ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದೆ. ಹೊಸ ಸಂಸತ್ ಕಟ್ಟಡದಲ್ಲಿ ಮೊದಲ ಮಸೂದೆಯಾಗಿ ಮಂಡನೆಯಾಗಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಸೂದೆ ಮಂಡಿಸಿದರು. ಮಸೂದೆಗೆ
‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂದು ಹೆಸರಿಡಲಾಗಿದೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟ ಸೋಮವಾರ ಮಸೂದೆಗೆ ಅನುಮೋದನೆ ನೀಡಿದೆ. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಭಾಗಿಯಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದುಹೇಳಿದರು.
15 ವರ್ಷಗಳ ಅವಧಿಗೆ ಮಹಿಳಾ ಮೀಸಲಾತಿಯನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ, ಎಸ್ಸಿ/ಎಸ್ಟಿ ಮೀಸಲಾತಿ ಸಹ ಇರಲಿದೆ. ಕ್ಷೇತ್ರವಾರು ಮಹಿಳಾ ಮೀಸಲಾತಿ ವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕವೇ ಕಾನೂನು ಜಾರಿಗೆ ಬರಲಿದೆ. ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಣನೀಯ ಪ್ರಮಾಣದಲ್ಲಿದೆ. ಆದರೆ, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆ ಇದೆ ಎಂದು ಸರ್ಕಾರ ಹೇಳಿದೆ.
ಲೋಕಸಭೆಯಲ್ಲಿ ಮಹಿಳಾ ಸಂಸದರ ಸಂಖ್ಯೆ ಶೇ 15ರಷ್ಟಿದ್ದು, ವಿಧಾನಸಭೆಗಳಲ್ಲಿ ಮಹಿಳಾ ಶಾಸಕರ ಸಂಖ್ಯೆ ಶೇ 10ಕ್ಕಿಂತ ಕಡಿಮೆ ಇದೆ.