*ಗಣೇಶ್ ಮಾವಂಜಿ.
ಯಾರದೋ ಚಂದದ ಹೆಸರಿನ ಬದಲಾಗಿ ಅವರನ್ನು ಅಡ್ಡನಾಮದಿಂದ ಕರೆದಾಗ ಕೊನೆಗೆ ಅದೇ ಹೆಸರೇ ಮಾಮೂಲಾಗಿ ಬಿಡುತ್ತದೆ. ಶಾಲಾ-ಕಾಲೇಜುಗಳಲ್ಲಾಗಲೀ, ವೃತ್ತಿ ಕ್ಷೇತ್ರದಲ್ಲೇ ಆಗಲಿ, ಒಂದರ್ಧ ಗಂಟೆ ಬಸ್ ಕಾಯುವ ನೆಪದಲ್ಲಿ ಬಸ್ ನಿಲ್ದಾಣದಲ್ಲಿ ಬಂದು ಸೇರಿದವರಲ್ಲಾಗಲೀ…,ಈ ಅಡ್ಡ ಹೆಸರು ವಕ್ಕರಿಸಿಬಿಡುತ್ತದೆ. ಹೆಚ್ಚು ಉದ್ದದವರಾದರೆ ‘ಲಂಬು’ ಎಂದೋ, ಗಾತ್ರದಲ್ಲಿ ಚಿಕ್ಕವರಾದರೆ ‘ಕುಳ್ಳ’ ನೆಂದೋ, ಉಬ್ಬು ಹಲ್ಲಿನವರಾದರೆ ‘ಗೊಗ್ಗರೆ’ ಎಂದೋ, ಸಣಕಲು ಶರೀರದವರಾದರೆ ‘ಕಡ್ಡಿ’ ಎಂದೋ, ಹೆಚ್ಚು ದಪ್ಪದವರಾದರೆ ‘ಭೀಮ’ ನೆಂದೋ, ತುಂಬಾ
ಬಿಳಿಯಾಗಿದ್ದರೆ ‘ಬಿಳಿ ಜಿರಳೆ’, ಕಪ್ಪಗಿದ್ದರೆ ‘ಕರಿಯ’ ಎಂದೋ…, ಬೋಳು ತಲೆಯವರಾದರೆ ‘ಚಾಣೆ’ ಎಂದೋ, ಮೈ ತುಂಬಾ ರೋಮ ಹೊಂದಿದ್ದರೆ ‘ ಕರಡಿ ಎಂದೋ.. ಹೀಗೆ ನಾನಾ ಬಗೆಯ ಅಡ್ಡ ಹೆಸರುಗಳು ಇಡಲ್ಪಡುತ್ತವೆ. ಕೆಲವೊಮ್ಮೆ ಈ ಅಡ್ಡ ಹೆಸರುಗಳ ಪ್ರಭಾವ ಎಷ್ಟಿದೆ ಎಂದರೆ ತೀರಾ ಹತ್ತಿರದವರ ಹೊರತಾಗಿ ಅವರ ನಿಜ ನಾಮಧೇಯ ಹೆಚ್ಚಿನವರಿಗೆ ತಿಳಿದೇ ಇರುವುದಿಲ್ಲ.!
ಹೆಸರೆಂಬುದು ಕೇವಲ ವ್ಯಕ್ತಿಯನ್ನು ಕರೆಯಲು, ಗುರುತಿಸಲೆಂದು ಇರುವ ಒಂದು ಅಗೋಚರ ಸಾಧನವೇ ಹೊರತು ಅದರಲ್ಲಿ ಬೇರೇನೂ ವಿಶೇಷತೆ ಇರುವುದಿಲ್ಲ. ದೇವರ ಹೆಸರನ್ನು ಹೊಂದಿದ ಮಾತ್ರಕ್ಕೆ ಆತನಾಗಲೀ, ಆಕೆಯಾಗಲೀ ದೇವರಂತಾಗಲು ಸಾಧ್ಯವೇ ಇಲ್ಲ. ಆಯಾಯ ಪರಿಸರ, ಬೆಳೆದು ಬಂದ ರೀತಿ, ಉಪದೇಶಗಳ ತಿರುಳನ್ನರಿತು ಮುನ್ನಡೆಯುವ ಬೌದ್ಧಿಕತನ ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯ ಹೊಂದಲು ಸಹಾಯ ಮಾಡುತ್ತದೆ. ಹೆಸರಿಗೆ ತಕ್ಕಂತೆ ವ್ಯಕ್ತಿಯ ಗುಣಾವಗುಣಗಳು ಇರಲು ಸಾಧ್ಯವೇ ಇಲ್ಲ.
