*ಗಣೇಶ್ ಮಾವಂಜಿ.
ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಬರುವ ಪ್ರಾಮುಖ್ಯತೆಯ ದಿನ ಪರಿಸರ ದಿನಾಚರಣೆ. ಜೂನ್ ಆರಂಭವಾದೊಡನೆ ಎಲ್ಲೆಡೆ ಪರಿಸರ ದಿನಾಚರಣೆ ನಡೆಸಲಾಗುತ್ತಿದೆ. ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸರಕಾರಿ ಇಲಾಖೆಗಳಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಸಾರಲಾಗುತ್ತಿದೆ. ಕೆಲವೆಡೆ ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿ ಪರಿಸರ ಜಾಗೃತಿಯ ನೆಪದಲ್ಲಿ ‘ಕಾಡು ಬೆಳೆಸಿ, ನಾಡು ಉಳಿಸಿ’, ‘ಹಸಿರೇ ಉಸಿರು’ ಎಂಬೆಲ್ಲಾ ಘೋಷವಾಕ್ಯಗಳನ್ನು ಗಂಟಲು ಹರಿಯುವಂತೆ ಬೊಬ್ಬೆ ಹಾಕಿ ಪರಿಸರದ ಬಗ್ಗೆ ಇನ್ನಿಲ್ಲದ ಕಾಳಜಿ ತೋರುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ.ಸರಕಾರಿ ಇಲಾಖಾ ಕಾರ್ಯಕ್ರಮದಲ್ಲಂತೂ ಪರಿಸರ ದಿನಾಚರಣೆಯ
ಕರೆಯೋಲೆಯಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಹೆಸರನ್ನು ಹಾಕಲೇ ಬೇಕಾಗುತ್ತದೆ.ತಪ್ಪಿದರೆ ಶಿಷ್ಟಾಚಾರ ಉಲ್ಲಂಘಿಸಿದಂತಾಗುತ್ತದೆ. ಜನಪ್ರತಿನಿಧಿಗಳ ಸಮಯಕ್ಕೆ ಸರಿಹೊಂದುವಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತದೆ.
ಕಾರ್ಯಕ್ರಮದ ದಿನ ಸರಕಾರಿ ಇಲಾಖಾ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪ್ರಮುಖರು, ಆಯೋಜಕರು ಕಾರ್ಯಕ್ರಮದಲ್ಲಿ ಎಲ್ಲೂ ಲೋಪವಾಗದಂತೆ ಎಚ್ಚರಿಕೆ ವಹಿಸುತ್ತಾರೆ. ಸಚಿವರೋ ಅಥವಾ ಇಲಾಖಾ ಅಧಿಕಾರಿಗಳು ಬಂದರೆ ಅವರನ್ನು ಸ್ವಾಗತಿಸಲಿಕ್ಕಾಗಿಯೇ ವಿಶೇಷ ಅಸ್ಥೆ ವಹಿಸುತ್ತಾರೆ. ಬಂದ ಪ್ರಮುಖರ ಹಿನ್ನೆಲೆ, ಮುನ್ನೆಲೆಗಳನ್ನು ಕ್ರೋಢೀಕರಿಸಿ, ಅವರ ಸಾಧನೆಗಳನ್ನು ಪಟ್ಟಿ ಮಾಡಿ ಅವರ ಹೆಸರು ಬಂದಾಗ ಅವೆಲ್ಲವನ್ನೂ ಚಾಚೂ ತಪ್ಪದೆ ಹೇಳುವಂತೆ ನಿರೂಪಕರಿಗೆ ತಿಳಿಸಲಾಗುತ್ತದೆ.

