ನವದೆಹಲಿ:18ನೇ ಬ್ರಿಕ್ಸ್ ಶೃಂಗಸಭೆ ಇಂದಿನಿಂದ ಎರಡು ದಿನಗಳ ಕಾಲ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಪ್ರಗತಿಯ ವಿಶ್ಲೇಷಣೆ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಭವಿಷ್ಯದ ಕಾರ್ಯಸೂಚಿಗಳಿಗೆ ಅನುಮೋದನೆ ನೀಡಲು ಬ್ರಿಕ್ಸ್ ರಾಷ್ಟ್ರಗಳ
ನಾಯಕರು ‘ಭಾರತ ಮಂಟಪ’ದಲ್ಲಿ ಸೇರಲಿದ್ದಾರೆ.ಶನಿವಾರ ಮಧ್ಯಾಹ್ನ 2.35ಕ್ಕೆ ಶೃಂಗಸಭೆ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಎರಡು ದಿನ ನಡೆಯಲಿರುವ ಶೃಂಗಸಭೆಯಲ್ಲಿ, ಜಾಗತಿಕ ಸಮಸ್ಯೆಗಳು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕತೆಗಳನ್ನು ರಕ್ಷಿಸುವುದು ಸೇರಿದಂತೆ ಹಲವು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಜಾಗತಿಕ ನಾಯಕರ ನಡುವೆ ಗಂಭೀರ ಚರ್ಚೆಯಾಗುವ ನಿರೀಕ್ಷೆಯಿದೆ.ಸಂಘರ್ಷಗಳಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ
ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಪಾರು ಮಾಡಲು ಆಹಾರ, ಇಂಧನ ಮತ್ತು ಪೂರೈಕೆ ಸರಪಳಿ ಭದ್ರತೆಯಂತಹ ಜಾಗತಿಕ ವಿವಾದಗಳಿಗೆ ಕಾರ್ಯಸಾಧ್ಯ ಪರಿಹಾರಗಳನ್ನು ಹುಡುಕಲು ಭಾರತ ಪ್ರಯತ್ನಿಸಲಿದೆ. ಪ್ರಾದೇಶಿಕ ವಿಷಯಗಳಿಗೂ ಸಮಾನ ಆದ್ಯತೆ ನೀಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ಅಮೆರಿಕ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಮತ್ತು ಇತರ ದೇಶಗಳೊಂದಿಗಿನ ಪಾಲುದಾರಿಕೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಈ ಶೃಂಗಸಭೆಯು ಭಾರತಕ್ಕೆ ಅವಕಾಶ ಒದಗಿಸಿದೆ.











