*ಗಣೇಶ್ ಮಾವಂಜಿ.
ಮುಂದೆ ಯಾವುದೇ ಕಾರಣಕ್ಕೂ ಮಿತಿ ದಾಟಿ ಮಂಸಾಹಾರ ಸೇವನೆ ಮಾಡಲೇ ಬಾರದು. ಬಾಯಿಗೆ ರುಚಿಯಾಗುತ್ತದೆ ಎಂದು ಹಾಳುಮೂಳು ಹೊಟ್ಟೆಗಿಳಿಸಿದರೆ ದಿನಕ್ಕೊಮ್ಮೆಯಲ್ಲ.., ಮೂರ್ನಾಲ್ಕು ಬಾರಿಯಾದರೂ ಶೌಚಾಲಯದ ದರ್ಶನ ಮಾಡಬೇಕಾಗುತ್ತದೆ. ಸಸ್ಯಾಹಾರ ಸೇವಿಸಿದರೆ ಈ ರೀತಿಯ ಯಾವುದೇ ಉಪದ್ರ ಇರುವುದಿಲ್ಲ. ನಮ್ಮ ದೇಹ ರಚನೆಯೂ ಸಸ್ಯಹಾರಕ್ಕೆಂದೇ ರಚನೆಯಾದದ್ದಾಗಿದೆ. ಹೀಗಿದ್ದಾಗ ಮಟನ್, ಚಿಕನ್ಗೆ ಆಸೆ ಪಡುವುದೇಕೆ? ಈ ರೀತಿಯ ನಿರ್ಧಾರಗಳನ್ನು ಅದೆಷ್ಟು
ಸಾರಿ ಮಾಡಿದ್ದೇವೋ ಲೆಕ್ಕ ಇಟ್ಟಿರುವುದಿಲ್ಲ. ಆದರೆ ಮಾಂಸಾಹಾರ ತಿಂದು ಜೀರ್ಣವಾಗಿ ಅದು ಸೇರುವಲ್ಲಿಗೆ ಸೇರಿದ ಮೇಲೆ ಮತ್ತೆ ಮಾಂಸಾಹಾರದ ನೆನಪಾಗುತ್ತದೆ.
ಮದುವೆ, ಎಂಗೇಜ್ಮೆಂಟ್ ಅಥವಾ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗಲೂ ವೆಜ್ ಊಟದ ಸಾಲಿನಲ್ಲೇ ನಿಲ್ಲಬೇಕು ಎಂದು ಮನಸ್ಸು ಹೇಳಿದರೂ ಕಾಲುಗಳು ಮಾತ್ರ ನಾನ್ ವೆಜ್ ಊಟದ ಕ್ಯೂ ಇದ್ದ ಕಡೆ ಓಡುತ್ತದೆ. ಇದು ಒಬ್ಬಿಬ್ಬರ ಕತೆಯಲ್ಲ. ಅದರಲ್ಲೂ ವಾರದಲ್ಲಿ ಒಂದೆರಡು ದಿನ ದೇವರ ಹೆಸರಿನಲ್ಲಿ ಮಾಂಸಾಹಾರ ತ್ಯಜಿಸುವವರ ಗೋಳು ಕೇಳುವುದೇ ಬೇಡ. ‘ಛೇ…ಸೋಮವಾರವೇ ಇವರು ಫಂಕ್ಷನ್ ಇಟ್ಟುಕೊಳ್ಳಬೇಕಾ? ನಾನು ಸೋಮವಾರ ಮಾಂಸ ತಿನ್ನುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಮತ್ತೆ ಕೆಲವರಿಗೆ ನಾನ್ ವೆಜ್ ಊಟದ ಘಾಟು ಮೂಗಿಗೆ ಬಡಿಯುತ್ತಲೇ ದಿನದ ಲೆಕ್ಕಾಚಾರ ಮರೆತೇ ಹೋಗುತ್ತದೆ. ‘ಛೇ..ನನಗಿವತ್ತು ಯಾವ ವಾರ ಎಂದೇ ಮರೆತು ಹೋಗಿತ್ತು. ಹೋಗಲಿ.., ತಿಂದಾಯ್ತಲ್ಲ..ಇನ್ನೇನು ಮಾಡುವುದು’ ಎಂದು ತಪ್ಪಿನ ಬಗ್ಗೆ ಒಪ್ಪಿಕೊಳ್ಳುವ ನಾಟಕ ಮಾಡಿ ಮತ್ತೆ ಅದೇ ತಪ್ಪನ್ನು ಮಾಡುವವರೂ ಇಲ್ಲದಿಲ್ಲ.

