ನವದೆಹಲಿ:ಕೇರಳದ ಸಿಎಂ ಆಗಿ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.ಕೇರಳದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾದಾಸ್ ಮುನ್ಷಿ ಅವರು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿ.ಡಿ.ಸತೀಶನ್ ಅವರ ಹೆಸರನ್ನು ಘೋಷಿಸಿದರು.ಇದರಿಂದ ಸಿಎಂ ಆಯ್ಕೆ ಕುರಿತು ಕಳೆದ 10 ದಿನಗಳಲ್ಲಿ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಂತಿಮ ಹಂತದ
ಚರ್ಚೆ ನಡೆಸಿ, ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ, ಎ.ಕೆ.ಆ್ಯಂಟನಿ ಮತ್ತಿತರ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಸಿಎಂ ಆಗಿ ಸತೀಶನ್ ಅವರನ್ನು ಆಯ್ಕೆ ಮಾಡಿದರು.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬರಲು ನೇತೃತ್ವ ವಹಿಸಿದ್ದ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ.ಸಿಎಂ ಸ್ಥಾನಕ್ಕೆ ಮುಖ್ಯವಾಗಿ ವಿಪಕ್ಷ ನಾಯಕ ವಿ.ಡಿ. ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಯುಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ ಹಾಗೂ ಇತರ ಪಕ್ಷಗಳ ಬೆಂಬಲ,ಬಹುತೇಕ ಕಾರ್ಯಕರ್ತರ ಹಾಗೂ ಕೇರಳದ ಜನರ ಒಲವು ಸತೀಶನ್ ಅವರ ಪರವಾಗಿತ್ತು.
ಜನರ ಭಾವನೆಯನ್ನು ಪರಿಗಣಿಸಿ ಸತೀಶನ್ ಅವರಿಗೆ ಸಿಎಂ ಸ್ಥಾನ ನೀಡಲಾಗಿದೆ.













