*ಗಣೇಶ್ ಮಾವಂಜಿ.
ಮನೆ ಗೆದ್ದ ಮೇಲಷ್ಟೇ ಮನೆಯಿಂದಾಚೆ ಗೆಲ್ಲಬೇಕೆಂದು ಅರ್ಥ ಬರುವ ಮಾತೊಂದಿದೆ. ಆದರೆ ಹೆಚ್ಚಿನ ಎಲ್ಲರೂ ಮನೆಯಿಂದಾಚೆಗಿನ ಮನಗಳನ್ನು ಗೆಲ್ಲಲು ಪ್ರಯತ್ನಿಸುತ್ತಾರೆಯೇ ಹೊರತು ಮನೆಮಂದಿಯ ಮನಸ್ಸು ಗೆಲ್ಲುವತ್ತ ಗಮನ ಹರಿಸುವುದೇ ಇಲ್ಲ!. ಇದರಿಂದ ಜೀವನದ ಸಂಧ್ಯಾ ಕಾಲದಲ್ಲಾದರೂ ನಷ್ಟಕ್ಕೆ ಒಳಗಾಗುವವರು ಮನೆ ಬಿಟ್ಟು ಮನೆಯಿಂದಾಚೆ ಕತ್ತು ಹೊರಳಿಸಿದವರೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ನಿಮಗೆ ಅರ್ಥ ಆಗುವ ಹಾಗೆಯೇ ಹೇಳುತ್ತೇನೆ ಕೇಳಿ. ಮುಂಜಾನೆ ಎದ್ದು ಮುಖ ತೊಳೆದು ಬಂದ ಕೂಡಲೇ
ಯಾವಾಗಲೂ ಸಿಗಬೇಕಾದ ಕಾಫಿ, ಚಾ ಸಿಗುವಾಗ ತುಸು ತಡವಾಯಿತು ಎಂದಾದಾಗ ಮನಸ್ಸು ಕ್ರೋಧಗೊಳ್ಳುತ್ತದೆ. ಮುಖ ಗಂಟುಕಟ್ಟಿಕೊಳ್ಳುತ್ತದೆ. ಚಾ ಮಾಡಿ ಕೊಡುವ ಅಮ್ಮನಿಂದಲೋ, ಅಕ್ಕಳಿಂದಲೋ, ಮಡದಿಯಿಂದಲೋ ಬರುವ ಪ್ರೀತಿಯ ಮಾತುಗಳಿಗೆ ಕಿವಿಯಾಗುವ ಮನಸ್ಸು ಆಗ ಬರುವುದೇ ಇಲ್ಲ. ಅಷ್ಟೇ ಏಕೆ? ಮನೆಮಂದಿಯ ಪ್ರೀತಿಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಗೊಡವೆಗೂ ಹೋಗದಿರುವಷ್ಟು ಮನಸ್ಸು ರಾಡಿಯಾಗಿರುತ್ತದೆ. ಅಲ್ಲಿಗೆ ಮನೆಯೊಳಗಿದ್ದ ಮನಸ್ಸುಗಳ ನಡುವೆ ಸಣ್ಣ ಕಂದಕಗಳು ಏರ್ಪಡತೊಡಗುತ್ತವೆ.
ಮನೆಯಲ್ಲಿ ಬೆಳಗ್ಗಿನ ಕಾಫಿ ಸಿಗುವಾಗ ತಡವಾಯಿತು ಎಂದು ಕ್ರೋಧಗೊಂಡ ಮನಸ್ಸು ಗೆಳೆಯನ ಅಥವಾ ಬಂಧುಗಳ ಮನೆಗೆ ಹೋದಾಗ ಅರಳತೊಡಗುತ್ತದೆ. ಅಲ್ಲಿ ಕೊಟ್ಟ ಕಾಫಿಯಲ್ಲಿ ನೊಣ ಸಿಕ್ಕಿದರೂ ಆಚೀಚೆ ನೋಡಿ ಜಾಣತನದಿ ನೊಣ ಸರಿಸಿ ಗಂಟಲಿಗಿಳಿಸುವ ಆ ತಾಳ್ಮೆ ಮನೆಯಲ್ಲಿ ಮಾತ್ರ ಬಿಸಿಯಾಗಿ ಏಕೆ ಹೆಡೆಬಿಚ್ಚಿ ಬುಸುಗುಡುತ್ತದೋ ಗೊತ್ತಾಗುವುದಿಲ್ಲ. ಅದ್ಯಾವುದೋ ಕಾರಣಕ್ಕಾಗಿ

ಕಾಫಿ ಮಾಡಲು ತಡವಾದದ್ದಕ್ಕೆ ಕೋಪಗೊಳ್ಳದೆ ಸಂಯಮ ತೋರಿದ್ದರೆ ಹೆಜ್ಜೆ ಇಡಲು ಕಲಿಸಿದ ಅಮ್ಮನ ಮನಸ್ಸು ಮುದುಡುತ್ತಿರಲಿಲ್ಲ. ಒಲುಮೆ ತೋರಿದ ಮಡದಿಯ ಪ್ರೀತಿಯ ಕಂಗಳು ಬೆದರುತ್ತಿರಲಿಲ್ಲ. ಸಲುಗೆ ತೋರಿದ ಅಕ್ಕ, ತಂಗಿಯ ಪ್ರೀತಿಯ ಸೆಳೆತದಲ್ಲಿ ಬಿರುಕು ಮೂಡುತ್ತಿರಲಿಲ್ಲ.
