ಸುಳ್ಯ:ಸುಳ್ಯದ ಪ್ರಥಮ ಕೃಷಿ ಪರಿಕರಗಳ ಮಳಿಗೆ ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ ಸ್ಥಾಪನೆಯಾಗಿ 50 ವರ್ಷಗಳು ಪೂರ್ತಿಯಾಗಿದ್ದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಈ ಹಿನ್ನಲೆಯಲ್ಲಿ ಮಾ.7 ರಂದು ಅದ್ದೂರಿ ಆಗ್ರೋ ‘ಸುವರ್ಣ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಯುಕ್ತ ಆಗ್ರೋ ಕೃಷಿ ಚಿಂತನ, ಆಗ್ರೋ ಗೌರವ ಸನ್ಮಾನ, ಆಗ್ರೋ ಸಾಂಸ್ಕೃತಿಕ ಸಂಜೆ ನಡೆಯಲಿದೆ ಎಂದು ಭಾರತ್ ಆಗ್ರೋ ಸರ್ವೀಸಸ್ ಆ್ಯಂಡ್ ಸಪ್ಲೈಸ್ನ ಮಾಲಕರಾದ ರಾಮಚಂದ್ರ ಪಿ. ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1974 ರಲ್ಲಿ ಸ್ಥಾಪಿತವಾದ
ಭಾರತ್ ಆಗೋ ಸರ್ವಿಸಸ್ ಮತ್ತು ಸಪ್ಲೈಸ್ ಸಂಸ್ಥೆಗೆ ಐವತ್ತು ವರ್ಷ ತುಂಬಿದ ಪ್ರಯುಕ್ತ ಮಾರ್ಚ್ 07 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ‘ಆಗ್ರೋ ಸುವರ್ಣ ಸಂಭ್ರಮ’ ವನ್ನು ಏರ್ಪಡಿಸಲಾಗಿದೆ. ಅಪರಾಹ್ನ 3.30 ರಿಂದ ರಾತ್ರಿ 9.00 ರ ವರೆಗೆ ನಡೆಯಲಿರುವ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ.
![](https://thesulliamirror.com/wp-content/uploads/2024/02/IMG_20240228_135513.jpg)
ಆಗ್ರೋ ಕೃಷಿ ಚಿಂತನ’
ಅಪರಾಹ್ನ 3.30 ಕ್ಕೆ ಸರಿಯಾಗಿ ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ.ಆರ್.ಕೆ.ನಾಯರ್ ಇವರ ಅಧ್ಯಕ್ಷತೆಯಲ್ಲಿ ಆಗ್ರೋ ಕೃಷಿ ಚಿಂತನ’ ಎಂಬ ಕಾರ್ಯಕ್ರಮ ನಡೆಯಲಿದ್ದು ನಾಡಿನ ಅನುಭವಿ ಕೃಷಿ ತಜ್ಞರಿಂದ ಕೃಷಿಯ ಬಗೆಗಿನ ವಿಶೇಷ ಮಾಹಿತಿ ಉಪನ್ಯಾಸ ನಡೆಯಲಿದೆ. ಸ್ವಯಂಚಾಲಿತ ನೀರಾವರಿ ವಿಧಾನದ ಬಗ್ಗೆ ಅನಂತ ರಾಮಕೃಷ್ಣ ಪೆರುವಾಯಿ, ಕನಿಷ್ಠ ನೀರಿನಲ್ಲಿ ಅಡಿಕೆ ಕೃಷಿ ಬಗ್ಗೆ ಪ್ರವೀಣ ಕೇಶವ ಮೈರುಗ ಕುರುಡಪದವು ಹಾಗೂ ಟ್ಯಾಂಕ್ಗಳ ಬಳಕೆ ಮಳೆ ಕೊಯ್ದು ವಿಷಯದ ಬಗ್ಗೆ ಮುರಳೀಧರ ಭಟ್ ಬಂಗಾರಡ್ಕ ಮಾತಾಡಲಿದ್ದಾರೆ. ವಿಶೇಷ ಕೃಷಿ ಚಿಂತನದಲ್ಲಿ ಪ್ರಕೃತಿ- ಯಂತ್ರ- ಬದುಕು ವಿಚಾರದಲ್ಲಿ ಡಾ.ಆರ್.ಕೆ.ನಾಯರ್ ಮಾತಾಡಲಿದ್ದಾರೆ.