‘ಇನ್ನು ಮುಂದೆ ಮೊಬೈಲ್ ಒತ್ತುವುದನ್ನು ಕಡಿಮೆ ಮಾಡಬೇಕು. ಅದರಲ್ಲೂ ಸಿಕ್ಕ ಸಿಕ್ಕ ಲಿಂಕ್ ಓಪನ್ ಮಾಡುವುದನ್ನು ಮಾತ್ರ ನಿಲ್ಲಿಸಲೇ ಬೇಕು. ಸುಮ್ಮನೆ ಡಾಟಾ ವೇಸ್ಟ್.. ಜೊತೆಗೆ ಟೈಂ ಕೂಡಾ ವೇಸ್ಟ್..’ ಇಂತಹ ನಿರ್ಧಾರಗಳನ್ನೂ ಬಹುಶಃ ಬಹುತೇಕ ಎಲ್ಲರೂ ಮಾಡುತ್ತಾರೆ. ಎಷ್ಟೋ ಬಾರಿ ಮಕ್ಕಳ ಮೇಲೆಯೂ ಇದೇ ವಿಷಯಕ್ಕೆ ರೇಗಾಡಿದ್ದಿದೆ. ‘ಅದರಲ್ಲಿ ಏನಿದೆ ಎಂದು ಸುಮ್ಮನೆ ಮೊಬೈಲ್ ಉಜ್ಜುತ್ತಾ ಟೈಂ ವೇಸ್ಟ್ ಮಾಡ್ತೀರಿ? ನಿಮಗೆ ಎಷ್ಟು ಹೇಳಿದರೂ ಭಾಷೆ ಬರುವುದೇ ಇಲ್ಲ. ಇನ್ನೊಮ್ಮೆ ಮೊಬೈಲ್ ಒತ್ತುವುದು ಕಂಡರೆ ಬೆನ್ನಿಗೆರಡು ಬಾರಿಸಿ ಮೊಬೈಲ್ ಅಂಗಳಕ್ಕೆ ಬಿಸಾಡ್ತೇನೆ’ ಎಂದೆಲ್ಲಾ ಮನೆಯ ಹಿರಿಯರು ಮಕ್ಕಳನ್ನು ಗದರುತ್ತಿರುತ್ತಾರೆ. ಆದರೆ ಅದರಲ್ಲಿ ಏನೂ ಇಲ್ಲ ಎಂಬ ಅರಿವಿದ್ದರೂ ಸಮಯ ಸಿಕ್ಕಾಗ ತಾವೂ ಕೂಡಾ ಮೊಬೈಲ್ ಎಂಬ ಮಾಯಾಂಗನೆಯ ಮೈದಡವುತ್ತಾರೆ. ಸಮಯದ ಪರಿವೆಯೇ ಇಲ್ಲದೆ ಅದೆಷ್ಟೋ ಹೊತ್ತು ಅದೇನೇನೋ ನೋಡಿಕೊಂಡು ಕಾಲ ಕಳೆಯುತ್ತಾರೆ.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಿಟ್ಟು ಮಾಡಿಕೊಳ್ಳಬಾರದು. ಸಿಟ್ಟು ಬಂದಾಗ ಸಾಧ್ಯವಾದಷ್ಟು ಸಂಯಮದಿಂದ ವರ್ತಿಸಬೇಕು. ಎಷ್ಟೇ ಕೋಪ ಬಂದರೂ ತಡೆದುಕೊಂಡು ಮೌನದಿಂದಿರಬೇಕು. ಸಿಟ್ಟು ನೆತ್ತಿಗೇರಿದಾಗಂತೂ ನಾಲಗೆಗೆ ಕೆಲಸ ಕೊಡಲೇಬಾರದು. ಸುಮ್ಮನೆ ಇದರಿಂದ ಇದ್ದ ಮಾನಸಿಕ ನೆಮ್ಮದಿಯೇ ಕದಡಿ ಹೋಗುತ್ತದೆ. ಹೀಗೆಂದು ಸಾವಿರ ಸಲ ಮನಸ್ಸಿನಲ್ಲಿಯೇ ಅಂದುಕೊಳ್ಳುವವರಿರುತ್ತಾರೆ. ಆದರೆ ಅಂದುಕೊಂಡಂತೆ ಎಲ್ಲವೂ ಆಗತ್ತದೆಯೇ? ಖಂಡಿತಾ ಇಲ್ಲ. ಪದಾರ್ಥಕ್ಕೆ ಉಪ್ಪಿಲ್ಲ ಎಂದೋ, ಖಾರ ಜಾಸ್ತಿ ಆಯ್ತು ಎಂದೋ, ಒಲೆಯಲ್ಲಿಟ್ಟ ಹಾಲು ಉಕ್ಕಿ ವೇಸ್ಟ್ ಆಯಿತು ಎಂದೋ ಕಟ್ಟಿಕೊಂಡವಳ ಜೊತೆ ಕೋಪ ಉಕ್ಕುಕ್ಕಿ ಬರುತ್ತದೆ. ಹೆಂಡತಿಯೂ ಅಷ್ಟೇ. ಇನ್ನು ಮುಂದೆ ಗಂಡನ ಬೇಕು, ಬೇಡಗಳನ್ನು ಅರಿತುಕೊಂಡು ಮುಂದಡಿ ಇಡಬೇಕು. ಗಂಡನ ಮುಖಭಾವವನ್ನು ನೋಡಿಯೇ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದೆಲ್ಲಾ ಅಂದುಕೊಳ್ಳುತ್ತಾಳೆ. ಆದರೆ ಯಾವುದೋ ಕ್ಷಣದಲ್ಲಿ ನೆತ್ತಿಗೆ ಅಮರಿಕೊಳ್ಳುವ ಕೋಪ ಗಂಡನ ಸಣ್ಣ ಮಾತಿಗೂ ಉಗ್ರ ರೂಪ ತಳೆಯುತ್ತದೆ. ಪರಿಣಾಮ ಇಬ್ಬರ ಮನಸ್ಸೂ ಕಲಕಿ ಹೋಗುತ್ತದೆ. ಮಾತು ಬೇಡವಾಗಿ ಮೌನ ಆವರಿಸಿಬಿಡುತ್ತದೆ.
ದಿನಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಪ್ರಕಟಗೊಳ್ಳುವ ಹೆಚ್ಚಿನ ಸುದ್ದಿಗಳಲ್ಲಿ ಅಪಘಾತದ ಸುದ್ದಿಯೇ ಹೆಚ್ಚಾಗಿರುತ್ತದೆ. ಅಪಘಾತಕ್ಕೆ ಅವಸರವೇ ಕಾರಣ ಎಂಬುದೂ ರುಜುವಾತಾಗಿರುತ್ತದೆ. ಡೇಂಜರ್ ಝೋನ್ ಎಂಬುದನ್ನು ಕಿವಿಗೆ ಹಾಕಿಕೊಳ್ಳದೆ ಅಕ್ಸಿಲೇಟರ್ ಅದುಮಿದ ಪರಿಣಾಮವೇ ಅಪಘಾತ ಸಂಭವಿಸಿದೆ ಎಂಬುದು ಗೊತ್ತಾಗಿ ಇನ್ನು ಮುಂದೆ ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಚಲಾಯಿಸಬೇಕು. ಭೀಕರ ಅಪಘಾತದ ಪರಿಣಾಮ ನೋಡಿದ ಬಳಿಕವಂತೂ ಯಾವುದೇ ಕಾರಣಕ್ಕೂ ಇನ್ನು ಮುಂದೆ ಓವರ್ ಟೇಕ್ ಮಾಡಬಾರದು ಎಂದು ನೂರು ಬಾರಿ ಅಂದುಕೊಳ್ಳುತ್ತೇವೆ. ಒಂದೆರಡು ದಿನ ಮನಸ್ಸಿನ ಮಾತಿನಂತೆ ನಡೆದುಕೊಳ್ಳುತ್ತೇವೆ ಕೂಡಾ. ಆದರೆ ದಿನ ಕಳೆದಂತೆ ಮನಸ್ಸಿನ ಮಾತು ಮರೆತುಹೋಗುತ್ತದೆ. ನಮಗೇ ಗೊತ್ತಿಲ್ಲದೆ ಅಕ್ಸಿಲೇಟರ್ ಅದುಮಿ ಹೋಗುತ್ತದೆ. ಭಯಾನಕ ತಿರುವಿನಲ್ಲೂ ಕೂಡಾ ಇನ್ನೊಂದು ವಾಹನವನ್ನು ಹಿಂದಿಕ್ಕುವ ಸಾಹಸಕ್ಕೆ ಮುಂದಾಗುತ್ತೇವೆ. ಅದೃಷ್ಟ ಕೈಕೊಟ್ಟು ಅಪಘಾತ ಸಂಭವಿಸಿದ ಮೇಲಷ್ಟೇ ‘ಅವಸರ ಮಾಡಬಾರದಿತ್ತು’ ಎಂಬ ಜ್ಞಾನೋದಯದ ಮಾತುಗಳನ್ನು ನಮಗೆ ನಾವೇ ಹೇಳಿಕೊಳ್ಳುತ್ತೇವೆ.