ಗುಣವಂತ ಎಂದು ಹೆಸರಿದ್ದ ವ್ಯಕ್ತಿ ಸದ್ಗುಣಗಳ ಪರಿಚಯವೇ ಇಲ್ಲದಂತೆ ವರ್ತಿಸಬಹುದು. ಜಯಶೀಲ ಎಂದು ಹೆಸರಿದ್ದ ವ್ಯಕ್ತಿಯೊಬ್ಬಳು ಕೈಗೊಂಡ ಕೆಲಸ ಯಾವುದೂ ಫಲಪ್ರದವಾಗದೇ ಹೋಗಬಹುದು. ನೀಲವೇಣಿ ಎಂಬಾಕೆಯ ತಲೆಯಲ್ಲಿ ಜುಟ್ಟು ಕಟ್ಟಲೂ ಸಾಧ್ಯವಾಗದಷ್ಟು ಕೂದಲಿನ ಅಭಾವ ಇರಲೂ ಬಹುದು. ಐಶ್ವರ್ಯ ಎಂದು ಹೆಸರಿದ್ದ ಮಾತ್ರಕ್ಕೆ ಆಕೆ ಮುಟ್ಟಿದೆಲ್ಲವೂ ಚಿನ್ನವಾಗುತ್ತದೆ ಎಂಬುದು ಕೇವಲ ಭ್ರಮೆಯಷ್ಟೇ.
ಹಾಗೆಂದು ಹೆಸರಿನ ವಿರುದ್ಧವೇ ಎಲ್ಲವೂ ಇರುತ್ತದೆ ಎಂಬುದನ್ನೂ

ಹೇಳಲಾಗದು. ನಿರ್ಮಲ ಎಂಬವಳ ಮನಸ್ಸು, ಯೋಚನೆ ಸದಾ ನಿರ್ಮಲವೇ ಇರಬಹುದು. ಸಂತೋಷ ಎಂಬ ಹೆಸರಿನ ವ್ಯಕ್ತಿ ತನ್ನ ಬುದ್ಧಿಮತ್ತೆ ಹಾಗೂ ಕಠಿಣ ಪರಿಶ್ರಮದ ಕಾರಣದಿಂದಾಗಿ ಜೀವನದಲ್ಲಿ ಸದಾ ಸಂತೋಷವನ್ನು ಹೊಂದಿರಲೂ ಸಾಧ್ಯವಾಗಬಹುದು. ಆದರೆ
ಹೆಸರಿಗೆ ಅನ್ವರ್ಥವಾಗಿ ಎಲ್ಲರೂ ಇರುತ್ತಾರೆ ಎಂಬುದು ನಿಜವಲ್ಲ.
