ಲೀಡ್ಸ್:ವೇಗಿ ಜಸ್ಪ್ರೀತ್ ಬೂಮ್ರಾ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಬಲದಿಂದ ಭಾರತ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, 471 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಉತ್ತಮ ಹೋರಾಟ ನೀಡಿದ
ಇಂಗ್ಲೆಂಡ್ 465 ರನ್ ಗಳಿಸಿ ಆಲೌಟ್ ಆಗಿದೆ. ಇದರೊಂದಿಗೆ ಭಾರತಕ್ಕೆ 6 ರನ್ಗಳ ಅಲ್ಪ ಮುನ್ನಡೆ ಲಭಿಸಿದೆ.ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನೀಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 90ರನ್ ಗಳಿಸಿದೆ. ಒಟ್ಟಾರೆ ಟೀಂ ಇಂಡಿಯಾ 96 ರನ್ ಮುನ್ನಡೆಯಲ್ಲಿದೆ. 47ರನ್ ಗಳಿಸಿದ ಕೆ.ಎಲ್.ರಾಹುಲ್ ಮತ್ತು 6 ರನ್ ಗಳಿಸಿದ ಶುಭ್ಮನ್ ಗಿಲ್ ಕ್ರೀಸಿನಲ್ಲಿದ್ದಾರೆ. 4 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಮತ್ತು 30 ರನ್ ಗಳಿಸಿದ ಸಾಯ್ ಸುದರ್ಶನ್ ಔಟ್ ಆದರು.
ಆಂಗ್ಲರ ಪಡೆ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದಕೊಂಡು 209 ರನ್ ಗಳಿಸಿತ್ತು. ಹ್ಯಾರಿ ಬ್ರೂಕ್ ಜೊತೆ ಕ್ರೀಸ್ನಲ್ಲಿದ್ದ ಒಲಿ ಪೋಪ್ (106 ರನ್) ಬೇಗನೆ ಔಟಾದರು. ಎರಡನೇ ದಿನವೇ ಶತಕ ಗಳಿಸಿದ್ದ ಅವರು ಇಂದು ಆ ಮೊತ್ತಕ್ಕೆ ಕೇವಲ 6 ರನ್ ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು.ಬಳಿಕ ಬ್ರೂಕ್ ಆಟ ರಂಗೇರಿತು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಅವರು ತಂಡದ ಮೊತ್ತ ಏರಲು ನೆರವಾದರು. 112 ಎಸೆತಗಳಲ್ಲಿ 99 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿದ್ದ ಅವರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಔಟ್ ಮಾಡಿದರು.
ಅಂತಿಮವಾಗಿ ಈ ತಂಡ 465 ರನ್ ಗಳಿಸಿ ಆಲೌಟ್ ಆಯಿತು.
ಎಲ್ಲ ವಿಕೆಟ್ಗಳನ್ನು ವೇಗಿಗಳೇ ಪಡೆದದ್ದು ವಿಶೇಷ.
ಭಾರತ ಪರ ಉತ್ತಮ ಬೌಲಿಂಗ್ ಮಾಡಿದ ಬೂಮ್ರಾ, 83 ರನ್ ನೀಡಿ ಪ್ರಮುಖ ಐದು ವಿಕೆಟ್ಗಳನ್ನು ಕಬಳಿಸಿದರು. ಪ್ರಸಿದ್ಧ ಕೃಷ್ಣ ಮೂರು ವಿಕೆಟ್ ಪಡೆದರೆ, ಇನ್ನೆರಡು ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾದವು.