ಸುಳ್ಯ: ಸುಳ್ಯ ನಗರ ಪಂಚಾಯತ್ನ 2025-26ನೇ ಸಾಲಿನ ಬಜೆಟ್ ಫೆ.5 ರಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮಂಡಿಸಿದರು. 3.07.ಕೋಟಿ ಮಿಗತೆ ಬಜೆಟನ್ನು ಅವರು ಮಂಡಿಸಿದರು. ಈ ಸಂದರ್ಭದಲ್ಲಿ 20 ವಾರ್ಡ್ಗಳಿಗೆ ತಲಾ 10 ಲಕ್ಷ ರೂಗಳ ಅಭಿವೃದ್ಧಿ ಅನುದಾನವನ್ನು ಅಧ್ಯಕ್ಷರು ಘೋಷಿಸಿದರು. 4.40 ಕೋಟಿ ಆರಂಭಿಕ ಶಿಲ್ಕು ಇದ್ದು 10.02 ಕೋಟಿ ಆದಾಯ ನಿರೀಕ್ಷಿಸಲಾಗುತ್ತಿದ್ದು, 11.36 ಕೋಟಿ ಖರ್ಚು ನಿರೀಕ್ಷಿಸಲಾಗುತಿದೆ. ಆರಂಭಿಕ ಶಿಲ್ಕು ಸೇರಿ ಒಟ್ಟು
14.43 ಕೋಟಿ ಒಟ್ಟು ಆದಾಯ ಬರಲಿದ್ದು 11.36 ಕೋಟಿ ಖರ್ಚು ಕಳೆದು 3.07 ಕೋಟಿ ಉಳಿಕೆಯಾಗಲಿದೆ ಎಂದು ಬಜೆಟ್ ಅಂದಾಜಿಸಲಾಗಿದೆ. ಬಳಿಕ ಬಜೆಟ್ ಮೇಲೆ ಚರ್ಚೆ ನಡೆಯಿತು. ಅಭಿವೃದ್ಧಿಗೆ ಅನುದಾನ ಇಲ್ಲಾ ಎಂದು ವಿರೋಧ ಪಕ್ಷದ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಬಾಲಕೃಷ್ಣ ಭಟ್, ರಾಜು ಪಂಡಿತ್ ಮತ್ತಿತರರು ತಕರಾರು ಎತ್ತಿದರು. ಕೆ.ಎಸ್.ಉಮ್ಮರ್ ಮಾತನಾಡಿ ಹಿಂದಿನ ಅವಧಿಯಲ್ಲಿ ಅಭಿವೃದ್ಧಿಗೆ ಅನುದಾನ ಇತ್ತು ಅದರೆ ಈ ಬಾರಿಯ

ಬಜೆಟ್ನಲ್ಲಿ ಯಾವುದೇ ಅಭಿವೃದ್ಧಿಗೆ ಆದ್ಯತೆ ಇಲ್ಲಾ. ಕೇವಲ ಮಾಮೂಲಿ ಖರ್ಚುಗಳೇ ಅಧಿಕ ಆಗಿದೆ ಎಂದು ಹೇಳಿದರು. ಬಳಿಕ ಚರ್ಚೆ ನಡೆದು ಕೆಲವೊಂದು ಪ್ರಸ್ತಾವಿತ ಖರ್ಚುಗಳನ್ನು ಪರಿಷ್ಕರಿಸಲಾಯಿತು. ಬಳಿಕ ಪ್ರತಿ ವಾರ್ಡ್ಗೆ ತುರ್ತು ಅಭಿವೃದ್ಧಿ ಕಾಮಗಾರಿ ನಡೆಸಲು 10 ಲಕ್ಷ ಅನುದಾನವನ್ನು ಮೀಸಲಿರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಸಿಬ್ಬಂದಿಗಳ ಪ್ರಯಾಣ ವೆಚ್ಚ, ಸಾಮಾನ್ಯ ವೆಚ್ಚಗಳು, ಕಟ್ಟಡಗಳ ದುರಸ್ತಿ, ನಿರ್ವಹಣೆ ವೆಚ್ಚ, ಕಚೇರಿ ಉಪಕರಣಗಳ ದುರಸ್ತಿ, ನಿರ್ವಹಣೆ, ದೇಣಿಗೆ, ಸಹಾಯಧನ, ನೀರು ಪೈಪ್ ಲೈನ್, ವಿಸ್ತರಣೆ ಪಂಪುಗಳ ಖರೀದಿ, ಘನ ತ್ಯಾಜ್ಯ ವಿಲೇವಾರಿ ಯಂತ್ರೋಪಕರಣ ಖರೀದಿ ಖರ್ಚುಗಳನ್ನು ಕಡಿತ ಮಾಡಿ, ರಸ್ತೆ ದುರಸ್ತಿ ಮತ್ತು ಕಾಂಕ್ರೀಟೀಕರಣ ಅನುದಾನ ಹೆಚ್ಚಿಸಿವುದು ಸೇರಿ ಕೆಲವೊಂದು ಪರಿಷ್ಕರಣೆ ಮಾಡಲಾಯಿತು.
ಕಸ ವಿಲೇವಾರಿ ಗಂಭೀರ ಚರ್ಚೆ:
ತ್ಯಾಜ್ಯ ವಿಲೇವಾರಿ ಖರ್ಚು ಹೆಚ್ಚುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಖರ್ಚು ಅಧಿಕ ಆದರೂ ನಗರದಲ್ಲಿ ಕಸ ಹೆಚ್ಚಾಗುತ್ತಿದೆ. ಸ್ವಚ್ಚತೆ ಮಾಡುವುದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು ಎಂದು ಸದಸ್ಯ ಶರೀಫ್ ಕಂಠಿ ಹೇಳಿದರು. ಹೋಟೆಲ್ಗಳಿಂದ ಪ್ಲಾಸ್ಟಿಕ್ಗಳಲ್ಲಿ ಪಾರ್ಸೆಲ್ ಸರಬರಾಜು ಮಾಡಿ ಆ ಪ್ಲಾಸ್ಟಿಕ್ ಸಿಕ್ಕಿ ಸಿಕ್ಕಿದ ಕಡೆ ಎಸೆಯುವುದರಿಂದ ದೊಡ್ಡ ಸಮಸ್ಯೆಯಾಗುತಿದೆ ಎಂದು ಸದಸ್ಯ ವಿನಯಕುಮಾರ್ ಕಂದಡ್ಕ ಹೇಳಿದರು.ಪ್ಲಾಸ್ಟಿಕ್ ನಿರ್ಮೂಲನೆಗೆ ಕಾನೂನು ಕ್ರಮ ಮತ್ತು ಜನ ಜಾಗೃತಿ ಮಾಡಬೇಕಾಗಿದೆ ಎಂದು ಹೇಳಿದರು. ಪ್ಲಾಸ್ಟಿಕ್ ನಿಷೇಧ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ತಿಂಡಿ, ತಿನಿಸುಗಳ ಪ್ಯಾಕೇಟ್, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚಗಳು ತೀವ್ರ ಸಮಸ್ಯೆಯಾಗುತಿದೆ ಎಂದು ಸದಸ್ಯರು ಹೇಳಿದರು. ಮುಂದಿನ ಎರಡು ತಿಂಗಳ ಕಾಲ ಜನಜಾಗೃತಿ ಮೂಡಿಸಿ ಏಪ್ರಿಲ್ ಒಂದರಿಂದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.