*ಗಣೇಶ್ ಮಾವಂಜಿ.
ವಾರದ ಹಿಂದೆ ನಮ್ಮ ಗ್ರಾಮದಲ್ಲಿ ರಬ್ಬರ್ ಬೋರ್ಡ್ ಹಾಗೂ ಊರ ಗ್ರಂಥಾಲಯದ ಜಂಟಿ ಸಂಯೋಜನೆಯಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ತರಬೇತಿಗೆ ಸೇರಿದರೆ ನಮ್ಮ ಅಲ್ಪಸ್ವಲ್ಪ ಜ್ಞಾನಕ್ಕೆ ಮತ್ತೊಂದಿಷ್ಟು ಜೊತೆಯಾಗಿ ಮತ್ತಷ್ಟು ಜ್ಞಾನಾರ್ಜನೆ ಮಾಡಿದಂತಾಗಿ ಸ್ವಾವಲಂಬಿ ಆಗಬಹುದೆನ್ನುವ ದೂರಾಲೋಚನೆಯಿಂದ ನಾನೂ ಕೂಡಾ ತರಬೇತಿಗೆ ಸೇರಿಕೊಂಡೆ.
ಒಂದು ವಾರದ ತರಬೇತಿಯಲ್ಲಿ ರಬ್ಬರ್ ಟ್ಯಾಪಿಂಗ್ ಹೇಗೆ ಮಾಡುವುದು ಎನ್ನುವುದನ್ನು ಪ್ರಾಯೋಗಿಕವಾಗಿ ಕಲಿಸುವುದರೊಂದಿಗೆ ರಬ್ಬರ್ ಉತ್ಪಾದನೆಯ ಇತಿಹಾಸ ಹಾಗೂ ಭವಿಷ್ಯದಲ್ಲಿ ರಬ್ಬರ್ನ ಪ್ರಗತಿಯ
ಬಗ್ಗೆಯೂ ತಿಳಿಸಿಕೊಡಲಾಯಿತು. ಈ ತರಬೇತಿಗೆ ನನ್ನನ್ನೂ ಸೇರಿಸಿ ಅಲ್ಪಸ್ವಲ್ಪ ಟ್ಯಾಪಿಂಗ್ ಕಲಿತವರು, ಟ್ಯಾಪಿಂಗ್ ಗೊತ್ತಿದ್ದು ಮನೆಯಲ್ಲೇ ರಬ್ಬರ್ ಶೀಟ್ ಮಾಡುವವರು, ರಬ್ಬರ್ ಮರವನ್ನು ಟ್ಯಾಪಿಂಗ್ಗೆ ಇನ್ಯಾರಿಗೋ ಕೊಟ್ಟು ನಷ್ಟವಾಗಿ ಮಂಡೆಬಿಸಿ ಮಾಡಿಕೊಂಡವರು, ಇದ್ದ ಸ್ವಲ್ಪ ಜಾಗದಲ್ಲಿ ರಬ್ಬರ್ ಗಿಡ ನೆಟ್ಟು ಹಾಲು ಕೊಡಲು ಆರಂಭವಾದಾಗ ನಾವೇ ಹಾಲು ಕರೆಯಬಹುದಲ್ವಾ ಎಂದು ದೂರಾಲೋಚನೆ ಮಾಡಿಕೊಂಡವರು, ಅಷ್ಟರವರೆಗೆ ಟ್ಯಾಪಿಂಗ್ ಕತ್ತಿಯನ್ನೇ ನೋಡದೆ ಇದ್ದು ಮೊದಲಾಗಿ ನೋಡಿದಾಗ ‘ಇದರಲ್ಲಿ ಹೇಗೆ ಕೊಯ್ಯುವುದಪ್ಪಾ ಎಂದು ಕಣ್ಣು ದೊಡ್ಡದು ಮಾಡಿಕೊಂಡವರು, ಮನೆಯಲ್ಲಿ ಬೋರಾಗಿ ಹರಟೆ ಹೊಡೆಯಲು ಮನಸ್ಸಾಗಿ ತರಬೇತಿಗೆ ಸೇರಿಕೊಂಡವರು….ಹೀಗೆ ಹಲವು ವಿಧದ ಜನರು ಸೇರಿಕೊಂಡಿದ್ದರು.

