ನವದೆಹಲಿ: ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳ ಗ್ರಾಹಕರು ಇನ್ನು ಮುಂದೆ ಒಂದು ಸಿಲಿಂಡರ್ ಖರೀದಿಸಿದ 25 ದಿನಗಳ ನಂತರ ಬುಕ್ಕಿಂಗ್ ಮಾಡಿ ಸಿಲಿಂಡರ್ ಪಡೆಯಬಹುದು.ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಮರುಪೂರಣ (ರಿಫಿಲ್) ಅವಧಿಯನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಒಂದೇ ರೀತಿ ನಿಗದಿಪಡಿಸಲಾಗಿದೆ.ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಪಿಜಿ ಪೂರೈಕೆಯಲ್ಲಿ
ವ್ಯತ್ಯಯ ಉಂಟಾದ ಕಾರಣ, ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಖರೀದಿಸಿದ 25 ದಿನಗಳ ನಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ನಂತರ ಮತ್ತೊಂದು ಸಿಲಿಂಡರ್ ಪಡೆಯುವಂತೆ ನಿಯಮ ಜಾರಿಗೊಳಿಸಲಾಗಿತ್ತು. ಇದೀಗ ಎಲ್ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸಿದ್ದು, ಕೇಂದ್ರ ಸರ್ಕಾರ ನಿರ್ಬಂಧವನ್ನು ಸಡಿಲಿಸಿದೆ.ಗ್ರಾಮೀಣ ಹಾಗು ನಗರ ಪ್ರದೇಶಕ್ಕೆ ಒಂದೇ ರೀತಿ ಬುಕ್ಕಿಂಗ್ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ವ್ಯಾಪಕವಾಗಿ ಕೇಳಿ ಬಂದಿತ್ತು.
ಇನ್ನು ನಗರ–ಗ್ರಾಮೀಣ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ದೇಶದ ಎಲ್ಲ ಗೃಹಬಳಕೆಯ ಎಲ್ಪಿಜಿ ಗ್ರಾಹಕರು 25 ದಿನಗಳ ಅಂತರದಲ್ಲಿ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಚನೆ ನೀಡಿದೆ.ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ ಕಳುಹಿಸಿರುವ ಪತ್ರದ ಪ್ರತಿಯನ್ನೂ ಕೇಂದ್ರ ಸಚಿವ ಸುರೇಶ್ಗೋಪಿ ಸಾಮಾಜಿಕ ಜಾಲತಾಣ ಫೇಸ್ಬುಕ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.