ವ್ಯಕ್ತಿಯ ನಿಜವಾದ ಹೆಸರು ಹಾಗೂ ಆ ವ್ಯಕ್ತಿಗಿರುವ ಅಡ್ಡ ಹೆಸರಿನ ಪ್ರಮುಖ ವ್ಯತ್ಯಾಸ ಯಾವುದೆಂದರೆ ವ್ಯಕ್ತಿಯ ನಿಜವಾದ ಹೆಸರಿಗೆ ಅನ್ವರ್ಥವಾಗಿ ಆ ವ್ಯಕ್ತಿ ಇರಲೇಬೇಕೆಂದಿಲ್ಲ. ಆದರೆ ಆ ವ್ಯಕ್ತಿಯ ಅಡ್ಡ ಹೆಸರು ತಮಾಷೆಯಾಗಿ ಇರಿಸಿದರೂ ಆ ಅಡ್ಡ ಹೆಸರಿಗೆ ಅನ್ವರ್ಥವಾಗಿ ಆತ ತುಸುವಾದರೂ ಇರುತ್ತಾನೆ ಎಂಬುದು ಮಾತ್ರ ಸತ್ಯ. ಇದು ನಿಜವಾದ ಹೆಸರು ಹಾಗೂ ಅಡ್ಡ ಹೆಸರಿಗೆ ಇರುವ ವ್ಯತ್ಯಾಸ. ಆರಂಭದಲ್ಲಿ ತಿಳಿಸಿದಂತೆ ಉದ್ದವಾಗಿರುವ ವ್ಯಕ್ತಿಯನ್ನು ‘ಲಂಬು’ ಎಂಬುದಾಗಿ ಕರೆದರೆ ಆತ ಲಂಬವಾಗಿ ಉದ್ದವಾಗಿ ಕಾಣಿಸುತ್ತಾನೆ ಎಂದೇ ಅರ್ಥ. ಸಣಕಲು ಶರೀರದವರನ್ನು ‘ಕಡ್ಡಿ’ ಎಂದು ಅಡ್ಡ ಹೆಸರಿಟ್ಟು ಕರೆದರೆ ಆತ ಕಡ್ಡಿಯಂತೆ ಸಪೂರವಾಗಿ ಇದ್ದಾನೆ ಎಂದು ಅರ್ಥೈಸಿಕೊಳ್ಳಬಹುದು.
ವ್ಯಕ್ತಿಯ ಅಡ್ಡ ಹೆಸರಿನಂತೆ ಸ್ಥಳ ನಾಮಧೇಯಗಳೂ ಕೂಡಾ ಇರಿಸಲ್ಪಟ್ಟಿರುವುದು ಆಯಾಯ ಸ್ಥಳಗಳ ಭೌತಿಕ ಸ್ಥಿತಿಗತಿಯನ್ನು ಅವಲೋಕಿಸಿಯೇ ಎಂಬುದು ವೇದ್ಯವಾಗುತ್ತದೆ. ಹೊಯ್ಸಳ ರಾಜ ದಾರಿ ತಪ್ಪಿ ಹೋದಾಗ ವೃದ್ಧೆಯೊಬ್ಬಳು ಬೆಂದ ಕಾಳನ್ನು ಆತನಿಗೆ ನೀಡಿದ ಪರಿಣಾಮವಾಗಿ ‘ಬೆಂದ ಕಾಳು ಊರು’ ಎಂಬುದಾಗಿ ಆ ಊರಿಗೆ ಹೆಸರಾಯಿತು. ಕ್ರಮೇಣ ಅದೇ ಬೆಂಗಳೂರು ಆಯಿತು ಎಂಬುದಾಗಿ ನಂಬಲಾಗುತ್ತದೆ. ಮಂಗಳಾದೇವಿ ದೇವಸ್ಥಾನದ ಕಾರಣಕ್ಕಾಗಿ ‘ಮಂಗಳೂರು’ ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಅಷ್ಟೇ ಏಕೆ? ಸುಳ್ಯ ಎಂಬ ಹೆಸರು ಬರಲು ಕಾರಣವನ್ನು ಹುಡುಕುತ್ತಾ ಹೊರಟರೆ ಸುಳಿಗಳಿಂದ ಅಥವಾ ತಿರುವುಮುರುವಾಗಿ ರಸ್ತೆಗಳು ಹಾಗೂ ನದಿಗಳು ಹರಿಯುವ ಕಾರಣಕ್ಕಾಗಿ ಸುಳ್ಯ ಎಂಬ ಹೆಸರು ಬಂತೆಂದು ನಂಬಲಾಗುತ್ತದೆ.
