ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಹತ್ವದ ಮೂಲಸೌಕರ್ಯ ಯೋಜನೆಯಾದ ಝಡ್-ಮೋರ್ಹ್ ಸುರಂಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.ಬೆಳಿಗ್ಗೆ ಶ್ರೀನಗರ ವಿಮಾನನಿಲ್ದಾಣದಲ್ಲಿ ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೆಲಿಕಾಪ್ಟರ್ ಮೂಲಕ ತೆರಳಿ ಸುರಂಗ ಉದ್ಘಾಟಿಸಿದರು. ಮೋದಿ ಜೊತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಮ್ಮು ಮತ್ತು
ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತಿತರ ನಾಯಕರು ಇದ್ದರು.
ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿದ ಮೋದಿ, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಗಗಾಂಗೀರ್ ಮತ್ತು ಸೋನಾಮಾರ್ಗ್ ನಡುವಿನ 6.5 ಕಿಮೀ ಉದ್ದದ ಎರಡು ಪಥದ ರಸ್ತೆ ಸುರಂಗದಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ಸಮಾನಾಂತರ 7.5 ಮೀಟರ್ ಎಸ್ಕೇಪ್ ಮಾರ್ಗವನ್ನು ನಿರ್ಮಿಸಲಾಗಿದೆ.
ಸಮುದ್ರ ಮಟ್ಟದಿಂದ 8,650 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಈ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಲೇಹ್ಗೆ ಹೋಗುವ ಮಾರ್ಗದಲ್ಲಿ ಎಲ್ಲ ಋತುಮಾನದಲ್ಲೂ ಸಂಪರ್ಕ ಕಲ್ಪಿಸುತ್ತದೆ. ಹೆಚ್ಚಿನ ಭೂಕುಸಿತಗಳು ಮತ್ತು ಹಿಮಕುಸಿತಗಳ ಮಾರ್ಗಗಳನ್ನು ಬೈಪಾಸ್ ಮಾಡುತ್ತದೆ. ಸುರಂಗವನ್ನು
2,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಎಲ್ಲ ಋತುಮಾನಗಳಲ್ಲೂ ಸಂಪರ್ಕ ಕಲ್ಪಿಸುತ್ತದೆ. ಈ ಮೂಲಕ ಸೋನಾಮಾರ್ಗ್ ಪ್ರದೇಶವನ್ನು ಚಳಿಗಾಲದ ಕ್ರೀಡಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ.
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೋನಾಮಾರ್ಗ್ ಬೇಸಿಗೆಯಲ್ಲಿ ಸ್ಥಳೀಯ ಮತ್ತು ಸ್ಥಳೀಯೇತರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಪ್ರತಿ ವರ್ಷ ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಮುಚ್ಚಿರುತ್ತಿತ್ತು.