ಸುಳ್ಯ:ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ, ಸರಕಾರ ಅನುದಾನ ಕೊಡುತ್ತಿಲ್ಲ ಎಂದು ನಗರ ಪಂಚಾಯತ್ ಆಡಳಿತದ ಬಿಜೆಪಿ ಸದಸ್ಯರು ಹಾಗೂ ಶಾಸಕರು ವಿಶೇಷ ಅನುದಾನ ತರಿಸಲಿ ಎಂದು ಆಡಳಿತ ಕಾಂಗ್ರೆಸ್ ಸದಸ್ಯರು ಪರಸ್ಪರ ವಾಗ್ಯುದ್ಧ ನಡೆಸಿದ ಘಟನೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಹಳೆಗೇಟು- ಜಯನಗರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು
ಸಂಚಾರಕ್ಕೆ ಅಯೋಗ್ಯವಾಗಿದೆ. ಆದುದರಿಂದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಸದಸ್ಯೆ ಶಿಲ್ಪಾ ಸುದೇವ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕರಿಂದ ಅನುದಾನ ಕೇಳಿ ಎಂದು ವಿಪಕ್ಷ ಸದಸ್ಯರು ಹೇಳಿದರು. ಶಾಸಕರಲ್ಲಿ ಕೇಳಿದ್ದೇವೆ, ಅವರು ಕೊಡಲು ಒಪ್ಪಿದ್ದಾರೆ,ಆದರೆ ಶಾಸಕರಿಗೆ ಸರಕಾರದಿಂದ ಅನುದಾನ ಬರುತ್ತಿಲ್ಲ ಎಂದು ಶಿಲ್ಪಾ ಹೇಳಿದರು. ಸುಳ್ಯ ಶಾಸಕರು ಮಾತ್ರ ಯಾಕೆ ಅನುದಾನ ತರಿಸುತ್ತಿಲ್ಲ, ಪುತ್ತೂರಿಗೆ ಅನುದಾನ ಬರುತ್ತದೆ. ಶಾಸಕರು ವಿಶೇಷ ಅನುದಾನ ತರಿಸಲಿ ಎಂದು ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ ಹೇಳಿದರು. ಸರಕಾರ ವಿಶೇಷ ಅನುದಾನ ಬಿಡಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನ ಎರಡು ಕೋಟಿಯೇ ಬರುತ್ತಿಲ್ಲ, ಕೇವಲ 50 ಲಕ್ಷ ಮಾತ್ರ ಬಂದಿದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ಈ ವಿಷಯದಲ್ಲಿ ಆಡಳಿತ, ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ಯುದ್ಧವೇ ನಡೆಯಿತು. ಶಾಸಕರು ಅನುದಾನ ತರಿಸುತ್ತಿಲ್ಲ ಎಂಬ ವಿಪಕ್ಷ ಸದಸ್ಯರ ಹಾಗೂ ಸರಕಾರ ಅನುದಾನ ನೀಡುತ್ತಿಲ್ಲ ಎಂಬ ಆಡಳಿತ ಸದಸ್ಯರ ಮಧ್ಯೆ ನಡೆದ ಚರ್ಚೆ ಹಲವು ಹೊತ್ತು ಸಭೆಯನ್ನು ಗದ್ದಲದ ಗೂಡಾಗಿಸಿತು. ಬಿಜೆಪಿ ಸದಸ್ಯರಾದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ವಿನಯಕುಮಾರ್ ಕಂದಡ್ಕ, ಶಿಲ್ಪಾ ಸುದೇವ್, ಸುಧಾಕರ, ಬಾಲಕೃಷ್ಣ ರೈ, ಪ್ರವಿತಾ ಪ್ರಶಾಂತ್, ಶೀಲಾ ಅರುಣ ಕುರುಂಜಿ, ಹಾಗೂ ವಿಪಕ್ಷ ಸದಸ್ಯರಾದ ವೆಂಕಪ್ಪ ಗೌಡ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ರಾಜು ಪಂಡಿತ್ ಮಧ್ಯೆ ಹಲವು ಹೊತ್ತು ಚರ್ಚೆ, ಪರಸ್ಪರ ವಾಗ್ಯುದ್ಧ ಮುಂದುವರಿಯಿತು.ಈ ಮಧ್ಯೆ ನಾಮ ನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ ಹಾಗೂ
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಮಧ್ಯೆ ಮತ್ತು ಸಿದ್ದಿಕ್ ಹಾಗೂ ವಿನಯ ಕಂದಡ್ಕ ಮಧ್ಯೆ ಹಲವು ಹೊತ್ತು ಕಾವೇರಿದ ಚರ್ಚೆ ನಡೆಯಿತು. ನಾಮನಿರ್ದೇಶಿತ ಸದಸ್ಯರು ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಅಧ್ಯಕ್ಷರು ಹೇಳಿದರು, ಶಾಸಕರ ಬಗ್ಗೆಗಿನ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ವಿನಯಕುಮಾರ್ ಕಂದಡ್ಕ ಒತ್ತಾಯಿಸಿದರು. ಶಾಸಕರು ವಿಶೇಷ ಅನುದಾನ ತರಿಸಲಿ ಎಂಬುದಷ್ಟೇ ನಮ್ಮ ಒತ್ತಾಯ, ಪುತ್ತೂರು ಶಾಸಕರು ವಿಶೇಷ ಅನುದಾನ ತರಿಸಿದ್ದಾರೆ ಅದರಂತೆ ಸುಳ್ಯ ಶಾಸಕರು ವಿಶೇಷ ಅನುದಾನ ತರಿಸಲಿ ಎಂದು ಸಿದ್ದಿಕ್ ಹೇಳಿದರು. ಬಳಿಕ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್ ಸದಸ್ಯರನ್ನು ಸಮಾಧಾನ ಪಡಿಸಿದರು.
ಈ ಮಧ್ಯೆ ಪುರಭವನದ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿದ್ದಂತೆ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಹಾಗೂ ಎಂ.ವೆಂಕಪ್ಪ ಗೌಡರ ಮಧ್ಯೆ ಕೆಲ ಹೊತ್ತು ಚರ್ಚೆ ನಡೆಯಿತು. ರಿಯಾಝ್ ಮತ್ತು ಇತರ ಸದಸ್ಯರ ಮಧ್ಯೆ ಬಿರುಸಿನ ಚರ್ಚೆ ನಡೆಯುತ್ತಿದ್ದಂತೆ ರಿಯಾಝ್ ಅಸಮಾಧನಗೊಂಡು ಸಭೆಯಿಂದ ಹೊರ ನಡೆದ ಘಟನೆಯೂ ನಡೆಯಿತು.
ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ನಗರದಲ್ಲಿ ವಿವಿಧ ಕಡೆ 5 ಕಡೆ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಯಿತು. ನಗರ ಪಂಚಾಯತ್ನಲ್ಲಿ ಸದಸ್ಯರ ಗಮನಕ್ಕೆ ತಾರದೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದುರು. ಸದಸ್ಯರ ಗಮನಕ್ಕೆ ತಾರದೆ, ನಿರ್ಣಯ ಕೈಗೊಳ್ಳದೆ ಕಸ ವಿಲೇವಾರಿ ವಾಹನ ದುರಸ್ತಿಗೆ ಕಳುಹಿಸಿದ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಈ ಬಗ್ಗೆ ಬಹಳ ಹೊತ್ತು ಚರ್ಚೆ ನಡೆಯಿತು.
ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಉಪಸ್ಥಿತರಿದ್ದರು.