ಮನೆಮಂದಿಯ ಜೊತೆಗೆ ಮುನಿಸಿಕೊಳ್ಳುವ ಇಂತಹ ವ್ಯಕ್ತಿತ್ವಗಳು ಮನೆಯಾಚೆಯ ಮಂದಿಯ ಕಷ್ಟಗಳಿಗೆ ಮರುಗುತ್ತವೆ. ಸದಾ ತಮ್ಮ ಮಕ್ಕಳ ಮೇಲೆ ರೇಗಾಡುವ ಇಂತವರು ಇತರ ಮಕ್ಕಳ ಮೇಲೆ ಇನ್ನಿಲ್ಲದ ಅಕ್ಕರೆ ತೋರುತ್ತಾರೆ. ಅಣ್ಣನ ಬೆನ್ನ ಮೇಲೆ ಕುಳಿತು ಉಪ್ಪು ಮೂಟೆಯಾಗಿ ಸಂಭ್ರಮಿಸುವ ತಂಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಅದೇ ಅಣ್ಣ ಇತರರ ಮನೆಗೆ ಹೋದಾಗ ಹೊಲಸು ಹೊರುವ ಕತ್ತೆಯಾಗಿಯೂ ಮಾರ್ಪಾಡಾಗುತ್ತಾನೆ. ಸೀರೆ ಇಲ್ಲದೆ ಮಾಸಲು ಸೀರೆ ಉಟ್ಟ ಅಮ್ಮನಿಗೆ ವರ್ಷಕ್ಕೊಂದಾದರೂ ಸೀರೆ ತರಲು ಮನಸ್ಸು ಮಾಡದ ಮಗ, ಗೆಳತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ದಿರಿಸು ಉಡುಗೊರೆ ಕೊಡಲು ಮರೆಯುವುದೇ ಇಲ್ಲ!
ಕೈ ಹಿಡಿದ ಪತ್ನಿ ಮನೆಯಲ್ಲಿದ್ದು ಆಕೆ ದಿನವಿಡೀ ತನ್ನ ಗಂಡ, ಮನೆ, ಮಕ್ಕಳೆಂದು ಸದಾ ಮನೆವಾರ್ತೆಯಲ್ಲೇ ಮುಳುಗಿದ್ದರೂ ಆಕೆಯ ಕಷ್ಟಗಳಿಗೆ ಮಿಡಿಯುವ ಮನಸ್ಸು ಹೆಚ್ಚಿನ ಗಂಡಂದಿರಿಗೆ ಇರುವುದೇ ಇಲ್ಲ. ಈ ಮಾತಿಗೆ ಅಪವಾದವೆಂಬಂತೆ ಮದುವೆಯಾದ ಹೊಸತರಲ್ಲಿ ಆಕೆಯ ಬಗ್ಗೆ ಮನ ಮಿಡಿಯಬಹುದಾದರೂ ದಿನ, ತಿಂಗಳು, ವರ್ಷಗಳು ಸರಿದಂತೆ ಆಕರ್ಷಣೆ ಕರಗತೊಡಗುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಯ ಮಡದಿಯ

ಮನಸ್ಸು ಗೆಲ್ಲುವ ಬದಲಾಗಿ ಮನೆಯಾಚೆಗಿನ ಮಹಿಳೆಯರ ಮನಸ್ಸು ಗೆಲ್ಲುವ ತವಕವೇ ಹೆಚ್ಚಾಗಿರುತ್ತದೆ. ಅಂದರೆ ಮನೆಯ ಮಹಿಳೆಯರ ಕಷ್ಟಕ್ಕೆ ಮರುಗುವುದಕ್ಕಿಂತಲೂ ಹೆಚ್ಚಾಗಿ ಇತರ ಮನೆಯ ಮಹಿಳೆಯರು ಕಣ್ಣೀರ್ಗರೆದರೆ ಸಂಕಟಪಡುತ್ತಾರೆ. ಇದು ತಪ್ಪಲ್ಲ. ಆದರೆ ಅಬಲೆಯೊಬ್ಬಳು ಸಂಕಷ್ಟದಲ್ಲಿದ್ದರೆ ಕೈಹಿಡಿದು ಮೇಲೆತ್ತುವಷ್ಟೇ ಕನಿಕರ ತನ್ನ ಮನೆಯ ಹೆಣ್ಮಕ್ಕಳ ಮೇಲೂ ಇದ್ದರೆ ಚೆನ್ನ ಅಲ್ಲವೇ?
