ಕೊಲಂಬೊ: ಭಾರತದ ಪುರುಷರ ಕ್ರಿಕೆಟ್ ತಂಡ ಏಷ್ಯಾ ಕಪ್ನಲ್ಲಿ ಸತತ ಮೂರು ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ, ಏಷ್ಯಾ ಕಪ್ ಎತ್ತಿದರೆ, ಇತ್ತ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ವನಿತಾ ಕ್ರಿಕೆಟ್ ತಂಡ ಪಾಕಿಸ್ತಾನವನ್ನು 88 ರನ್ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಗೆಲುವಿನ ಓಟ ಮುಂದುವರಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ 247 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ
ಪಾಕ್ ತಂಡ 159 ರನ್ಗಳಿಗೆ ಆಲೌಟ್ ಆಲ್ ಔಟ್ ಆಯಿತು. ಇದು ಪಾಕಿಸ್ತಾನದ ವಿರುದ್ಧ ಭಾರತದ 12ನೇ ಸತತ ಗೆಲುವಾಗಿದ್ದು, ಟೂರ್ನಿಯಲ್ಲಿ ಭಾರತದ ಅಜೇಯ ಓಟವನ್ನು ಮುಂದುವರೆಸಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ನ ಆರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 247 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 43 ಓವರ್ಗಳಲ್ಲಿ ಕೇವಲ 159 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ಸತತ 2ನೇ ಸೋಲಿಗೆ ಕೊರಳೊಡ್ಡಿತು.
ಪಾಕ್ ಪರ ಸಿದ್ರಾ ಅಮೀನ್ 81 ರನ್ ಬಾರಿಸಿದರೆ, ನತಾಲಿಯಾ ಪರ್ವೇಝ್ 33 ರನ್ ಬಾರಿಸಿದರು. ಭಾರತದ ಪರ ಕ್ರಾಂತಿ ಗೌಡ್ ಹಾಗೂ ದೀಪ್ತಿ ಶರ್ಮ ತಲಾ 3 ವಿಕೆಟ್ ಪಡೆದರು, ಸ್ನೇಹ ರಾಣ 2 ವಿಕೆಟ್ ಪಡೆದರು.
ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ರಾವಲ್ 31 ರನ್ (37 ಎಸೆತ), ಸ್ಮೃತಿ ಮಂದಾನ 23 ರನ್ (32 ಎಸೆತ) ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟ ಆಡಿದರು.ಹರ್ಲೀನ್ ಡಿಯೋಲ್ 46 ರನ್(65 ಎಸೆತ), ಜೆಮಿಮಾ ರಾಡ್ರಿಗಸ್ 32 ರನ್(37 ಎಸೆತ) ಹಾಗೂ ರಿಚಾ ಘೋಷ್ 35 ರನ್(20 ಎಸೆತ) ತಂಡದ ಮೊತ್ತವನ್ನು ಹಿಗ್ಗಿಸಿದರು.ಪಾಕ್ ಪರ ಡಯಾನಾ ಬೇಗ್ 4 ವಿಕೆಟ್, ನಾಯಕಿ ಫಾತಿಮಾ ಸನಾ ಹಾಗೂ ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಪಡೆದರು.















