ಹೋಬಾರ್ಟ್: ವಾಷಿಂಗ್ಟನ್ ಸುಂದರ್ (ಅಜೇಯ 49) ಬಿರುಸಿನ ಆಟದ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿದೆ. ಸರಣಿಯ ಮೊದಲ
ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.ಆಸೀಸ್ ಒಡ್ಡಿದ 187 ರನ್ಗಳ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ 18.3 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಭಾರತದ ಪರ ವಾಷಿಂಗ್ಟನ್ ಸುಂದರ್ ಕೇವಲ 23 ಎಸೆತಗಳಲ್ಲಿ 49* ರನ್ ಗಳಿಸಿ ಅಬ್ಬರಿಸಿದರು. ವಾಷಿಂಗ್ಟನ್ ಇನಿಂಗ್ಸ್ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಸೇರಿದ್ದವು.ಅಭಿಷೇಕ್ ಶರ್ಮಾ (25), ತಿಲಕ್ ವರ್ಮಾ (29) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (24) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ (22*) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಮೊದಲು ಟಿಮ್ ಡೇವಿಡ್ (74) ಹಾಗೂ ಮಾರ್ಕಸ್ ಸ್ಟೋಯಿನಿಸ್ (64) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡವು, ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 186 ರನ್ಗಳ ಬೃಹತ್ ಮೊತ್ತ ಪೇರಿಸಿತು.ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ತರಲಾಗಿತ್ತು.ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಹಾಗೂ ಜಿತೇಶ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗಾಗಿ ಹರ್ಷೀತ್ ರಾಣಾ, ಕುಲದೀಪ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ.