ಅದಕ್ಕಿಂತಲೂ ಹೆಚ್ಚಾಗಿ, ಸೆಂಟ್ರಲ್ ರಬ್ಬರ್ ಬೋರ್ಡ್ ನ ಕಾರ್ಯಾಗಾರವಾದ್ದರಿಂದ ಸಬ್ಸಿಡಿಯೋ ಅಥವಾ ಇನ್ಯಾವುದಾದರೂ ಸವಲತ್ತುಗಳು ಸಿಗಬಹುದೆನ್ನುವ ಮಹದಾಸೆಯನ್ನೂ ಇರಿಸಿಕೊಂಡು ಸೇರಿದವರು ಮತ್ತೆ ಕೆಲವರಿದ್ದರು. ಅಂತಿಂತೂ ತರಬೇತಿ ಆರಂಭವಾದಾಗ ಹೊಸತಾಗಿ ಟ್ಯಾಪಿಂಗ್ ಕಲಿಯುವವರಿಗೆ ಕತ್ತಿ ಹೇಗೆ ಹಿಡಿಯುವುದೆಂದು ಕಲಿಸುವ ಅನಿವಾರ್ಯತೆ ಶಿಕ್ಷಕರಿಗಿತ್ತು. ಜೊತೆಗೆ ಈಗಾಗಲೇ ಟ್ಯಾಪಿಂಗ್ ಮಾಡುವವರು ಕತ್ತಿ ಹಿಡಿಯುವ ರೀತಿಯೇ ಸರಿ ಇಲ್ಲ ಎಂಬುದು ತರಬೇತಿ ನೀಡುವವರಿಗೆ ಗೊತ್ತಾಗಿ ಹೋಯಿತು.
ತರಬೇತಿ ನೀಡುವ ಶಿಕ್ಷಕರು ಟ್ಯಾಪಿಂಗ್ ಮಾಡಲು ಹೇಳಿಕೊಟ್ಟು ‘ಆರಂಭದಲ್ಲಿ ಕತ್ತಿ ಹಿಡಿಯಲು ಪ್ರ್ಯಾಕ್ಟೀಸ್ ಮಾಡಿದರೆ ಸಾಕು. ರಬ್ಬರ್ ಮರದಲ್ಲಿ ಹಾಲು ಬರುವಂತೆ ಮರ ಗೀರುವುದು ಬೇಡ’ ಎಂದು ತಿಳಿಸಿಕೊಟ್ಟರು. ಆದರೆ ಶಿಷ್ಯರಾದ ನಾವೆಲ್ಲರೂ ‘ಟ್ಯಾಪಿಂಗ್ ಮಾಡಲು ಆರಂಭಿಸಿದ ಮೇಲೆ ಹಾಲು ಬರಲೇ ಬೇಕು. ಸುಮ್ಮನೆ ಗೀರಿ ಏನು ಪ್ರಯೋಜನ? ಎಂದು ನಮ್ಮ ಮನಸ್ಸಿನಲ್ಲೇ ಅಂದುಕೊಂಡು ಸ್ವಲ್ಪ ಆಳವಾಗಿಯೇ ಮರಕ್ಕೆ ಗಾಯ ಮಾಡಿ ನುರಿತ ಟ್ಯಾಪರ್ ಗಳಂತೆ ಪೋಸ್ ಕೊಟ್ಟೆವು. ಇದನ್ನು ನೋಡಿದ ಗುರುಗಳು ಇವರು ಗುರುಗಳನ್ನೂ ಮೀರಿಸುವ ಶಿಷ್ಯರು ಅಂದುಕೊಂಡರೇನೋ!
