ನವದೆಹಲಿ:ಜಗತ್ತು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದು ಇದನ್ನು ಎದುರಿಸುವ ನಿಟ್ಟಿನಲ್ಲಿ ಬ್ರಿಕ್ಸ್ ದೇಶಗಳು ನಿಯಮ ರೂಪಿಸುವ ಶಕ್ತಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ,ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ ವಿಶಿಷ್ಟ ಗುರುತನ್ನು ಹೊಂದಿದೆ. ಈ ಗುಂಪು ಯಾರ
ವಿರುದ್ಧವೂ ಅಲ್ಲ, ಇಂದು ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಬ್ರಿಕ್ಸ್ ದೇಶಗಳು ಮುಂದಿನ ಸಾಲಿನಲ್ಲಿ ನಿಂತಿವೆ.ಜಾಗತಿಕ ಆಡಳಿತ ಸುಧಾರಣೆಗಾಗಿ ನಾವು ಜಂಟಿಯಾಗಿ 10 ಪ್ರಸ್ತಾವನೆಗಳನ್ನು ರೂಪಿಸಬೇಕು. ಮುಂದಿನ ಸಮ್ಮೇಳನದ ವೇಳೆಗೆ ಅವುಗಳನ್ನು ‘ಬ್ರಿಕ್ಸ್ ಸುಧಾರಣಾ ಮಾರ್ಗಸೂಚಿ’ಯಾಗಿ ರೂಪಿಸುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಮಲೇಷಿಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸಬೇಕು ಎಂಬ ಭಾರತದ ನಿಲುವಿಗೆ ಬ್ರಿಕ್ಸ್ ಸಂಪೂರ್ಣ ಬೆಂಬಲ ನೀಡಿದೆ. ಭಯೋತ್ಪಾದನೆ ಎದುರಿಸುವಲ್ಲಿ ದ್ವಂದ್ವ ನೀತಿಗೆ ಅವಕಾಶ ಇರಬಾರದು ಎಂದು ನಾಯಕರು ಒತ್ತಿ ಹೇಳಿದ್ದಾರೆ. ಜೊತೆಗೆ, ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅವುಗಳಿಗೆ ಸಂಬಂಧಿಸಿದ ನಿಯಮ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ(ಗ್ಲೋಬಲ್ ಸೌತ್) ಸಮಾನ ಅವಕಾಶ ದೊರೆಯಬೇಕು ಎಂದು ಪ್ರತಿಪಾದಿಸಲಾಗಿದೆ.