ತಿಂದುಂಡು ತೇಗುವ ಗುಂಡು ಪಾರ್ಟಿಗೆ ಹೋಗಲೇ ಬಾರದು. ಹೋದರೂ ಸ್ವಲ್ಪ ಹೊತ್ತು ಇದ್ದು ಬಂದುಬಿಡಬೇಕು. ಆಗಾಗ ಹೋಗುತ್ತಿದ್ದರೆ ಬೀಯರ್ ಅಭ್ಯಾಸ ಆಗಿ ಬಿಡುತ್ತದೆ. ಮತ್ತೆ ಬೀಯರ್ ಮಾಮೂಲಿ ಎಂಬಂತಾಗಿ ಹಾಟ್ ಗೆ ಜಂಪ್ ಆಗುವ ಆಸೆ ಬಂದುಬಿಡಬಹುದು ಎಂಬೆಲ್ಲಾ ಯೋಚನೆಗಳು ಆರಂಭದಲ್ಲಿ ಎಲ್ಲರಲ್ಲೂ ಇದ್ದೇ ಇರುತ್ತವೆ. ಆದರೆ ದಾಕ್ಷಿಣ್ಯಕ್ಕೆ ಕೋಲ್ಡ್ ಡ್ರಿಂಕ್ಸ್ ನಲ್ಲಿ ಚಿಯರ್ಸ್ ಹೇಳುವ ವ್ಯಕ್ತಿ ಬರಬರುತ್ತಾ ಬೀಯರ್ ನತ್ತ ಬಾಗಿ ಬಿಡುತ್ತಾನೆ. ನಂತರ ಹಾಟ್ ಗೆ ಪ್ರಮೋಶನ್ ಹೊಂದಿ ಬಳಿಕ ಎಣ್ಣೆ ಪಾರ್ಟಿಯ ಮಾಮೂಲಿ ಗಿರಾಕಿಯಾಗಿ ಸೆಟ್ಲ್ ಆಗಿಬಿಡುತ್ತಾನೆ. ಯಾರಿಗೂ ಕೂಡಾ ಆರಂಭದಲ್ಲಿ ಮದ್ಯದ ಬಾಟಲ್ ಹಿಡಿದಾಗ ದೊಡ್ಡ ಕುಡುಕನಾಗಿಬಿಟ್ಟೇನು ಎಂಬ ಸಣ್ಣ ಅರಿವೂ ಕೂಡಾ ಇರುವುದೇ ಇಲ್ಲ.
ಚಿಕ್ಕದೊಂದು ಆರಂಭ ಕೊನೆಗೆ ಯೋಚನೆಗೆ ನಿಲುಕದ ಅಂತ್ಯಕ್ಕೆ ಎಡೆಮಾಡಿಕೊಳ್ಳುತ್ತದೆ. ಅದು ಸಾಧನೆಯ ಶಿಖರವೇ ಇರಲಿ., ಅಧಪತನಕ್ಕೆ ನಾಂದಿ ಹಾಡುವ ದುಶ್ಚಟಗಳೇ ಇರಲಿ. ಒಂದೇ ಒಂದು ತಪ್ಪು ಹೆಜ್ಜೆಯೂ ಇಟ್ಟ ಗುರಿಗೆ ಮುಳ್ಳಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಾಳ ಪಯಣದಲ್ಲಿ ಯಶಸ್ವಿಯಾಗಿ ದಡ ಸೇರುವ ಆಸೆ, ಆಕಾಂಕ್ಷೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ಕಾಲು ಜಾರುವ ಹಂತದಲ್ಲಿ ಮನಸ್ಸಿನ ಮಾತಿಗೆ ಕಿವಿಗೊಡಬೇಕು. ಏಕೆಂದರೆ ಜಾರದ ಜಾಗದಲ್ಲಿ ಹೆಜ್ಜೆ ಇಟ್ಟು ಮುನ್ನಡೆದರೆ ಮಾತ್ರ ಬಾಳ ಪಯಣದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)