ನಾನಂತೂ ನಗರ ಬಿಟ್ಟು ಊರು ಸೇರಿ ಇದ್ದ ರಬ್ಬರ್ ಮರಗಳಿಗೆ ನಾನೇ ಕತ್ತಿ ಇರಿಸಿ ಟ್ಯಾಪಿಂಗ್ ಕಲಿತುಕೊಂಡಿದ್ದೆ. ಆದರೆ ನಾನು ಟ್ಯಾಪಿಂಗ್ ಮಾಡುವಾಗ ಕತ್ತಿ ಹಿಡಿಯುವ ಶೈಲಿಯೇ ಸರಿ ಇಲ್ಲ ಎಂಬುದು ಗುರುಗಳಿಂದ ಹೇಳಿಸಿಕೊಂಡೆ. ಆದರೆ ಗುರುಗಳು ತಿಳಿಸುವ ಮೊದಲೇ ನನಗದು ಗೊತ್ತಾಗಿ ಹೋಗಿತ್ತು. ಹೇಗೆಂದರೆ ನನ್ನಿಂದ ಟ್ಯಾಪಿಂಗ್ ಮಾಡಿಸಿಕೊಂಡ ನನ್ನ ಗುಡ್ಡೆಯ ರಬ್ಬರ್ ಮರಗಳೆಲ್ಲವೂ ಮುಖ ಸೊಟ್ಟಗೆ ಮಾಡಿಕೊಂಡಿದ್ದವು. ಕೆಲವು ಮರಗಳು ಕರುಳು ಬಗೆದುಕೊಂಡ ಹಿರಣ್ಯಕಷಿಪುವಿನಂತೆ ರೋದಿಸುತ್ತಿದ್ದವು. ಮತ್ತೆ ಕೆಲವು ಮರಗಳು ‘ಈ ಜೀವನದಿಂದ ಒಮ್ಮೆ ಮುಕ್ತಿ ದೊರಕಿದರೆ ಸಾಕಪ್ಪಾ ಎಂದು ಏದುಸಿರು ಬಿಡುವಂತೆ ಕಾಣಿಸುತ್ತಿದ್ದವು.

ಆದರೆ ಗುರುಗಳು ಟ್ಯಾಪಿಂಗ್ ಮಾಡುವಾಗ ಕತ್ತಿ ಹೀಗೆ ಹಿಡಿಯಬೇಕು ಎಂದು ತೋರಿಸಿಕೊಟ್ಟರೂ ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಹಿಂದಿನ ಶೈಲಿಗೇ ಒಗ್ಗಿಕೊಳ್ಳುತ್ತಿದ್ದೆ. ಹೊಸ ಶೈಲಿಗೆ ಹೊಂದಿಕೊಳ್ಳಬೇಕೆಂದು ಪ್ರಯತ್ನ ಪಟ್ಟರೂ ಸ್ವಲ್ಪ ಹೊತ್ತಿನಲ್ಲೇ ಹಿಂದಿನ ವರಸೆಗೇ ಅಂಟಿಕೊಳ್ಳುತ್ತಿದ್ದೆ. ಅಂತೂ ಹೊಸ ಶೈಲಿಗೆ ಅದೆಷ್ಟೋ ಕಷ್ಟಪಟ್ಟು ಹೊಂದಿಕೊಂಡೆ. ಇದರಿಂದ ನಾನು ಕಲಿತ ಬದುಕಿನ ಪಾಠ ಯಾವುದೆಂದರೆ ಹುಟ್ಟುಗುಣ ಗಟ್ಟ ಹತ್ತಿದರೂ ಹೋಗದು ಎಂಬುದು. ಒಮ್ಮೆ ಯಾವುದಾದರೊಂದು ಚಟಕ್ಕೆ ಬಿದ್ದೆವು ಎಂದಾದರೆ ಆದರಿಂದ ಬಿಡಿಸಿಕೊಳ್ಳಲು ತುಂಬಾ ಕಷ್ಟ ಇದೆ ಎಂಬುದು ನನಗಾಗಲೇ ಮನವರಿಕೆ ಆಗಿತ್ತು.
