ಹರಾರೆ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ ಸೋಲನುಭವಿಸಿತು.ಟಿ20 ವಿಶ್ವಕಪ್ ಜಯಿಸಿದ ತಂಡದಲ್ಲಿ ಆಡಿದವರು ವಿಶ್ರಾಂತಿ ಪಡೆದಿದ್ದರಿಂದ ಉದಯೋನ್ಮುಖ ಆಟಗಾರರ ಬಳಗವನ್ನು ಜಿಂಬಾಬ್ವೆ ಪ್ರವಾಸಕ್ಕೆ ಕಳಿಸಲಾಗಿದೆ. ಆದರೆ ಜಿಂಬಾಬ್ವೆ ತಂಡದ ಎದುರು ಶುಭಮನ್ ಗಿಲ್ ನಾಯಕತ್ವದ ತಂಡವು ರನ್ ಗಳಿಸಲು ಪರದಾಡಿ
13 ರನ್ಗಳಿಂದ ಸೋಲನುಭವಿಸಿತು.ಭಾರತ ತಂಡವು 2024ರಲ್ಲಿ ಟಿ20 ಮಾದರಿಯಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ. ಜಿಂಬಾಬ್ವೆ ಎದುರು ಎಂಟು ವರ್ಷಗಳಿಂದ ಇದ್ದ ಅಜೇಯ ದಾಖಲೆಯೂ ಇದರೊಂದಿಗೆ ಮುರಿದುಬಿತ್ತು.116 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತವನ್ನು 102 ರನ್ಗಳಿಗೆ ಕಟ್ಟಿಹಾಕುವಲ್ಲಿ ಜಿಂಬಾಬ್ವೆಯ ನಾಯಕ, ಸ್ಪಿನ್ನರ್ ಸಿಕಂದರ್ ರಝಾ (25ಕ್ಕೆ3) ಮತ್ತು ವೇಗಿ ತೆಂದೈ ಚತಾರಾ (16ಕ್ಕೆ3) ಯಶಸ್ವಿಯಾದರು.ಗುರಿ ಬೆನ್ನಟ್ಟಿದ ಭಾರತ ತಂಡ ಮೊದಲ ಓವರ್ನಲ್ಲಿಯೇ ಆಘಾತ ಅನುಭವಿಸಿತು. ಪದಾರ್ಪಣೆ ಪಂದ್ಯ ಆಡಿದ ಅಭಿಷೇಕ್ ಶರ್ಮಾ ಖಾತೆಯನ್ನು ತರೆಯದೇ ನಿರ್ಗಮಿಸಿದರು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಪದಾರ್ಪಣೆ ಮಾಡಿದ ರಿಯಾನ್ ಪರಾಗ್ ಮತ್ತು ಧ್ರುವ ಜುರೇಲ್ ಕೂಡ ಎರಡಂಕಿ ಮುಟ್ಟಲಿಲ್ಲ. ರಿಂಕು ಸಿಂಗ್ ಅವರೂ ಸೊನ್ನೆ ಸುತ್ತಿದರು.
ಋತುರಾಜ್ ಗಾಯಕವಾಡ್ (7) ಆಟವೂ ನಡೆಯಲಿಲ್ಲ. ನಾಯಕ ಶುಭಮನ್ ಗಿಲ್ (31; 29ಎ) ಮತ್ತು ವಾಷಿಂಗ್ಟನ್ ಸುಂದರ್ (27; 34ಎ) ಅವರು ಹೋರಾಟ ತೋರಿದರು. ಆದರೆ ಶಿಸ್ತಿನ ದಾಳಿ ನಡೆಸಿದ ಬೌಲರ್ಗಳು ಭಾರತದ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಜಿಂಬಾಬ್ವೆ ಆಟಗಾರರ ಫೀಲ್ಡಿಂಗ್ ಕೂಡ ಗಮನ ಸೆಳೆಯಿತು.
ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿ (13ಕ್ಕೆ4) ಮತ್ತು ವಾಷಿಂಗ್ಟನ್ ಸುಂದರ್ (11ಕ್ಕೆ2) ಅವರ ದಾಳಿಯ ಮುಂದೆ ಜಿಂಬಾಬ್ವೆ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 115 ರನ್ ಗಳಿಸಿತು. ಆತಿಥೇಯ ತಂಡದ ಕ್ಲೈವ್ ಮೆದಾಂದೆ (ಔಟಾಗದೆ 29; 25ಎ) ಅವರು ಕೊನೆಯ ಹಂತದಲ್ಲಿ ದಿಟ್ಟ ಆಟವಾಡಿದರು. ಇದರಿಂದಾಗಿ ತಂಡದ ಮೊತ್ತವು 100ರ ಗಡಿ ದಾಟುವಂತಾಯಿತು.