ಕಾರ್ಯಕ್ರಮದ ವೇದಿಕೆಯ ತುಂಬಾ ಸಾಲು ಸಾಲಾಗಿ ಕುರ್ಚಿಗಳನ್ನು ಇರಿಸಿ ಅತಿಥಿ, ಅಭ್ಯಾಗತರು ಆಸೀನರಾಗುವಂತೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.ಸಭಾ ಕಾರ್ಯಕ್ರಮ ಪ್ರಾರಂಭವಾದಾಗ ಅತಿಥಿಗಳಾಗಿ ಭಾಗವಹಿಸಿದ ಎಲ್ಲರೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪರಿಸರ ಹಾಳುಗೆಡವದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದೆಲ್ಲಾ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಸ್ವಾಗತ ಭಾಷಣದ ಜವಾಬ್ದಾರಿ ವಹಿಸಿದವರು ಅತಿಥಿಗಳನ್ನು ಸ್ವಾಗತಿಸುವುದು ಮಾತ್ರವಲ್ಲದೆ ಪ್ರಸ್ತಾವನೆ, ವಂದನಾರ್ಪಣೆಯನ್ನೂ ಮುಗಿಸುತ್ತಾರೆ.ಅತಿಥಿಗಳಲ್ಲಿ ಕೆಲವರು ಹಿಂದಿನ ದಿನ ಯಾರಾದರೂ ಗೊತ್ತಿದ್ದವರಲ್ಲಿ ಭಾಷಣ ಬರೆಸಿಕೊಂಡು ಹೇಳುತ್ತಾರೆ. ಮತ್ತೆ ಕೆಲವರು ಬರೆದದ್ದನ್ನೇ ಓದಿ ಹೇಳಿ ಸಭಿಕರಿಗೆ ಬೋರ್ ಹೊಡೆಸುತ್ತಾರೆ. ಇನ್ನು ಕೆಲವರು ಸಮಯದ ಪ್ರಜ್ಞೆ ಇಲ್ಲದೆ ಪರಿಸರದ ಸಂರಕ್ಷಣೆಯ ವಿಷಯವೊಂದನ್ನು ಬಿಟ್ಟು ಅದೇನೇನೋ ಹೇಳಿ ಬೆವರೊರೆಸಿಕೊಂಡು ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೊಂದು ವೇದಿಕೆ ಸಿಕ್ಕಿತೆಂಬ ಖುಷಿಯಲ್ಲಿ ಉದ್ದುದ್ದದ ಶ್ಲೋಕಗಳನ್ನು ಪೋಣಿಸಿ ಭಾಷಣ ಬಿಗಿಯುತ್ತಾರೆ.
ಇನ್ನು ಮಾತನಾಡಲೇ ಬೇಕಾದ ಪ್ರಮುಖರು ಮೈಕ್ನ ಸನಿಹ ಬಂದಾಗ ಇಡೀ ಕಾರ್ಯಕ್ರಮದ ಸಮಯ ಅದಾಗಲೇ ಮೀರಿ ಹೋಗಿರುತ್ತದೆ. ಹಾಗಿದ್ದರೂ ‘ಸಮಯ ಮೀರಿದೆ. ಕೇವಲ ಒಂದೆರಡು ಮಾತುಗಳನ್ನು ಹೇಳಿ ಮುಗಿಸುತ್ತೇನೆ’ ಎನ್ನುತ್ತಲೇ ಅರ್ಧ ಗಂಟೆ ಕೊರೆಯುತ್ತಾರೆ. ಸಭಾಧ್ಯಕ್ಷರ ಜವಾಬ್ದಾರಿ ಒಟ್ಟು ಕಾರ್ಯಕ್ರಮದ ಆಶಯಗಳ ಬಗ್ಗೆ ಹಾಗೂ ಕೈಗೊಳ್ಳುವ ನಿರ್ಧಾರಗಳ ಬಗ್ಗೆ ತಿಳಿಸುವುದಾದರೂ ಅತಿಥಿಗಳು ಹೇಳಿದ ಮಾತುಗಳನ್ನೇ ಅವರೂ ಪುನರುಚ್ಚರಿಸಿ ಮತ್ತೆ ಬೋರ್ ಹೊಡೆಸುತ್ತಾರೆ.
ತಮಾಷೆಯ ಸಂಗತಿ ಯಾವುದೆಂದರೆ ಪರಿಸರ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದ ಮೊದಲೋ ಅಥವಾ ಕೊನೆಗೋ ಗಿಡ ನೆಡುವ ಕಾರ್ಯಕ್ರಮ ಇರುತ್ತದೆ. ಮಿರುಗುವ ಶೂ ಹಾಕಿಕೊಂಡು, ಧರಿಸಿದ ವಸ್ತ್ರದ ಇಸ್ತ್ರಿ ಹಾಳಾಗದಂತೆ ಜಾಗರೂಕತೆಯಿಂದ ಮೊದಲೇ ತೆಗೆದ ಗುಂಡಿಯಲ್ಲಿ ತಂದಿರಿಸಿದ ಗಿಡಗಳನ್ನು ಇರಿಸಿ ಫೊಟೋಗೆ ಪೋಸ್ ನೀಡುವಲ್ಲಿಗೆ ಪರಿಸರ ದಿನಾಚರಣೆ ಉದ್ಘಾಟನೆಯ ಜವಾಬ್ದಾರಿ ಹೊತ್ತ ಮಹಾನುಭಾವರ ಕರ್ತವ್ಯ ಮುಗಿಯುತ್ತದೆ. ಜೊತೆಗೆ ಇನ್ನುಳಿದ ಅತಿಥಿಗಳೂ ಉದ್ಘಾಟನೆ ನೆರವೇರಿಸಿದ ಅತಿಥಿಯಂತೆಯೇ ಗಿಡ ನೆಡುವ ನೆಪದಲ್ಲಿ ಫೊಟೋಗೆ ಪೋಸ್ ನೀಡಿ ಅಲ್ಲಿಂದ ತೆರಳುತ್ತಾರೆ.

