ಲೀಡ್ಸ್: ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಅಮೋಘ ಜಯ ದಾಖಲಿಸಿದೆ. 371 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 82 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿ ಗೆಲುವಿನ ನಗೆ ಬೀರಿತು. 5 ಟೆಸ್ಟ್ಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ಪರ ಬೆನ್ ಡೆಕೆಟ್ ಆಕರ್ಷಕ ಶತಕ(147) ಭಾರಿಸಿದರು. ಅರ್ಧ ಶತಕ ಗಳಿಸಿದ ಜಾಕ್ ಕ್ರಾವ್ಲಿ(65) ಹಾಗೂ
ಡೆಕೆಟ್ ಮೊದಲ ವಿಕೆಟ್ಗೆ 188 ರನ್ ಬಾರಿಸಿ ಭದ್ರ ಅಡಿಪಾಯ ಒದಗಿಸಿದರು. ಜೋ ರೂಟ್ ಅಜೇಯ ಅರ್ಧ ಶತಕ(53), ಬೆನ್ ಸ್ಟೋಕ್ಸ್(33), ಜೇಮಿ ಸ್ಮಿತ್ ಅಜೇಯ 44 ರನ್ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ಪಂದ್ಯದ ಕೊನೆಯ ದಿನ ಭಾರತದ ಬೌಲಿಂಗ್ ಪರಿಣಾಮಕಾರಿಯಾಗಲಿಲ್ಲ.
ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬಿಗುವಾಗಿಯೇ ಬೌಲಿಂಗ್ ಮಾಡಿದರು. ಅವರು ಬ್ಯಾಟ್ಸಮನ್ನರ ಸಹನೆ ಪರೀಕ್ಷಿಸಿದರು. ಕೆಲವು ಎಸೆತಗಳು ಡಕೆಟ್ ಮತ್ತು ಕ್ರಾಲಿ ಅವರ ಬ್ಯಾಟಿನಂಚಿಗೆ ಮುತ್ತಿಕ್ಕಿದರೂ ವಿಕೆಟ್ ಸಿಗಲಿಲ್ಲ. ಪ್ರಸಿದ್ಧ ಕೃಷ್ಣ ಈ ಸಂದರ್ಭದಲ್ಲಿ ನೆರವಿಗೆ ಬಂದರು. ಎರಡು ಓವರುಗಳ ಅಂತರದಲ್ಲಿ ಕ್ರಾಲಿ ಮತ್ತು ಓಲಿ ಪೋಪ್ ಅವರ ವಿಕೆಟ್ಗಳನ್ನು ಪಡೆದರು. ಈ ಪಂದ್ಯದಲ್ಲಿ ಪರದಾಡಿದ್ದ ಶಾರ್ದೂಲ್ ಠಾಕೂರ್ ಅವರು ಚಹಾಕ್ಕೆ ಸ್ವಲ್ಪ ಮೊದಲು, ಬಂಡೆಯಂತೆ ಬೇರೂರಿದ್ದ ಡಕೆಟ್ ಮತ್ತು ಅಪಾಯಕಾರಿ ಹ್ಯಾರಿ ಬ್ರೂಕ್ ಅವರ ವಿಕೆಟ್ಗಳನ್ನು ಪಡೆದರು. ಭಾರತದ ಪರ ಐದು ಶತಕಗಳು ದಾಖಲಾದರೂ ಎರಡೂ ಇನ್ನೀಂಗ್ಸ್ನಲ್ಲಿ ಕೊನೆಯಲ್ಲಿ ಭಾರತದ ಬ್ಯಾಟರ್ಗಳು ತರಗಲೆಗಳಂತೆ ಉದುರಿದ ಕಾರಣ ಮತ್ತು ಹಲವು ಕ್ಯಾಚ್ಗಳನ್ನು ಕೈ ಚೆಲ್ಲಿದ್ದು ಭಾರತಕ್ಕೆ ಗೆಲುವು ದೂರವಾಯಿತು.