ಮಂಗಳೂರು:ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಹಾಗೂ ಶ್ರೀ ಶ್ರೀ ರವಿಶಂಕರ ಗುರುಜಿಯವರ 70ನೇ ವರ್ಷದ ಜನ್ಮೋತ್ಸವದ ಅಂಗವಾಗಿ ನೀಡಿದ ತೆರೆಯಮರೆಯ ಸಾಧಕ ಪ್ರಶಸ್ತಿಗೆ ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಹಾಗು ಸಂವರ್ಧನಾ ಸಂಘಟಕರಾದ ಮುರುಳ್ಯದ ಅಕ್ಷಯ್ ಆಳ್ವ ಅವರು ಆಯ್ಕೆಯಾಗಿದ್ದಾರೆ. ಮಂಗಳೂರಿನ
ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾಜಸೇವೆ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಇತರ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿ, ಪ್ರಚಾರದ ಬೆಳಕಿನಿಂದ ದೂರ ಉಳಿದಿರುವ ಸಾಧಕರನ್ನು ಗುರುತಿಸಿ “ತೆರೆಯಮರೆಯ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ಅಕ್ಷಯ್ ಆಳ್ವ (ಮುರುಳ್ಯ), ಮುರಳೀಧರ ಪ್ರಭು (ಕುಮಟಾ), ದಯಾನಂದ (ಮಂಗಳೂರು),ರಾಜಶ್ರೀ ಹಾಗೂ ವಿನಯಚಂದ್ರ (ಕುಂದಾಪುರ) ಅವರು ಈ ವರ್ಷದ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಆರ್ಟ್ ಆಫ್ ಲಿವಿಂಗ್ನ ಅಪೆಕ್ಸ್ ಸದಸ್ಯರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ನರಸಿಂಹ ಪಂಡಿತ್, ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಡಿ. ಕುಲಕರ್ಣಿ, ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಪ್ರಾಂಶುಪಾಲರಾದ ಸುರೇಶ್ ಜೀ,ಅಪೆಕ್ಸ್ ಸದಸ್ಯರಾದ ಡಾ. ರಮಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.