ತರಬೇತಿಯಲ್ಲಿ ಹೇಳಿಕೊಟ್ಟಂತೆ ಮನೆಯ ರಬ್ಬರ್ ಮರಗಳನ್ನು ಟ್ಯಾಪಿಂಗ್ ಮಾಡಲು ಆರಂಭಿಸಿದೆ. ಆದರೆ ನನ್ನ ರಬ್ಬರ್ ಮರಗಳೆಲ್ಲವೂ ಅದಾಗಲೇ ನನ್ನೊಂದಿಗೆ ಮುನಿಸಿಕೊಂಡಿದ್ದವು. ಕೆಲವೊಂದು ಮರಗಳಲ್ಲಿ ಹಾಲೇ ಬರುತ್ತಿರಲಿಲ್ಲ. ಅವುಗಳ ಬಗ್ಗೆ ನನ್ನ ನಿರ್ಲಕ್ಷ್ಯದ ಪರಿಣಾಮವಾಗಿ ಅವುಗಳು ‘ ನೀ ನನಗಾದರೆ ನಾ ನಿನಗೆ ‘ ಎಂದು ಹಾಲು ಕಕ್ಕದೆ ಪ್ರತಿಭಟನೆ ನಡೆಸುವಂತೆ ತೋರುತ್ತಿದ್ದವು. ಇದರಿಂದ ನಾ ಕಲಿತ ಪಾಠ ಯಾವುದೆಂದರೆ ನಾವು ಇತರರನ್ನು ಚೆನ್ನಾಗಿ ಆರೈಕೆ ಮಾಡಿದರೆ ನಮ್ಮ ಸಂಕಷ್ಟದ ಕಾಲದಲ್ಲಿ ಅವರು ನಮ್ಮ ಕೈ ಹಿಡಿಯುತ್ತಾರೆ. ಇಲ್ಲದಿದ್ದರೆ ಎಷ್ಟೇ ಕೊಸರಾಟ ನಡೆಸಿ ಅರಚಿ ಗೋಗರೆದರೂ ನಡುನೀರಿನಲ್ಲಿ ಕೈ ಬಿಡುತ್ತಾರೆ.
ನನಗೀಗ ಕೆಟ್ಟ ಮೇಲೆ ಬುದ್ಧಿ ಬಂದಂತಾಗಿದೆ. ತರಬೇತಿಯಲ್ಲಿ ಹೇಳಿ ಕೊಟ್ಟಂತೆ ಇನ್ನಾದರೂ ಮರಗಳನ್ನು ಕಾಪಾಡಿಕೊಳ್ಳುವ ಶಪಥ ಮಾಡಿದ್ದೇನೆ. ಮರಗಳ ಮೇಲೆ ಅಡ್ಡಾದಿಡ್ಡಿ ಕತ್ತಿಯಾಡಿಸಿ ಹಾಲು ಪಡೆದುಕೊಳ್ಳುವ ಅಡ್ಡದಾರಿಗೆ ಸಲಾಂ ಹೊಡೆದು ನಾಜೂಕಾಗಿ ಕೊಯ್ಯುವ ಕಲೆಯನ್ನು ಅಪ್ಪಿಕೊಳ್ಳಬೇಕೆಂದಿದ್ದೇನೆ.
ನನ್ನ ಪುಣ್ಯವೋ ಅಥವಾ ಕೆಲವೊಂದು ಮರಗಳ ಅದೃಷ್ಟವೋ ಗೊತ್ತಿಲ್ಲ. ನನ್ನ ಟ್ಯಾಪಿಂಗ್ ಕತ್ತಿಯ ಆರ್ಭಟಕ್ಕೆ ತುತ್ತಾಗದೆ ಕೆಲವೊಂದು ರಬ್ಬರ್ ಮರಗಳು ದಷ್ಟಪುಷ್ಟವಾಗಿ ಬೆಳೆದು ಈಗಲೂ ಅಲ್ಪಸ್ವಲ್ಪ ಹಾಲು ಕೊಟ್ಟು ನನ್ನತ್ತ ಕರುಣೆ ತೋರುತ್ತಿವೆ. ಅವುಗಳಿಗೆ ಕಾಲಕಾಲಕ್ಕೆ ಸರಿಯಾಗಿ ಬೇಕಾದದ್ದನ್ನು ತಿನ್ನಿಸಿ ಅವುಗಳಿಂದ ಪ್ರತಿ ಉಪಕಾರ ಪಡೆಯುವ ಹುಮ್ಮಸ್ಸಿನಲ್ಲಿದ್ದೇನೆ. ಅಂತೂ ತನ್ನ ಒಡಲನ್ನು ಸೀಳಿಕೊಂಡು ಹಾಲು ಕೊಡುವ ರಬ್ಬರ್ ಮರಗಳಿಂದ ಜೀವನ ಪಾಠ ಕಲಿತುಕೊಂಡೆನಲ್ಲಾ ಎಂಬ ಸಂತೃಪ್ತ ಭಾವ ಈಗ ನನ್ನಲ್ಲಿದೆ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)















