ನವದೆಹಲಿ: ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿದ್ದ ದೇಶವ್ಯಾಪಿ ಮೂರು ದಿನಗಳ ಮುಷ್ಕರವನ್ನು ಮುಂದೂಡಲಾಗಿದೆ.ವಾರದಲ್ಲಿ ಐದು ದಿನಗಳ ಕೆಲಸದ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ‘ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್’ (ಐಬಿಎ) ಜೊತೆ ನಡೆದ ಚರ್ಚೆಯಲ್ಲಿ ದೊರೆತ ಭರವಸೆಯ ಮೇರೆಗೆ ಮುಷ್ಕರ ಮುಂದೂಡಲಾಗಿದೆ. ಬ್ಯಾಂಕ್ಗಳು
ಸೋಮವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.ದೇಶದಾದ್ಯಂತ ಸೋಮವಾರದಿಂದ ಮೂರು ದಿನಗಳ ಮುಷ್ಕರಕ್ಕೆ ‘ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ’ (ಯುಎಫ್ಬಿಯು)ಈ ಹಿಂದೆ ಕರೆ ನೀಡಿತ್ತು.
ಉಳಿದ ಶನಿವಾರಗಳನ್ನು ರಜಾದಿನಗಳು ಎಂದು ಘೋಷಿಸುವ ಕುರಿತು ಚರ್ಚಿಸಲು ಐಬಿಎ ಮತ್ತು ಯುಎಫ್ಬಿಯು ಜಂಟಿ ಯಾಗಿ ತಕ್ಷಣವೇ ಉನ್ನತ ಮಟ್ಟದ ಸಮಿತಿ ರಚಿಸಲಿವೆ. ಈ ಸಮಿತಿ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿ, ಸಂಬಂಧಿಸಿದವರ ಜತೆ ಚರ್ಚಿಸಲಿದೆ. ಅಲ್ಲದೆ ಗ್ರಾಹಕರಿಗೆ ಸ್ವೀಕಾರಾರ್ಹವಾದ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಯುಎಫ್ಬಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕನೇ ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯವಾಗುವ ಪಿಎಲ್ಐ ಯೋಜನೆಯಲ್ಲಿ ಬದಲಾವಣೆ ತರುವ ಕುರಿತು ಐಬಿಎ ಜತೆ ಚರ್ಚಿಸಲಾಗುವುದು. ನಂತರ ಈ ಕುರಿತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಇತರ ವಿಷಯಗಳನ್ನು ಎಂದು ಪ್ರಕಟಣೆ ಹೇಳಿದೆ.