ದಿನವಿಡೀ ಬೆವರಿಳಿಸಿ ದುಡಿಯುವ ಅಪ್ಪ-ಅಮ್ಮನ ಕಷ್ಟಕ್ಕೆ ನೆರವಾಗದ ಮಕ್ಕಳು ಸಮಾಜಸೇವೆಯ ನೆಪದಲ್ಲಿ ಇನ್ಯಾರದೋ ಕಷ್ಟಗಳಿಗೆ ಮರುಗುವ ನಾಟಕವಾಡುತ್ತಾರೆ. ತನ್ನ ಮನೆಯ ಆಧಾರ ಸ್ತಂಭವೇ ಕುಸಿಯುವ ಭೀತಿ ಇದ್ದರೂ ಇನ್ನೊಬ್ಬರ ಮನೆಯ ಊರುಗೋಲಾಗಲು ಹವಣಿಸುತ್ತಾರೆ. ಇನ್ನೊಬ್ಬರ ಕಷ್ಟಕ್ಕೆ ಕಣ್ಣೀರಾಗುವ ಜೊತೆಜೊತೆಗೆ ಬಾಗಿದ ಬೆನ್ನಿನ ಅಪ್ಪನ ಹೊರೆ ಇಳಿಸಲು ಮಗ ಮನಸ್ಸು ಮಾಡುವುದೇ ಇಲ್ಲ. ಸದಾ ಮಹಿಳಾ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತಾ ಮನೆಯಿಂದ ಹೊರಗೆ ಸಭೆ, ಸಮಾರಂಭಗಳಲ್ಲಿ ಮಿಂಚುವ ಮಹಿಳಾಮಣಿಗಳಿಗೆ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಬಂಧಿಯಾಗಿರುವ ಅಮ್ಮನ ಮೇಲಾಗಲೀ, ಅತ್ತೆಯ ಮೇಲಾಗಲೀ ಕರುಣೆ ಮೂಡುವುದೇ ಇಲ್ಲ!.

ಮನೆಯಲ್ಲಿ ತಿಂದುಂಡು ಬೆಳೆದ ಜೀವ ರೆಕ್ಕೆ ಪುಕ್ಕ ಬಲಿತಾಗ ಹಾರಲು ಹವಣಿಸುತ್ತದೆ. ಇದು ಪ್ರಕೃತಿ ಸಹಜ ಕ್ರಿಯೆ. ಆದರೆ ಹಾರಲು ಕಲಿಸಿದ ಹೆತ್ತವರನ್ನು ನಡು ನೀರಲ್ಲಿ ಕೈ ಬಿಡುವುದು ಸರಿ ಅಲ್ಲ ಅಲ್ಲವೇ? ಬಾಲ್ಯದಲ್ಲಿ ತಪ್ಪು ಹೆಜ್ಕೆಗಳನ್ನಿರಿಸಿದಾಗ ತಿದ್ದಿದ ಅಪ್ಪ, ಅಮ್ಮನಿಗೆ ಆಸರೆಯಾಗುವ ಬದಲಾಗಿ ಲೋಕ ತಿದ್ದಲೆಂದೋ ಅಥವಾ ಸಂಗಾತಿಯ ಬಣ್ಣದ ಮಾತುಗಳಿಗೆ ಮರುಳಾಗಿ ಬೆಕ್ಕಿನ ಬಿಡಾರ ಬೇರೆ ಎಂಬಂತೆ ಬೇರೆ ಮನೆ ಮಾಡಿ ಹೆತ್ತವರನ್ನು ತೊರೆದರೆ ಮನುಷ್ಯ ಜನ್ಮಕ್ಕೆಲ್ಲಿದೆ ಬೆಲೆ?
ಮನೆಮಂದಿಯನ್ನು ಚೆನ್ನಾಗಿ ನೋಡಿಕೊಂಡರೆ ಖಂಡಿತವಾಗಿಯೂ ಅದು ಸ್ವಾರ್ಥ ಎಂದಾಗದು. ಏಕೆಂದರೆ ಅವರವರು ಅವರವರ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವುದು ಅಧರ್ಮವೆಂದು ಖಂಡಿತಾ ಆಗದು. ಅಕ್ಕರೆ ತೋರಿದ ಅಪ್ಪ, ಅಮ್ಮನಿಗೆ, ಮಮತೆ, ಮಮಕಾರ ತೋರಿದ ಒಡಹುಟ್ಟಿದವರಿಗೆ, ಪ್ರೀತಿ, ವಾತ್ಸಲ್ಯ ತೋರಿದ ಬಂಧು ಬಳಗಕ್ಕೆ ಒಲವಿನ ಧಾರೆ ಹರಿಸಿದ ಬಳಿಕ ಊರ ಹೊರಗಿನ ಮಂದಿಯ ಮನವನ್ನು ಗೆಲ್ಲಲು ಹವಣಿಸಿದರೆ ಅದರಲ್ಲಿ ತಪ್ಪಿಲ್ಲ. ಮನೆ ಗೆದ್ದು ಮಾರು ಗೆಲ್ಲಬೇಕು ಎಂಬ ಮಾತಿನ ಅರ್ಥ ಇದೇ ಆಗಿದೆ.

(ಗಣೇಶ್ ಮಾವಂಜಿ ಪತ್ರಕರ್ತರು, ಅಂಕಣಕಾರರು)