ಇತಿಹಾಸ ಕೆದಕಲು ಹೊರಟರೆ ಒಂದೇ ಸ್ಥಳಕ್ಕೆ ಬೇರೆಬೇರೆ ಕಾರಣಗಳಿಂದಾಗಿ ಆ ಹೆಸರು ಬಂದಿದೆ ಎನ್ನುವವರೂ ಇರಬಹುದು. ಆದರೆ ಆಯಾಯ ಸ್ಥಳಗಳಿಗೆ ಹೆಸರು ಬರಬೇಕೆಂದಿದ್ದರೆ ಆ ಸ್ಥಳದ ಭೌತಿಕ ವಿಷಯಗಳೇ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಊರೆಲ್ಲಾ ಸಣ್ಣಪುಟ್ಟ ಗುಡಿಸಲುಗಳೇ ತುಂಬಿದ್ದ ಆ ದಿನಗಳಲ್ಲಿ ಊರ ಕೊನೆಯಲ್ಲೊಂದು ದೊಡ್ಡ ಮನೆ ಇದ್ದರೆ ಅದು ‘ದೊಡ್ಡ ಮನೆ’ ಎಂಬುದಾಗಿ ಎಲ್ಲರಿಂದ ಕರೆಸಲ್ಪಡುತ್ತದೆ. ಇದೀಗ ಆ ದೊಡ್ಡ ಮನೆಯಿಂದ ಬಲು ದೊಡ್ಡದಾದ ಇನ್ನು ಹಲವು ಮನೆಗಳು ತಲೆ ಎತ್ತಿದರೂ ಅಂದು ಎಲ್ಲರಿಂದ ಕರೆಸಿಕೊಂಡ ‘ದೊಡ್ಡ ಮನೆ’ ಈಗಲೂ ಹಾಗೆಯೇ ಕರೆಸಿಕೊಳ್ಳುತ್ತಿದೆ. ಮನೆಯ ಮಾಡಿಗೆ ಹುಲ್ಲೇ ಹೊದಿಕೆಯಾಗುತ್ತಿದ್ದ ಅಂದಿನ ಕಾಲದಲ್ಲಿ ದುಡ್ಡಿದ್ದ ಕುಟುಂಬವೊಂದು ಮಾಡಿಗೆ ಹಂಚು ಹಾಕಿ ಇತರ ಮನೆಗಳಿಂದ ಭಿನ್ನವಾಗಿ ಕಂಡರೆ ಎಲ್ಲರ ಬಾಯಿಯಿಂದ ಆ ಮನೆ ‘ಹಂಚಿನ ಮನೆ’ ಯಾಗಿ ಕರೆಸಿಕೊಂಡಿತು.
ಕೊನೆಗೆ ಅದೇ ಹೆಸರು ಇಂದಿಗೂ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು. ತೋಟದ ಕೊನೆಯಲ್ಲಿದ್ದ ಮನೆ ‘ತೋಟದಮೂಲೆ’, ಬೃಹದಾಕಾರವಾದ ಕಲ್ಲು ಇದ್ದ ಜಾಗಕ್ಕೆ ‘ಆನೆಕಲ್ಲು’.., ಹೀಗೆ ಹೆಸರುಗಳು ಆಯಾಯ ಭೌಗೋಳಿಕ ಪರಿಸ್ಥಿತಿಗೆ ಇಡಲ್ಪಡುತ್ತದೆ. ಊರಿಗೊಂದು ಹೊಸ ಕುಟುಂಬ ಅದೆಲ್ಲಿಂದಲೋ ಒಕ್ಕಲು ಬಂದು ವಾಸ್ತವ್ಯವಾದರೆ ಆ ಕುಟುಂಬಕ್ಕೆ ‘ಹೊಸೊಕ್ಲು’ ಎಂದೇ ನಾಮಕರಣವಾಗಿಬಿಡುತ್ತದೆ. ಹೊಸೊಕ್ಲು ಹಳೆಯದಾಗಿ ನೂರೈವತ್ತು, ಇನ್ನೂರು ವರ್ಷಗಳು ಕಳೆದರೂ ಅಂದು ಇರಿಸಿದ್ದ ಆ ಹೆಸರು ಹಾಗೆಯೇ ಉಳಿದುಬಿಡುತ್ತದೆ.
