ಸುಳ್ಯ:ಪಂಚಾಯತ್ ರಾಜ್ ಕಾಯಿದೆಗೆ ಮಾಡಿರುವ ತಿದ್ದುಪಡಿಯಿಂದಾಗಿ ಜನರಿಗೆ ಬಹಳ ತೊಂದರೆಯಾಗಲಿದ್ದು, ಇದರ ಬದಲಾವಣೆಗಾಗಿ ಪಕ್ಷ ರಾಜಕೀಯವನ್ನು ಬದಿಗಿಟ್ಟು ಎಲ್ಲ ಪಕ್ಷದ ಜನಪ್ರತಿನಿಧಿಗಳೂ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ಅರಂತೋಡು ಗ್ರಾ.ಪಂ. ಅಧ್ಯಕ್ಷ ಹಾಗೂ ಸುಳ್ಯ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ ರಾಜಕೀಯ ನಾಯಕರನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರಕಾರ ರಂದು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ಮಾಡಿದ್ದು ಅದರಂತೆ ಕೃಷಿ ಜಾಗದಲ್ಲಿ ಕಟ್ಟಿದ ಕಟ್ಟಡಕ್ಕೆ
ಸಂಖ್ಯೆ ನೀಡುವುದನ್ನು ತಡೆ ಹಿಡಿಯಲಾಗಿದೆ. ಗ್ರಾಮ ಪಂಚಾಯತ್ ನಲ್ಲಿ 11 ಬಿ ಮಾಡುವುದನ್ನು ತಡೆಹಿಡಿದಿರುವುದರಿಂದ ಕೃಷಿ ಜಾಗವನ್ನು ಖರೀದಿಸಿದ ವ್ಯಕ್ತಿಗೂ ಖಾತಾ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. 94 ಸಿ ಪ್ರಕಾರ ಇರುವ ಹಳೆಯ ಹಕ್ಕು ಪತ್ರಗಳಿಗೆ ನಮೂನೆ 9 &11 ಸೃಜಿಸುವುದನ್ನು ತಡೆಹಿಡಿಯಲಾಗಿದೆ. ಎಲ್ಲಾ ಏಕ ನಿವೇಶನ ಅನುಮೋದನೆಗಳು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಲ್ಲಿ ಆಗುತ್ತಿರುವುದರಿಂದ ಒಬ್ಬ ಬಡವನಿಗೆ ಭೂ ಪರಿವರ್ತನೆಯನ್ನು ಮಾಡಿ ನಮೂನೆ 9 – 11 ಪಡೆದು ಮನೆ ನಿರ್ಮಿಸಿಕೊಳ್ಳಲು ತುಂಬಾ ಕಷ್ಟಕರವಾಗುತ್ತಿದೆ. ಯಾವುದೇ ಬ್ಯಾಂಕ್ ಸಾಲಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಮಾತ್ರವಲ್ಲದೆ ಅರಂತೋಡು ತೊಡಿಕಾನ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತಿರುವುದಾಗಿ ಹೇಳುವುದರಿಂದ ಕಟ್ಟಡ ಪರವಾನಿಗೆಗಾಗಿ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಬೇಕಾಗುತ್ತದೆ. ಇದಲ್ಲದೆ ಪ್ರಾರಂಭಿಕ ಪ್ರಮಾಣ ಪತ್ರವನ್ನು ನಗರ ಮತ್ತು ಗ್ರಾಮಾಂತರ ಯೋಜನೆಯ ಪ್ರಾಧಿಕಾರದಿಂದ ಪಡೆಯಬೇಕೆಂದು ನಿಯಮ ಮಾಡಲಾಗಿದೆ. ಇದೆಲ್ಲವೂ ಗ್ರಾಮೀಣ ಭಾಗದವರಿಗೆ ಮನೆ ನಿರ್ಮಿಸಿಕೊಳ್ಳಲು ಇರುವ ಅತ್ಯಂತ ದೊಡ್ಡ ತೊಡಕಾಗಿದೆ ” ಎಂದು ಕೇಶವ ಅಡ್ತಲೆ ತಿಳಿಸಿದ್ದಾರೆ.
ಶಾಸಕರುಗಳು ಮತ್ತು ರಾಜಕೀಯ ನಾಯಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿರುವ ಅವರು ” ಮರಳು ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ನಡೆಸದೆ ಇದ್ದರೆ ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳು ಕುಂಠಿತವಾಗಬಹುದು. ಆ ಬಗ್ಗೆಯೂ ಜನಪ್ರತಿನಿಧಿಗಳು ಗಮನಹರಿಸಬೇಕು ” ಎಂದೂ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸುಳ್ಯ ತಾಲೂಕು ಪಂಚಾಯತ್ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಅಡ್ತಲೆ ಆಗ್ರಹಿಸಿದ್ದಾರೆ.