![](https://thesulliamirror.com/wp-content/uploads/2024/02/IMG_20240228_135524.jpg)
ಸುವರ್ಣ ಸಂಭ್ರಮದ ಉದ್ಘಾಟನೆ:
ಸಂಜೆ 5 ಗಂಟೆಗೆ ಸುವರ್ಣ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಆಗ್ರೋ ಸುವರ್ಣ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಡಾ.ಟಿ.ಹರಪ್ರಸಾದ್ ಶುಭಾಶಂಸನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ನಿರ್ದೇಶಿಸಿದ ಆಗ್ರೋ ಸಾಕ್ಷ್ಯಚಿತ್ರವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಬಿಡುಗಡೆಗೊಳಿಸಲಿದ್ದಾರೆ. ಐವತ್ತು ವರ್ಷದ ಆಗ್ರೋ ಸಾಧನೆಯ ಅವಲೋಕನವನ್ನು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ, ಆನಂದ ಖಂಡಿಗ ಹಾಗೂ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ:
ಆಗ್ರೋ ಸುವರ್ಣ ಸಂಭ್ರಮ ಉದ್ಘಾಟನಾ ಸಂದರ್ಭದಲ್ಲಿ ನಾಡಿನ ಐದು ಮಂದಿ ಹಿರಿಯ ಸಾಧಕರಿಗೆ ಆಗ್ರೋ ಗೌರವ ಸನ್ಮಾನ ನೀಡಲಾಗುವುದು. ಪದಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಗ್ರೀನ್ ಗೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್, ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾಪಲತೋಟ, ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ. ಗೌರಿ ಶಂಕರ್ ಹಾಗೂ ಹಿರಿಯ ಕೃಷಿಕರಾದ ಸಂಪಾಜೆಯ ಶಂಕರ್ ಪ್ರಸಾದ್ ರೈ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು
ರಾಮಚಂದ್ರ ಪಿ.ವಿವರಿಸಿದರು.
![](https://thesulliamirror.com/wp-content/uploads/2024/02/IMG_20240228_135536.jpg)
ಆಗ್ರೋ ಸಾಂಸ್ಕೃತಿಕ ಸಂಜೆ: 160 ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ರಂಗ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ಸಂಯೋಜನೆಯಲ್ಲಿ ಸಂಜೆ 7.00 ಕ್ಕೆ ಎಸ್.ಡಿ.ಯಂ.ಶಿಕ್ಷಣ ಸಂಸ್ಥೆ ಉಜಿರೆ ಇಲ್ಲಿನ ಸುಮಾರು 160 ಕ್ಕಿಂತಲೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಕೇರಳದ ಮೋಹಿನಿಯಾಟ್ಟಂ, ಗುಜರಾತ್ ನ ದಾಂಡಿಯಾ- ಗರ್ಭ ನೃತ್ಯ ಒರಿಸ್ಸಾದ ಒಡಿಸ್ಸಿ, ಕರಾವಳಿಯ ಯಕ್ಷಗಾನ ಬ್ಯಾಲೆಟ್, ಭರತನಾಟ್ಯ ಶಿವತಾಂಡವ ರೂಪಕ, ಸ್ಪಾನಿಶ್ ಪ್ಲೆಮೆಂಕೋ ಕ್ರಿಯೇಟಿವ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಡ್ಯಾನ್ಸ್ ಕೇರಳದ ತೆಯ್ಯಂ ಆಧಾರಿತ ನರಸಿಂಹಾವತಾರ, ಶ್ರೀರಾಮ ಪಟ್ಟಾಭಿಷೇಕ ವಿಶೇಷ ನೃತ್ಯ ರೂಪಕ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ಪ್ರಭಾಕರ ನಾಯರ್, ದಳ ಸುಬ್ರಾಯ ಭಟ್, ಡಾ. ಕೇಶವ ಪಿ.ಕೆ, ಡಾ. ಪುರುಷೋತ್ತಮ ಕೆ. ಜಿ. ಉಪಸ್ಥಿತರಿದ್ದರು.