ಕೇವಲ ಕುಟುಂಬದ ಹೆಸರು ಮಾತ್ರವಲ್ಲ. ಹೆಚ್ಚಿನ ಎಲ್ಲಾ ಊರುಗಳ ಸ್ಥಳ ನಾಮಧೇಯದ ಹಿಂದೆಯೂ ಇದೇ ಕಾರಣಗಳು ಇರಬಹುದು. ರಾಜರುಗಳ ಕಾಲದಲ್ಲಿ ಸುಂಕ ಸಂಗ್ರಹವಾಗುತ್ತಿದ್ದ ಕಟ್ಟೆಯೊಂದು ‘ಸುಂಕದಕಟ್ಟೆ’ ಯಾಗಿ ಕರೆಸಲ್ಪಟ್ಟಿರುವುದು, ಬೃಹದಾಕಾರವಾಗಿ ಬೆಳೆದು ನಿಂತ ಮಾವಿನ ಮರಕ್ಕೆ ಕಟ್ಟೆ ಕಟ್ಟಿದ ಪರಿಣಾಮವಾಗಿ ಆ ಪರಿಸರದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳೂ ಮುಂದೆ ‘ಮಾವಿನಕಟ್ಟೆ’ ಎಂಬುದಾಗಿಯೇ ಕರೆಸಿಕೊಳ್ಳುವಂತಾಗುತ್ತದೆ. ಬೆಳ್ತಂಗಡಿ, ಉಪ್ಪಿನಂಗಡಿ…, ಹೀಗೆ ಎಲ್ಲಾ ಊರುಗಳ ಹೆಸರುಗಳಿಗೂ ಒಂದೊಂದು ಹಿನ್ನೆಲೆ ಇದ್ದೇ ಇರುತ್ತದೆ.
ಹೆಸರೆಂಬುದು ವ್ಯಕ್ತಿಯನ್ನಾಗಲೀ, ಸ್ಥಳವನ್ನಾಗಲೀ ಅಥವಾ ಇನ್ಯಾವುದೇ ವಸ್ತುವನ್ನಾಗಲೀ ಗುರುತಿಸಲು ಸಹಾಯ ಮಾಡುತ್ತದೆಯೇ ಹೊರತು ಅದರಲ್ಲಿ ಬೇರೆ ವಿಶೇಷತೆ ಏನೂ ಇಲ್ಲ. ತೊಟ್ಟಿಲಲ್ಲಿ ಪುಟ್ಟ ಕೈಕಾಲು ಬಡಿಯುವ ಹಸುಗೂಸಿಗೆ ಹೆಸರನ್ನಿಡುವ ಸಂದರ್ಭದಲ್ಲಿ ಆ ಕೂಸಿಗೆ ಏನೂ ತಿಳಿಯದು. ಆದರೆ ಪುಟ್ಟಪುಟ್ಟ ಹೆಜ್ಜೆಯನ್ನಿಕ್ಕುವಷ್ಟು ಬೆಳೆಯುವ ಹಂತದಲ್ಲಿ ಆ ಮಗುವಿಗೆ ತನ್ನ ಹೆಸರನ್ನೇ ಕರೆಯುವುದು ಎಂಬುದರ ಅರಿವಾಗುತ್ತದೆ. ಸ್ಥಳ ನಾಮಗಳ ಹಿನ್ನೆಲೆ ಕೆದಕಿದಾಗ, ಇತಿಹಾಸದ ಒಳಹೊಕ್ಕು ನೋಡಿದಾಗ ಆ ಸ್ಥಳಕ್ಕೆ ಆ ಹೆಸರು ಬರಲು ಕಾರಣ ಏನಿರಬಹುದು ಎಂಬುದು ಗೊತ್ತಾಗುತ್ತದೆ. ಆದರೆ ಆ ಸ್ಥಳದ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದಿದ್ದರೆ ಅದು ವ್ಯಕ್ತಿಗೆ ಇರಿಸಿದ ಹೆಸರಿನಂತೆ ಕೇವಲ ಹೆಸರಾಗಿ ಮಾತ್ರ ಉಳಿಯುತ್ತದೆ ಅಷ್ಟೇ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)








