ಸುಳ್ಯ:ಸುಳ್ಯ ನಗರ ಸಮೀಪ ಅರಂಬೂರು, ಪರಿವಾರಕಾನ ಸೇರಿ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಆನೆ ಹಾವಳಿ ತಡೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ,ಅರಂಬೂರು ಪರಿವಾರಕಾನ ಮತ್ತಿತರ
ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುವ ಆನೆಗಳು ಕೃಷಿ ಹಾನಿ ಮಾಡುತಿದೆ.ಅರಂಬೂರು, ಪರಿವಾರಕಾನ, ಪಾಲಡ್ಕ, ಕಲ್ಚರ್ಪೆ ಭಾಗದಲ್ಲಿ ಹಲವು ಸಮಯಗಳಿಂದ ಆನೆಗಳ ಹಿಂಡು ಕೃಷಿ ಹಾನಿ ಮಾಡುತಿದೆ. ರಾತ್ರಿಯಾದರೆ ಪ್ರದೇಶದಲ್ಲಿ ಭಯದ ವಾತಾವರಣ ಉಂಟಾಗಿದ್ದು ಜನರು ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದಲ್ಲಿ

ಸುಮಾರು 220ಕ್ಕಿಂತಲೂ ಅಧಿಕ ಮನೆಗಳು ಹಾಗೂ ಸುಮಾರು 400ಎಕರೆ ಪ್ರದೇಶಗಳಲ್ಲಿ ಬಾಳೆ,ತೆಂಗು,ಭತ್ತ,ಅಡಿಕೆ ಕೃಷಿ ಮಾಡುತ್ತಿದ್ದು, ಇದು ಆನೆ ಹಾವಳಿಯಿಂದ ನಾಶವಾಗುತಿದೆ. ಅಲ್ಲದೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಭಯ ಪಡುವ ಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದುದರಿಂದ ರಸ್ತೆ ಬದಿಯಲ್ಲಿ ವಿದ್ಯುದೀಪ ಅಳವಡಿಸಬೇಕು ಮತ್ತು ಆನೆ ತಡೆಗೋಡೆಯನ್ನು ಪರಿವಾರಕಾನದಿಂದ- ಅರಣ್ಯ ಇಲಾಖೆಯ ಮರದ ಡಿಪೋ ತನಕ, ಪಾಲಡ್ಕದಿಂದ ಕಲ್ಬರ್ಪೆ ತನಕ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತು.
ಪ್ರಮುಖರಾದ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಅನಿಲ್ ಪರಿವಾರಕಾನ, ಅಶೋಕ್ ಪೀಚೆ, ಸುದೇಶ್ ಅರಂಬೂರು, ರವಿ, ಪುಷ್ಪಾವತಿ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಶಬರೀಶ ಪರಿವಾರಕಾನ ಮತ್ತಿತರರು ಮನವಿ ಸಲ್ಲಿಸಿದರು.