ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಇಲ್ಲಿನ ಗಾಬಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.
ಇದರೊಂದಿಗೆ ಕೊನೆಯ ದಿನದಾಟದಲ್ಲಿ ರೋಚಕತೆಗಾಗಿ ಕಾದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಸತತವಾಗಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಯಾಗಿತ್ತು. ಇದರಿಂದಾಗಿ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ.
ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 18 ಓವರ್ಗಳಲ್ಲಿ
ಏಳು ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಇದರೊಂದಿಗೆ ಭಾರತದ ಗೆಲುವಿಗೆ 275 ರನ್ಗಳ ಗುರಿ ಒಡ್ಡಿತು.ಆಸೀಸ್ ಡಿಕ್ಲೇರ್ ವೇಳೆಗೆ ದಿನದಾಟದಲ್ಲಿ 54 ಓವರ್ಗಳು ಬಾಕಿ ಉಳಿದಿತ್ತು. ಬಳಿಕ ಗುರಿ ಬೆನ್ನಟ್ಟಿದ ಭಾರತ ಮಂದ ಬೆಳಕಿನಿಂದಾಗಿ ಪಂದ್ಯ ಸ್ಧಗಿತಗೊಂಡಾಗ ಎರಡು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಎಂಟು ರನ್ ಗಳಿಸಿತ್ತು. ಯಶಸ್ವಿ ಜೈಸ್ವಾಲ್ (4), ಕೆ.ಎಲ್. ರಾಹುಲ್ (4) ಕ್ರೀಸಿನಲ್ಲಿದ್ದರು.ಇದರ ಬೆನ್ನಲ್ಲೇ ಸುರಿದ ಮಳೆಯಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಮೊದಲ ಇನಿಂಗ್ಸ್ಗೆ ವಿರುದ್ಧವಾಗಿ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ತ್ರಿವಳಿ ವೇಗಿಗಳು ಸಾಂಘಿಕ ದಾಳಿ ಸಂಘಟಿಸಿದರು. ಆ ಮೂಲಕ ವೇಗವಾಗಿ ರನ್ ಗಳಿಸುವ ಆಸ್ಟ್ರೇಲಿಯಾದ ಯೋಜನೆಗೆ ಕಡಿವಾಣ ಹಾಕಿದರು.ಜಸ್ಪ್ರೀತ್ ಬೂಮ್ರಾ ಮಗದೊಮ್ಮೆ ಮಾರಕವಾಗಿ ಕಾಡಿದರು. ಪರಿಣಾಮ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳು ಎರಡಂಕಿಯನ್ನು ದಾಟಲಿಲ್ಲ. ನೇಥನ್ ಮೆಕ್ಸ್ವೀನಿ (4), ಉಸ್ಮಾನ್ ಖ್ವಾಜಾ (8), ಮಾರ್ನಲ್ ಲಾಬುಷೇನ್ (1), ಮಿಷೆಲ್ ಮಾರ್ಷ್ (2) ಬೇಗನೇ ಪೆವಿಲಿಯನ್ ಸೇರಿದರು.
ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಟ್ರಾವಿಸ್ ಹೆಡ್ 17 ಮತ್ತು ಸ್ಟೀವ್ ಸ್ಮಿತ್ 4 ರನ್ ಗಳಿಸಿ ಔಟ್ ಆದರು. ಅಲೆಕ್ಸ್ ಕ್ಯಾರಿ ಅಜೇಯ 20 ಮತ್ತು ಪ್ಯಾಟ್ ಕಮಿನ್ಸ್ 22 ರನ್ ಗಳಿಸಿದರು.ಭಾರತದ ಪರ ಬೂಮ್ರಾ ಮೂರು (18ಕ್ಕೆ 3) ಮತ್ತು ಮೊಹಮ್ಮದ್ ಸಿರಾಜ್ (36ಕ್ಕೆ 2) ಹಾಗೂ ಆಕಾಶ್ ದೀಪ್ (28ಕ್ಕೆ 2) ತಲಾ ಎರಡು ವಿಕೆಟ್ಗಳನ್ನು ಗಳಿಸಿದರು.
ಈ ಮೊದಲು ಬ್ಯಾಟಿಂಗ್ ಮುಂದುವರಿಸಿದ ಭಾರತ ಮೊದಲ ಇನಿಂಗ್ಸ್ನಲ್ಲಿ 78.5 ಓವರ್ಗಳಲ್ಲಿ 260 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.ಇದರೊಂದಿಗೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 185 ರನ್ಗಳ ಮಹತ್ವದ ಮುನ್ನಡೆ ಗಳಿಸಿತು.