ನಂತರ ಅತಿಥಿಗಳು ಹೂತ ಗಿಡಕ್ಕೆ ಸರಿಯಾಗಿ ಮಣ್ಣು ಹಾಕಿ ನೆಡುವ ಕೆಲಸವನ್ನು ಮಾಡಲೆಂದು ಮೊದಲೇ ಒಂದಿಬ್ಬರು ಕೂಲಿಯಾಳುಗಳನ್ನು ನೇಮಿಸಿರುತ್ತಾರೆ. ಅವರು ಆ ಕೆಲಸ ಮಾಡುವಾಗ ಅದಾಗಲೇ ಬಂದ ಅತಿಥಿಗಳು ಅಲ್ಲಿಂದ ಮಾಯವಾಗಿರುತ್ತಾರೆ. ಸರಿಯಾಗಿ ಗಿಡ ನೆಡುವ ಕೆಲಸವನ್ನು ಕೂಲಿಯಾಳುಗಳೇ ನೆರವೇರಿಸಿದರೂ ಮರುದಿನದ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ ಗಳಲ್ಲಿ ಅವರ ಫೊಟೋ ಎಲ್ಲೂ ಕಾಣ ಸಿಗುವುದಿಲ್ಲ. ಬಳಿಕ ಎಷ್ಟು ಮಂದಿ ಆ ಗಿಡಗಳ ಬಗ್ಗೆ ನೆನೆಯುತ್ತಾರೆ, ಪೋಷಿಸುತ್ತಾರೆ ಎಂಬುದು ಯಕ್ಷಪ್ರಶ್ನೆ, ನೆಟ್ಟ ಗಿಡಗಳಲ್ಲಿ ಎಷ್ಟು ಬೆಳೆದು ಹೆಮ್ಮರವಾಗುತ್ತದೆ, ಎಷ್ಟನ್ನು ಸಮರ್ಪಕವಾಗಿ ಘೋಷಿಸಲಾಗುತ್ತದೆ ಎಂಬುದು ಇನ್ನೊಂದು ಕೌತುಕ.
ಕಾರ್ಯಕ್ರಮದ ವೇಳೆ ಅತಿಥಿಗಳನ್ನು ಸ್ವಾಗತಿಸಲೆಂದು ತಂದಿರಿಸಿದ ಹೂಗಳ ಹೊದಿಕೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ನದೇ ಆಗಿರುತ್ತದೆ. ದಾಹ ತಣಿಸಲೆಂದು ತಂದಿರಿಸಿದ ನೀರಿನ ಬಾಟಲುಗಳು ಕೂಡಾ ಪ್ಲಾಸ್ಟಿಕ್ ನದೇ ಆಗಿರುತ್ತದೆ. ತಿಂಡಿ, ಚಾ ಪೂರೈಕೆಗಾಗಿ ಪ್ಲಾಸ್ಟಿಕ್ ತಟ್ಟೆ, ಲೋಟಗಳ ಬಳಕೆ ಮಾಡಲಾಗುತ್ತದೆ. ಪರಿಸರ ದಿನಾಚರಣೆಯ ಕಾರ್ಯಕ್ರಮ ಮುಗಿದ ಬಳಿಕ ಇದೇ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ಕೆಲಸಗಳೂ ಕೆಲವೆಡೆ ನಡೆಯುತ್ತದೆ. ಕಾರ್ಯಕ್ರಮದ ಉದ್ದೇಶ ಪರಿಸರ ಸಂರಕ್ಷಣೆಯಾದರೂ ಈ ಪ್ಲಾಸ್ಟಿಕ್ ಬಳಕೆ ಪರಿಸರ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ..
ಮೇಲೆ ವಿವರಿಸಿದ ಘಟನೆಗಳು ಎಲ್ಲಾ ಕಡೆಗಳಲ್ಲೂ ನಡೆಯುತ್ತದೆ ಎಂದಲ್ಲ. ಆದರೆ ಹೆಚ್ಚಿನ ಕಡೆಗಳಲ್ಲಿ ಇದೇ ರೀತಿಯಾಗಿ ನಡೆಯುತ್ತದೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಶಾಲಾ ಕಾಲೇಜುಗಳಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸುತ್ತಾರೆ ನಿಜ. ಆದರೆ ಮಕ್ಕಳೆದುರು ಜವಾಬ್ದಾರಿ ಹೊತ್ತ ಹಿರಿಯರು, ಜನಪ್ರತಿನಿಧಿಗಳು, ಅಧಿಕಾರಿಗಳು ನಿಜ ಅರ್ಥದ ಪರಿಸರ ಕಾಳಜಿಯನ್ನು ಪ್ರದರ್ಶಿಸಿ ಮಾದರಿಯಾಗಬೇಕು. ಹಾಗಿದ್ದಾಗ ಮಾತ್ರ ಪರಿಸರ ದಿನಾಚರಣೆಗೊಂದು ನೈಜ ಅರ್ಥ ಬರಲು ಸಾಧ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)