದ ಭಾರತವನ್ನು ಕಲ್ಪಿಸುವುದೂ ಕಠಿಣವೇ. ಆದ್ದರಿಂದ ಸ್ವಯಂ ಕುಲುಮೆಯಲ್ಲಿ ಬೆಂದು ತಯಾರಿಸಿದ ಸಂವಿಧಾನವೆಂಬ ಉತ್ಪನ್ನದ ಹಿಂದೆ ಬುದ್ಧಿ ಮಾತ್ರವಿರುವುದಲ್ಲ, ಸಾವಿರಾರು ವರ್ಷಗಳ ಏಕಸ್ಥ ಕಂಠದೊಳಗಿನ ನೋವಿದೆ, ಶೋಷಣೆ, ಕಷ್ಟ-ನಷ್ಟಗಳ ಜ್ವಲಂತ ಬದುಕಿನ ಮುಖಗಳಿವೆ. ಪ್ರತಿಭಟಿಸಲರಿದ ಅರಿತರೂ ಯಶಸ್ಸು ಕಾಣದ ಕರಾಳ ಚರಿತ್ರೆ ಇದೆ. ಇದಕ್ಕೆ ಸಾಂತ್ವಾನ ಹೇಳುವ ಅರಿವಿನ ನೆಲೆಯನ್ನು ಅಂಬೇಡ್ಕರ್ ಎಂಬ ಅಪೂರ್ವ ಸೃಷ್ಟಿಯೊಂದನ್ನು ಈ ದೇಶ ನಿರೀಕ್ಷಿಸಿತ್ತು. ಆ ನಿರೀಕ್ಷೆ ಈಡೇರಿತ್ತು. ಹೀಗೆ ಈಡೇರಿದ್ದನ್ನು ಕಾಪಿಡುತ್ತಾ ಸಾಗುವುದೇ ಈ ವ್ಯಕ್ತಿತ್ವಕ್ಕೆ ಸಲ್ಲಿಸುವ ಉನ್ನತ ನಮನ.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು ಮತ್ತು ಜಾನಪದ ಸಂಶೋಧಕರು)